ಮಂಗಳೂರು : ಹೊಸ ವರುಷವಾಗಿ ಆಚರಿಸುವ ಯುಗಾದಿ ಆಚರಣೆ ನಾಡಿನೆಲ್ಲೆಡೆ ಸಂಭ್ರಮದಿಂದ ನಡೆದರೆ, ಕರಾವಳಿಯ ತುಳುನಾಡಿನಲ್ಲಿ ಈ ಆಚರಣೆ ಇಂದು ನಡೆಯುವುದಿಲ್ಲ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊಂಕಣಿ, ವಿಶ್ವಕರ್ಮ ಸಮುದಾಯದವರು ಮಾತ್ರ ಯುಗಾದಿಯನ್ನು ಇಂದು ಆಚರಿಸುತ್ತಾರೆ. ಉಳಿದಂತೆ ಹೆಚ್ಚಿನ ಎಲ್ಲ ತುಳುವರು ಸೌರಮಾನ ಯುಗಾದಿಯಂದು ಬಿಸು ಪರ್ಬವನ್ನು ಆಚರಿಸುತ್ತಾರೆ.
ಚಾಂದ್ರಮಾನ ಯುಗಾದಿಗೆ ಎಲ್ಲ ಕಡೆ ಬೇವು ಬೆಲ್ಲದ ಜೊತೆಗೆ ಸಂಭ್ರಮ ಮನೆ ಮಾಡಿದರೆ, ತುಳುನಾಡಿನಲ್ಲಿ ನಡೆಯುವ ಬಿಸು ಪರ್ಬದಲ್ಲಿ ಕೃಷಿ ಪದ್ಧತಿಯನ್ನು ಬಿಂಬಿಸುವ ಆಚರಣೆ ನಡೆಯುತ್ತದೆ. ಪಗ್ಗು ತಿಂಗಳು (ಏಪ್ರಿಲ್ ಮಧ್ಯದಿಂದ ಮೇ ಮಧ್ಯದವರೆಗೆ) ತುಳುವರಿಗೆ ವರ್ಷ ಪ್ರಾರಂಭದ ಮೊದಲ ತಿಂಗಳು. ಅಂದರೆ ಮೀನ ಮಾಸ ಮುಗಿದು ಮೇಷ ಮಾಸದ ಸಂಕ್ರಮಣಕ್ಕೆ ಹೊಸ ವರ್ಷ ಆಚರಣೆ. ಈ ಸಂಕ್ರಮಣವು ಸಾಮಾನ್ಯವಾಗಿ ವರ್ಷಂಪ್ರತಿ ಏಪ್ರಿಲ್ ತಿಂಗಳ 14ರಂದು ಬರುತ್ತದೆ. ಮೇಷ ಸಂಕ್ರಮಣದ ಮರುದಿನ ಅಂದರೆ 'ಸಿಂಗೊಡೆ'ಯನ್ನು ತುಳುವರು ವರ್ಷದ ಮೊದಲ ದಿನ 'ಬಿಸು ಪರ್ಬ' ಎಂದು ಆಚರಿಸುತ್ತಾರೆ. 'ಬಿಸು ಪರ್ಬ' ಎಂದರೆ ಸೌರಮಾನ ಯುಗಾದಿ ಎಂದರ್ಥ. ಈ ದಿನವೇ ತುಳುವರಿಗೆ ವರ್ಷಾರಂಭದ ದಿನ.
ತುಳುವರು ಮೂಲತಃ ಕೃಷಿಕರು. ಆದ್ದರಿಂದ ಅವರ ಎಲ್ಲ ಹಬ್ಬಗಳು ಒಂದಿಲ್ಲೊಂದು ರೀತಿ ಕೃಷಿ ಸಂಸ್ಕೃತಿ ಹಾಸುಹೊಕ್ಕಿದೆ. ಬಿಸು ಪರ್ಬದಲ್ಲೂ ಕಣಿ ಇಡುವುದು, ಬುಳೆ ಕಾಣಿಕೆ ಒಪ್ಪಿಸುವುದು, ಎಣೇಲು ಬೇಸಾಯಕ್ಕೆ ಮುಹೂರ್ತ 'ಕೈ ಬಿತ್ ಹಾಕುವುದು' ಮುಂತಾದ ಆಚರಣೆ ಇದೆ. ಇವೆಲ್ಲದರಲ್ಲಿ ನಾವು ಕೃಷಿ ಪ್ರಾಧಾನ್ಯತೆ ಕಾಣಬಹುದು.
