ನೆಲಮಂಗಲ: ಕ್ಯಾಂಟರ್ ಲಾರಿ ಹಾಗೂ 407 ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಕುಲುವನಹಳ್ಳಿ ಗೇಟ್ ಬಳಿ ಭಾನುವಾರ ಸಂಜೆ 5:30ಕ್ಕೆ ಸಂಭವಿಸಿದೆ.
ಘಟನೆಯಲ್ಲಿ ಉತ್ತರ ಕರ್ನಾಟಕದ ಯಾದಗಿರಿ ಮೂಲದ ಹುಸೇನಪ್ಪ, ಶಂಕರಪ್ಪ ಹಾಗೂ ಸ್ಥಳೀಯ ಎಲೇಕ್ಯಾತನಹಳ್ಳಿಯ ಶಿವಣ್ಣ ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ 6 ಜನ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನ ನೆಲಮಂಗಲ ಮತ್ತು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
407 ಟೆಂಪೋದಲ್ಲಿ 10ಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳು ಇದ್ದವು. ಅಪಘಾತದಿಂದಾಗಿ ಮೂವರು ಸಾವನ್ನಪ್ಪಿ, ಆರು ಜನರ ಸ್ಥಿತಿ ಗಂಭೀರವಾಗಿದೆ. ಟೆಂಪೋದಲ್ಲಿದ್ದ ಸಾಮಗ್ರಿಗಳು ಹೆದ್ದಾರಿಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿವೆ, ಕ್ರೇನ್ ಮೂಲಕ ಡಿಕ್ಕಿಯಾದ ವಾಹನಗಳ ತೆರವು ಕಾರ್ಯ ನಡೆಯಿತು.
ರಾಷ್ಟ್ರೀಯ ಹೆದ್ದಾರಿ 48ರ ಕುಲುವನಹಳ್ಳಿ ಪಂಚಾಯತ್ ಮುಂಭಾಗದ ನಿಲ್ದಾಣದ ಬಳಿ ಇಳಿಜಾರು ಹೆಚ್ಚಿರುವುದರಿಂದ ಹಾಗೂ ವಾರಾಂತ್ಯದಲ್ಲಿ ಅಧಿಕ ವಾಹನ ದಟ್ಟಣೆ, ಅತಿಯಾದ ವೇಗ, ಹೆದ್ದಾರಿ ದುರಸ್ತಿಯಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಕಟ್ಟಡ ಕಾರ್ಮಿಕರು ಪ್ರಯಾಣಿಸುವ ವಾಹನಗಳ ಬಗ್ಗೆ ಆರ್.ಟಿ.ಒ ಇಲಾಖೆ ಮತ್ತು ಪೊಲೀಸ್ ಇಲಾಖೆ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಎಸ್ಪಿ ನಾಗೇಶ್ ಕುಮಾರ್, ನೆಲಮಂಗಲ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಜಗದೀಶ್, ಪಿಐಗಳಾದ ಶಶಿಧರ್, ರಾಜೀವ್, ಸಂಚಾರ ಠಾಣೆಯ ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಉಪ್ಪಿನಂಗಡಿ ಬಳಿ ಕಂಟೈನರ್ ಲಾರಿ ಮಗುಚಿ ಬಿದ್ದು ಅಪ್ಪಚ್ಚಿಯಾದ ಕಾರು: ಐವರ ಜೀವ ಉಳಿಸಿದ 'ವಾಂತಿ'! - LORRY FALLS ON CAR