ಶಿವಮೊಗ್ಗ: ಬಿಜೆಪಿ ಕಾಲದಲ್ಲಿ 25 ರಿಂದ 30 ಹಗರಣ ನಡೆದಿದ್ದು, ತನಿಖೆ ಮಾಡಿದರೆ ಇವರು ಹೋಲ್ಸೇಲ್ ಆಗಿ ಜೈಲಿಗೆ ಹೋಗುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ವೇಳೆ ಎರಡು ಸಾವಿರ ಕೋಟಿ ಹಗರಣ ಆಗಿದೆ. ಯಡಿಯೂರಪ್ಪ, ಸುಧಾಕರ್ ಹಗರಣ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾರಿಷಸ್ಗೆ 10 ಸಾವಿರ ಕೋಟಿ ರೂ. ತೆಗೆದುಕೊಂಡು ಹೋಗಿದ್ದಾರೆ ಎಂದು ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಬಿಜೆಪಿಯವರು ಮೊದಲು ಈ ಆರೋಪಕ್ಕೆ ಉತ್ತರ ಕೊಡಲಿ. ನಾವು ಸಹ ಹೋರಾಟ ಮಾಡುತ್ತೇವೆ. ನ್ಯಾಯಾಂಗ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಮೈಸೂರಿನ ಮುಡಾ ಹಗರಣ ಸಂಬಂಧ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಹಗರಣ ಮಾಡಿಲ್ಲ. ಬಿಜೆಪಿಯವರು ವಿನಾಃ ಕಾರಣ ಹೋರಾಟ ಮಾಡುತ್ತಿದ್ದಾರೆ. 40 ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ದೇವರಾಜ್ ಅರಸು ನಂತರ ಒಬಿಸಿ ಸಮುದಾಯದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಬಿಜೆಪಿಯವರಿಗೆ ಇದನ್ನು ಸಹಿಸಲಾಗುತ್ತಿಲ್ಲ. ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮುಡಾ ಹಗರಣ ನಡೆದಾಗ ಬಿಜೆಪಿಯವರೇ ಅಧ್ಯಕ್ಷರಾಗಿದ್ದರು. ಅವರ ಪಕ್ಷದ ಶಾಸಕರೇ ಇದ್ದರು. ಮುರುಗೇಶ ನಿರಾಣಿ, ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಆ ಪ್ರಕರಣ ಏನಾಯಿತು ಎಂದು ಪ್ರಶ್ನಿಸಿದರು.
ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ಕುರಿತು ಪ್ರತಿಕ್ರಿಯಿಸಿ, ವಿಎಸ್ ಐಎಲ್ ಕಾರ್ಖಾನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲ್ಲವೂ ಸರಿ ಹೋಗುವ ನಿರೀಕ್ಷೆಯಿದೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣ ತಾಂತ್ರಿಕ ಸಮಸ್ಯೆ ಬಗ್ಗೆ ಮಾತನಾಡಿ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಸಿಬಿಲಿಟಿ ಕೊರತೆಯಿಂದಾಗಿ ಶಿವಮೊಗ್ಗ ಏರ್‌ಪೋರ್ಟ್ ನಲ್ಲಿ ವಿಮಾನಗಳ ಹಾರಾಟ ರದ್ದಾಗುತ್ತಿವೆ. ನನಗಿರುವ ಮಾಹಿತಿ ಪ್ರಕಾರ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕ್ ಆಫ್ಗೆ ವಿಸಿಬಿಲಿಟಿಯ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ತಾಂತ್ರಿಕ ತಜ್ಞರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ವಿಸಿಬಿಲಿಟಿಯ ಸಮಸ್ಯೆ ಕೇವಲ ಶಿವಮೊಗ್ಗ ಏರ್ ಪೋರ್ಟ್ನಲ್ಲಿ ಮಾತ್ರವಲ್ಲ, ದೇಶದ ಉಳಿದ ಏರ್ಪೋರ್ಟ್ಗಳಲ್ಲೂ ಇದೇ ರೀತಿಯ ಸಮಸ್ಯೆ ಇದೆ. ವಿಸಿಬಿಲಿಟಿ ಸಮಸ್ಯೆ ಇದ್ದಾಗ ರಿಸ್ಕ್ ತೆಗೆದುಕೊಂಡು ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಮಾಡಲಾಗುವುದಿಲ್ಲ. ಕೆಲವೊಂದು ತಾಂತ್ರಿಕ ಸಲಕರಣೆಗಳ ಅಗತ್ಯವಿದೆ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಭದ್ರಾವತಿಯ ಎಂಪಿಎಂ ಕಾರ್ಖಾನೆ ಪುನರಾರಂಭ ಕುರಿತು ಮಾತನಾಡಿ, ಎಂಪಿಎಂ ಕಾರ್ಖಾನೆ ಕುರಿತು ನಾನು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆ ಚರ್ಚಿಸಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆಯನ್ನು ಸರ್ಕಾರ ನಿರ್ವಹಿಸಲು ಆಗುವುದಿಲ್ಲ. ಅದಕ್ಕಾಗಿ ಖಾಸಗಿಯವರ ಪಾಲುದಾರಿಕೆ ಅಗತ್ಯವಿದೆ. ರಾಜ್ಯದಲ್ಲಿ ನೀಲಗಿರಿ ಮತ್ತು ಅಕೇಶಿಯಾ ಗಿಡ ಬೆಳೆಸಲು ನಿಷೇಧ ಇದೆ. ಹಾಗಾಗಿ ಕಾರ್ಖಾನೆಯನ್ನು ವಹಿಸಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ನಾವು ಹಾಲಿ ಕಾರ್ಖಾನೆಯ ಹೆಸರಿನಲ್ಲಿರುವ 30,000 ಹೆಕ್ಟೇರ್ ಪ್ರದೇಶದಲ್ಲಿರುವ ಅಕೇಶಿಯಾ ಮತ್ತು ನೀಲಗಿರಿ ಬಳಸಿಕೊಳ್ಳಲು ಅರಣ್ಯ ಇಲಾಖೆಯ ಅನುಮತಿ ಕೇಳಿದ್ದೇವೆ. ಕಾರ್ಖಾನೆಯ ಪುನರಾರಂಭದ ಸಂಬಂಧ ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನೀಲಗಿರಿ ಮತ್ತು ಅಕೇಶಿಯಾ ಬೆಳಸಿ ಕಾರ್ಖಾನೆಯನ್ನು ಆರಂಭಿಸಿ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಇದನ್ನು ಬೆಳೆಸುವುದರಿಂದ ಅಂತರ್ಜಲ ಕುಸಿತವಾಗುತ್ತದೆ ಎಂದು ಹೇಳುತ್ತಿದ್ದಾರೆ. ಈ ವಿಷಯದಲ್ಲಿ ನಮ್ಮ ಇಲಾಖೆಗಿಂತ ಅರಣ್ಯ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದೆ. ಅವರು ಸೂಕ್ತ ನಿರ್ಧಾರ ಕೈಗೊಂಡು ತಿಳಿಸುವುದಾಗಿ ಹೇಳಿದ್ದಾರೆ ಎಂದರು.