ಉಡುಪಿ: ಬಬ್ಬು ಸ್ವಾಮಿ ದೈವದ ಕಾರ್ಣಿಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಾಣಿಕೆ ಡಬ್ಬಿ ಕದ್ದ ಕಳ್ಳನನ್ನು ದೈವ 24 ಗಂಟೆಯೊಳಗೆ ಹುಡುಕಿಕೊಟ್ಟ
ಅಚ್ಚರಿಯ ಘಟನೆ ಉಡುಪಿಯಲ್ಲಿ ನಡೆದಿದೆ. ಚಿಟ್ಪಾಡಿ ಕಸ್ತೂರಬಾ ನಗರದ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಜು.4 ರ ಮಧ್ಯರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳನೊಬ್ಬ ಕಳ್ಳತನ ಮಾಡಿದ್ದನು. ಜು.5 ರಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು.
ಸಾಮೂಹಿಕ ಪ್ರಾರ್ಥನೆ: ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನಿಸಿದ್ದರು. ಮಾತ್ರವಲ್ಲದೆ, ಊರಿನ ಸಂಕಷ್ಟ ಬಗೆಹರಿಸುವ ದೈವದ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಭಕ್ತರ ಪ್ರಾರ್ಥನೆಯಿಂದ ಕಳ್ಳನನ್ನು 24 ಗಂಟೆಯೊಳಗೆ ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಅಚ್ಚರಿ ಎಂಬಂತೆ ಜು. 6ರಂದು ಬೆಳಗ್ಗೆ ಕಳ್ಳ ಸಿಕ್ಕಿದ್ದಾನೆ.
ಕಳ್ಳ ಸಿಕ್ಕಿದ್ದೇಗೆ ?: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳ ಮಲಗಿರೋದು ಗೊತ್ತಾಗಿದೆ. ಬಸ್ ನಿಲ್ದಾಣ ಪರಿಸರದಲ್ಲಿ ಆಟೋ ಚಾಲಕರು ಕಳ್ಳನ ಗುರುತು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಕಾಣಿಕೆ ಡಬ್ಬಿ ಕದ್ದಿದ್ದ ಬಾಗಲಕೋಟೆ ಮೂಲದ ಮುದುಕಪ್ಪ ಸಿಕ್ಕಿಬಿದ್ದಿದ್ದಾನೆ. ಬಾಗಲಕೋಟೆಗೆ ಹೋಗಬೇಕಾಗಿದ್ದ ಈತ ಬಸ್ ನಿಲ್ದಾಣದಲ್ಲಿಯೇ ಬೆಳಗ್ಗೆ ಎಂಟು ಗಂಟೆಯಾದರೂ ನಿದ್ದೆ ಮಂಪರಿನಲ್ಲಿ ಮಲಗಿದ್ದ. ಮುದುಕಪ್ಪ ದೈವಸ್ಥಾನಗಳಲ್ಲಿ ಕಳ್ಳತನ ಮಾಡುವ ಚಾಳಿಯನ್ನು ಹೊಂದಿದ್ದನು. ಚಿಟ್ಟಾಡಿಯ ನಂತರ ಉದ್ಯಾವರ ಪರಿಸರದಲ್ಲೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಭಕ್ತರು ಬಬ್ಬು ಸ್ವಾಮಿ ದೈವದ ಕಾರ್ಣಿಕಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ಅಣ್ಣಪ್ಪ ಪಂಜುರ್ಲಿ ದೈವದ ಮೊರೆ ಹೋದ ಪಾಕಿಸ್ತಾನ ಮೂಲದ ಕುಟುಂಬ - PAKISTAN BASED FAMILY