ಬೆಂಗಳೂರು: ರಾಜ್ಯದಲ್ಲಿ ಮುಂದೆ ಜೆಡಿಎಸ್ ಪಕ್ಷ ಇರುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು. ನಗರದ ಕಾಂಗ್ರೆಸ್ ಭಾರತ್ ಜೋಡೋ ಸಭಾಂಗಣದಲ್ಲಿ ಇಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರದಲ್ಲಿ ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ಗೊತ್ತಾಗಿದೆ. ಹಾಗಾದರೆ ಕುಮಾರಸ್ವಾಮಿಯನ್ನು ಕೆಳಗಿಳಿಸುವಾಗ ಎಲ್ಲಿ ಹೋಗಿತ್ತು ಜಾತಿ?. ಕಾಂಗ್ರೆಸ್ ಪಕ್ಷ ಒಕ್ಕಲಿಗರಿಗೆ ಹೆಚ್ಚು ಸೀಟ್ ಕೊಟ್ಟಿದೆ. ದಳದವರು ಕೇವಲ ಕುಟುಂಬದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಯಾರು ಸರ್ಕಾರ ಕಿತ್ತು ಹಾಕಿದ್ರೋ ಅವರ ಜತೆಗೆ ನಂಟಸ್ತಿಕೆ ಮಾಡಿಕೊಂಡಿದ್ದಾರೆ. ಎಂತಹ ನೀಚ ರಾಜಕೀಯ ನಡೆಯುತ್ತಿದೆ ಅಂತಾ ಜೆಡಿಎಸ್ ಕಾರ್ಯಕರ್ತರು ಬೇಸರಗೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
'ಹಸ್ತ' ಎನ್ನುವುದು ಕೇವಲ ಗುರುತಲ್ಲ. ಇದು ರೈತರ ನೇಗಿಲು ಹಿಡಿಯುವ ಹಸ್ತ. ಕಾರ್ಮಿಕರ ಶ್ರಮದ ಹಸ್ತ. ಮಹಿಳೆಯರ ಶಕ್ತಿಯ ಹಸ್ತ. ಯುವಕರ ಭವಿಷ್ಯದ ಹಸ್ತ. ಹಸ್ತ ಈ ದೇಶ ಮತ್ತು ಜನರ ಶಕ್ತಿ. ಕಾಂಗ್ರೆಸ್ ಎಂದರೆ ಹಲವು ನದಿಗಳ ಸಂಗಮ. ಕಾಂಗ್ರೆಸ್ ಪಕ್ಷ ಪವಿತ್ರವಾದ ದೇವಸ್ಥಾನ. ನಾವೆಲ್ಲಾ ಈ ದೇಶವನ್ನು ಕಾಪಾಡಲು ಈ ದೇವಸ್ಥಾನದಲ್ಲಿ ಸೇರಿದ್ದೇವೆ. ನೀವು ಈಶ್ವರ, ವೆಂಕಟೇಶ್ವರ ಹೀಗೆ ಯಾವುದೇ ದೇವಸ್ಥಾನಕ್ಕೆ ಹೋದರೂ ದೇವರು ಆಶೀರ್ವಾದ ಮಾಡುವುದು ಈ ಹಸ್ತದಿಂದ. ಕಾಂಗ್ರೆಸ್ ಪಕ್ಷ ಸೇರಿದ ನಂತರ ಹಳಬರು, ಹೊಸಬರು ಎನ್ನುವ ತಾರತಮ್ಯ ನಮ್ಮಲ್ಲಿಲ್ಲ. 50 ವರ್ಷ ಪಕ್ಷ ಕಟ್ಟಿರುವವರು ಮತ್ತು ಹೊಸಬರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನಾವು, ನೀವು ಎಲ್ಲರೂ ಸೇರಿ ಮಾಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಹೋಗಬೇಕು ಎಂದು ಕರೆ ನೀಡಿದರು.
ಇಡೀ ದೇಶದಲ್ಲೇ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿಯವರಿಗೆ ತಾವು ಗೆಲ್ಲುವುದಿಲ್ಲ ಎನ್ನುವುದು ಅರ್ಥವಾಗಿದೆ. ಇದಕ್ಕಾಗಿ 12 ಅಭ್ಯರ್ಥಿಗಳನ್ನು ಬದಲಾಯಿಸಿದ್ದಾರೆ. ಆಪರೇಷನ್ ಕಮಲ ಮಾಡಿ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದವರ ಜತೆಗೆ ಈಗ ನೆಂಟಸ್ಥನ ಮಾಡಿಕೊಂಡಿದ್ದಾರೆ. ಒಕ್ಕಲಿಗರಿಗೆ ಬಿಜೆಪಿ, ಜೆಡಿಎಸ್ ಎರಡೂ ಮಾನ್ಯತೆ ನೀಡಿಲ್ಲ. ಒಂದೇ ಕುಟುಂಬದ ಮೂರು ಮಂದಿ ದಳ ಮತ್ತು ಬಿಜೆಪಿಯಿಂದ ಚುನಾವಣೆ ಎದುರಿಸುತ್ತಿದ್ದಾರೆ. ಭವಿಷ್ಯದಲ್ಲಿ ದಳ ಎಲ್ಲಿರುತ್ತದೆ ಗೊತ್ತಿಲ್ಲ. ದೇವೇಗೌಡರು ತಮ್ಮ ಅಳಿಯನನ್ನೇ ಬಿಜೆಪಿಯಿಂದ ನಿಲ್ಲಿಸಿದ ಮೇಲೆ ದಳದ ಚಿಹ್ನೆ ಮತ್ತು ಆ ಪಕ್ಷಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದರು.
ಕಾಂಗ್ರೆಸ್ ಸೇರಿದ ಜೆಡಿಎಸ್ ನಾಯಕರು: ಚಿಕ್ಕಬಳ್ಳಾಪುರದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಶಿಡ್ಲಘಟ್ಟದ ನಾಯಕ ಪುಟ್ಟ ಆಂಜನಪ್ಪ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಹಲವಾರು ಬಿಜೆಪಿ ಹಾಗು ಜೆಡಿಎಸ್ ಮುಖಂಡರು ಬೆಂಬಲಿಗರ ಜತೆ ಕಾಂಗ್ರೆಸ್ ಸೇರ್ಪಡೆಗೊಂಡರು.
ಇದೇ ವೇಳೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ಅವರ ಮಗ ಕೂಡ ಪಕ್ಷ ಸೇರಲು ಮುಂದೆ ಬಂದಿದ್ದಾರೆ. ಸಾಕಷ್ಟು ಅಲ್ಪಸಂಖ್ಯಾತರು, ಒಕ್ಕಲಿಗ ನಾಯಕರು ಸೇರಿದಂತೆ ಎಲ್ಲಾ ವರ್ಗಗಳ ಜನರು ಪಕ್ಷ ಸೇರಲು ಮುಂದೆ ಬರುತ್ತಿದ್ದಾರೆ. ಎರಡು ಪಕ್ಷಗಳ ಮೇಲೆ ಜನರಿಗೆ ಬೇಸರ ಉಂಟಾಗಿದೆ. ಕಾಂಗ್ರೆಸ್ ಪಕ್ಷವೇ ಈ ದೇಶದ ಸಮಸ್ಯೆಗಳಿಗೆ ಪರಿಹಾರ ಎಂದು ನಂಬಿ ಪಕ್ಷಕ್ಕೆ ಸೇರ್ಪಡೆ ಆಗಿರುವ ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡರು ಮತ್ತು ಶಿಡ್ಲಘಟ್ಟದ ಪುಟ್ಟ ಆಂಜನಪ್ಪ ಅವರನ್ನು ನಾನು ತುಂಬು ಹೃದಯದಿಂದ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಜೆಡಿಎಸ್ ಪಕ್ಷದ ಮಾಜಿ ಶಾಸಕರು, ಕಾರ್ಯಕರ್ತರು ಸೂಕ್ತ ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಪಕ್ಷ ಸೇರಿದಂತೆ ಕಾರ್ಯಕರ್ತರು ಸಹ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಅಮಿತ್ ಶಾ ಕರೆ ಮಾಡಿದ್ದರು, ಕೆಲ ಕಂಡಿಷನ್ ಮೇಲೆ ನಾಳೆ ದೆಹಲಿಗೆ ಹೊರಟಿದ್ದೇನೆ: ಕೆ ಎಸ್ ಈಶ್ವರಪ್ಪ - KS ESHWARAPPA