ಬೆಂಗಳೂರು : ನಗರದಲ್ಲಿ ಮಾಲೀಕನ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿದ್ದ ನೇಪಾಳ ಮೂಲದ ಗ್ಯಾಂಗ್‌ನ ಮೂವರು ಆರೋಪಿಗಳನ್ನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್, ಜಗದೀಶ್ ಹಾಗೂ ಅಫಿಲ್ ಬಂಧಿತ ಆರೋಪಿಗಳು.
ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಅವರ ಜಯನಗರದ 3ನೇ ಬ್ಲಾಕ್‌ನಲ್ಲಿರುವ ಮನೆಯಲ್ಲಿ ಅಕ್ಟೋಬರ್ 21ರಂದು ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಲ್ಲೇಶ್ವರಂನಲ್ಲಿರುವ ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಅವರ ಮನೆಯಲ್ಲಿ 2 ವರ್ಷಗಳಿಂದಲೂ ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ದಂಪತಿ ಕೆಲಸ ಮಾಡಿಕೊಂಡಿದ್ದರು. ಅಕ್ಟೋಬರ್ 20ರಂದು ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದಿದ್ದರಿಂದ ನಾಗೇಶ್ ಅವರನ್ನ ಹೊರತುಪಡಿಸಿ ಮನೆಯವರೆಲ್ಲರೂ ತೆರಳಿದ್ದರು.
ಮನೆಯಲ್ಲಿ ಒಂಟಿಯಾಗಿದ್ದ ನಾಗೇಶ್, ಮದ್ಯಪಾನ ಮಾಡುವಾಗ ಆರೋಪಿ ದಂಪತಿ ಪ್ರಜ್ಞೆ ತಪ್ಪಿಸುವ ಔಷಧ ಬೆರೆಸಿ ಕುಡಿಸಿದ್ದರು. ಬಳಿಕ ಉಳಿದ ಆರೋಪಿಗಳ ನೆರವಿನಿಂದ ಮನೆಯಲ್ಲಿದ್ದ 2.5 ಕೆಜಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸೇರಿದಂತೆ 5 ಲಕ್ಷ ರೂಪಾಯಿ ನಗದು ಕದ್ದು ಪರಾರಿಯಾಗಿದ್ದರು.
ಆರೋಪಿ ದಂಪತಿ ನಾಪತ್ತೆ : ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್ ನೆಟ್‌ವರ್ಕ್ ಆಧರಿಸಿ ಹೈದರಾಬಾದ್, ಮುಂಬೈ, ಗುಜರಾತ್‌ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.12 ಕೋಟಿ ಮೌಲ್ಯದ 1.6 ಕೆಜಿ ಚಿನ್ನಾಭರಣ, 450 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನಿಬ್ಬರು ಆರೋಪಿ ದಂಪತಿ ನಾಪತ್ತೆಯಾಗಿದ್ದು, ಅವರ ಪತ್ತೆಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಚಿನ್ನದ ವ್ಯಾಪಾರಿ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ನಗದು, ಚಿನ್ನಾಭರಣ ಸೇರಿದಂತೆ ಬರೋಬ್ಬರಿ 15.15 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕ ಸುರೇಂದ್ರ ಕುಮಾರ್ ಜೈನ್ ಅವರು ತಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ದೂರು ನೀಡಿದ್ದರು. ತಮ್ಮ ಜ್ಯುವೆಲ್ಲರಿ ಸೆಕ್ಯುರಿಟಿ ಕೆಲಸಕ್ಕಿದ್ದ ನೇಪಾಳ ಮೂಲದ ನಮ್ರಾಜ್ ಎಂಬಾತನ ವಿರುದ್ಧ ವಿಜಯನಗರ ಠಾಣೆಯಲ್ಲಿ ಅವರು ದೂರು ನೀಡಿದ್ದ, ಪ್ರಕರಣ ದಾಖಲಾಗಿದೆ.
ಸುರೇಂದ್ರ ಕುಮಾರ್ ಜೈನ್ ಅವರ ಅರಿಹಂತ್ ಜ್ಯುವೆಲ್ಲರ್ಸ್ ಶಾಪ್ನಲ್ಲಿ ನೇಪಾಳ ಮೂಲದ ನಮ್ರಾಜ್ 6 ತಿಂಗಳಿನಿಂದ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಉಳಿದುಕೊಳ್ಳಲು ಮನೆ ವ್ಯವಸ್ಥೆ ಇರದ ನಮ್ರಾಜ್ನಿಗೆ ಸುರೇಂದ್ರ ಕುಮಾರ್ ಜೈನ್ ತಮ್ಮದೇ ಮನೆಯಲ್ಲಿ ಒಂದು ರೂಮ್ ಸಹ ನೀಡಿದ್ದರು. ಜೈನ್ ಕುಟುಂಬಸ್ಥರು ಊರಿಗೆ ಹೋದಾಗ ಆರೋಪಿ ಮನೆಗೆ ಕನ್ನ ಹಾಕಿ ಪರಾರಿ ಆಗಿದ್ದಾನೆ. ಈ ಕುರಿತಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿಯನ್ನೂ ಓದಿ : ಬೆಂಗಳೂರು: ಭದ್ರತೆಗಿದ್ದ ಸೆಕ್ಯೂರಿಟಿ ಗಾರ್ಡ್ನಿಂದಲೇ 15 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ!