ರಾಯಚೂರು: "ಸಂಸದ ಅನಂತ ಕುಮಾರ್ ಹೆಗಡೆ ಒಬ್ಬ ಮೂರ್ಖ. ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಸಂಸದನನ್ನು ಆ ಕ್ಷೇತ್ರ ಜನ ಹೇಗೆ ಗೆಲ್ಲಿಸಿದ್ದಾರೋ ಗೊತ್ತಿಲ್ಲ" ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿಲು ಬಂದಿದ್ದ ಸಚಿವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
"ಸಂವಿಧಾನ ಇರುವುದಕ್ಕೆ ನಾನು ಶಾಸಕನಾಗಿ, ಮಂತ್ರಿಯಾಗಿದ್ದೇನೆ. ಪ್ರಧಾನಿ ಮೋದಿ ಅವರು ಸಹ ಸಂವಿಧಾನದಿಂದಲೇ ನಾನು ಪ್ರಧಾನಿಯಾಗಿದ್ದೇನೆ ಅಂತ ಹೇಳುತ್ತಾರೆ. ಆದರೆ, ಅವರ ಪಕ್ಷದ ಸಂಸದ ಗೆದ್ದು ಬಂದ ಕೂಡಲೇ ಸಂವಿಧಾನ ಬದಲಿಸುತ್ತೇವೆ ಅಂತಾರೆ. ಸಂವಿಧಾನವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಮೂರ್ಖರು ಎಷ್ಟು ಹೇಳಿದರು ಬದಲಾಗಲ್ಲ" ಎಂದರು.
ಸಂವಿಧಾನ ಬದಲಾದರೆ ರಕ್ತಪಾತವಾಗುತ್ತೆ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಸಂವಿಧಾನ ಇಲ್ಲದಿದ್ದರೆ ನೂರಕ್ಕೆ ನೂರರಷ್ಟು ರಕ್ತಪಾತವಾಗುತ್ತದೆ. ಸಂವಿಧಾನ ಬಿಟ್ಟು ನಡೆದುಕೊಳ್ಳುವುದಾದರೆ ನಮಗೆ ವಾಕ್ ಸ್ವಾತಂತ್ರ್ಯವೂ ಇರಲ್ಲ" ಎಂದರು.
"ನಾನು ಚಿಕ್ಕಂದಿನಿಂದಲೂ ರಾಯರ ಮಠಕ್ಕೆ ಬರೋದು ವಾಡಿಕೆ. ನಾನು ಮಠದ ಭಕ್ತನಾಗಿದ್ದು, ಇಲ್ಲಿ ಏನ್ ಕೇಳಿಕೊಂಡರೂ, ಒಳ್ಳೆಯದೇ ಆಗುತ್ತದೆ. ಇವತ್ತು ನನ್ನ ಧರ್ಮಪತ್ನಿ ಮಂಜುಶ್ರೀ ಸಮೇತ ಬಂದಿದ್ದೇನೆ. ರಾಜ್ಯದ ಜನಕ್ಕೆ ಒಳ್ಳೆಯದಾಗಬೇಕು. ಈ ಬಾರಿ ಒಳ್ಳೆಯ ಮಳೆಯಾಗಬೇಕು ಎಂದು ಪ್ರಾರ್ಥಿಸಿದ್ದೇನೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ವಾತಾವರಣವಿದೆ."
"ಸರ್ಕಾರ ಬರುವ ಮುನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದೆವು. ಆ ಗ್ಯಾರಂಟಿಗಳು ಜನರ ಮಧ್ಯೆ ಓಡಾಡುತ್ತಿವೆ. ಗ್ಯಾರಂಟಿಗಳನ್ನು ತೆಗದುಕೊಂಡ ಜನರು ಸುಖ ಶಾಂತಿಯಿಂದ ಇದ್ದಾರೆ. ಸರ್ಕಾರಕ್ಕೆ ಒಳ್ಳೆಯದಾಗಬೇಕು ಎಂದು ಜನರು ಆಶೀರ್ವಾದ ಮಾಡುತ್ತಿದ್ದಾರೆ. ನಮಗೆ ಬಹಳ ದೊಡ್ಡ ನಂಬಿಕೆಯಿದೆ. ಗ್ಯಾರಂಟಿಗಳನ್ನು ಮನದಲ್ಲಿಟ್ಟುಕೊಂಡು ಜನ ಮತ ಹಾಕುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಂದುವರಿಸಿಕೊಂಡು ಹೋಗುತ್ತಿರುವ ನಮ್ಮದು ಡಬಲ್ ಇಂಜಿನ್ ಸರ್ಕಾರವಾಗಿದೆ. ಜನರಿಗೆ ತೊಂದರೆ ಆಗದಂತೆ, ಭ್ರಷ್ಟಾಚಾರ ನಡೆಯದಂತೆ ನಾವು ಅಧಿಕಾರ ಮಾಡಿಕೊಂಡು ಹೋಗುತ್ತಿದ್ದೇವೆ. ಬಳ್ಳಾರಿಯಿಂದ ಕಾಂಗ್ರೆಸ್ ಅಭ್ಯರ್ಥಿ ಲೋಕಸಭೆಗೆ ಆಯ್ಕೆ ಆಗುತ್ತಾರೆ. ರಾಯರ ಮಠದಲ್ಲಿ ನಿಂತು ನಾನು ಹೇಳುತ್ತಿದ್ದೇನೆ ನೂರಕ್ಕೆ ನೂರು ನಮ್ಮ ಸರ್ಕಾರ ಗೆಲ್ಲುತ್ತದೆ. ನಾನು ಗೆದ್ದು ಶಾಸಕನಾಗಿ ಮಂತ್ರಿಯಾಗಿದ್ದೀನಿ. ಅದರಲ್ಲೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೀನಿ. ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ. ಅಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಸಹೋದರ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ನನ್ನ ಸಹೋದರ ಅಂತಲ್ಲ, ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಪಕ್ಷದಿಂದ ಸಂಸದರಾಗುತ್ತಾರೆ. ಇವತ್ತು ರಾಯರ ಆಶೀರ್ವಾದ ಪಡೆದಿದ್ದೇನೆ. ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ, ನಮ್ಮ ಅಭ್ಯರ್ಥಿಯ ಗೆಲುವು ಮಾತ್ರ ನಿಶ್ಚಿತ. ಅಭ್ಯರ್ಥಿಗಳ ಕೊರತೆಯಂತೂ ಎಲ್ಲೂ ಇಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಇಂದು ಸಂಜೆ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ: ಉಡುಪಿ-ಚಿಕ್ಕಮಗಳೂರು ಕೈ ಟಿಕೆಟ್ ಬಹುತೇಕ ಫಿಕ್ಸ್