ಬಿಸು ಕಣಿ ಇಡುವುದು : ಬಿಸು ಹಬ್ಬದಂದು ಬೆಳಗ್ಗೆ ಬೇಗನೇ ಎದ್ದು ಇಲ್ಲವೇ ಅದರ ಮುನ್ನಾ ದಿನವೇ ಮನೆಯ ಯಜಮಾನ ಅನುಕೂಲಕ್ಕೆ ತಕ್ಕಂತೆ ದೈವಸ್ಥಾನ, ದೇವರು ಅಥವಾ ತುಳಸಿಕಟ್ಟೆಯ ಎದುರು ಎರಡು ಜೋಡಿ ಬಾಳೆ ಎಲೆಯಲ್ಲಿ ಒಂದು ಮಣೆ ಇಡುತ್ತಾನೆ. ಅದರ ಮೇಲೆ ದೀಪವಿಟ್ಟು ಅದರ ಎಡ ಬಲಗಳಲ್ಲಿ ಹೂವು, ಅಕ್ಕಿ, ಹಣ್ಣು, ತರಕಾರಿ, ತೆಂಗಿನಕಾಯಿ ಇಟ್ಟು ಅದರ ಮಧ್ಯಭಾಗದಲ್ಲಿ ಕನ್ನಡಿ ಇಡುತ್ತಾನೆ. ಬಿಸು ಹಬ್ಬದಂದು ಬೆಳಗ್ಗೆ ಬೇಗ ಎದ್ದು ಮನೆಮಂದಿಯೆಲ್ಲ ಮಿಂದು ಶುಚಿಯಾಗಿ ಕನ್ನಡಿಯಲ್ಲಿ ಮುಖ ನೋಡಿ ಬಿಸುಕಣಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.
ಪಗ್ಗು ತಿಂಗಳೆಂದರೆ ಗಿಡ-ಮರಗಳಲ್ಲಿ ಫಲಗಳು ಯಥೇಚ್ಛವಾಗಿ ಬೆಳೆದಿರುತ್ತವೆ. ಅಲ್ಲದೇ ಬಿಸು ಕಣಿಗೆ ಅರ್ಪಿಸದೆ ಹೊಸ ಫಲವನ್ನು ತಿನ್ನಬಾರದೆಂಬ ನಂಬಿಕೆ ತುಳುವರಲ್ಲಿ ರೂಢಿಯಲ್ಲಿದೆ. ಬಿಸು ಕಣಿಗೆ ಇಟ್ಟಿರುವ ತರಕಾರಿಗಳನ್ನೇ ಅಂದಿನ ಮಧ್ಯಾಹ್ನದ ಭೋಜನಕ್ಕೆ ಬಳಸಲಾಗುತ್ತದೆ. ಗೇರು ಬೀಜ ಹಾಕಿರುವ ಪಾಯಸವೂ ಅಂದಿನ ಅಗತ್ಯಗಳಲ್ಲೊಂದು.
ಈ ಬಗ್ಗೆ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ " ತುಳುವರು ಸೌರಮಾನ ಯುಗಾದಿ ಆಚರಣೆ ಮಾಡುತ್ತಾರೆ. ಸೌರಮಾನ ಯುಗಾದಿಯನ್ನು ಬಿಸು ಎನ್ನುತ್ತಾರೆ. ಬಿಸು ಪರ್ಬದಲ್ಲಿ ಕಣಿ ಇಡುವುದು ಇರುತ್ತದೆ. ಇದು ನೇರವಾಗಿ ಕೃಷಿ ಮೂಲದ ಆಚರಣೆಗಳಾಗಿದೆ. ತುಳುವರ ಬಿಸು ಆಚರಣೆಯಲ್ಲಿ ಕೃಷಿ ಪರಂಪರೆ ಹಿನ್ನೆಲೆಯ ಆಚರಣೆ. ರೈತರು ಗದ್ದೆಯಲ್ಲಿ ಬೆಳೆದ ತರಕಾರಿ, ದವಸ ಧಾನ್ಯಗಳನ್ನು ಭೂಮಿಯ ಮಾಲಕನಿಗೆ ಗೌರವ ಭಾವದಿಂದ ಸಮರ್ಪಣೆ ಮಾಡುತ್ತಿದ್ದರು.
ಆ ನಂತರ ಉಳುವವನೇ ಒಡೆಯನಾದ ಬಳಿಕ ಆ ಪದ್ದತಿ ಬದಲಾಗಿದೆ. ದವಸ ಧಾನ್ಯ, ತರಕಾರಿಗಳನ್ನು ಗದ್ದೆಯಲ್ಲಿ ಕಣಿ ಇಡುವುದು ಮಾಡಲಾಗುತ್ತದೆ. ಇದೀಗ ಕಣಿ ಇಡುವುದನ್ನು ಮನೆಯಲ್ಲಿ ಮಾಡುತ್ತಾರೆ. ಕೃಷಿ ಮಾಡಲು ಆಗದವರು ಮಾರುಕಟ್ಟೆಯಿಂದ ತರಕಾರಿ ತಂದು ಈ ಸಂಪ್ರದಾಯಗಳನ್ನು ಆಚರಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಶಿವಮೊಗ್ಗ: ಮತದಾರರ ನಡುವೆ ಯುಗಾದಿ ಆಚರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ, ಶಿವರಾಜ್ಕುಮಾರ್ - Geetha Shivarajkumar Ugadi