ಚಾಮರಾಜನಗರ: ಬಜೆಟ್ನಲ್ಲಿ ಘೋಷಿಸಿದ ಯಾವುದೇ ಕಾರ್ಯಕ್ರಮಕ್ಕೂ ಕೂಡ ಹಣದ ಕೊರತೆ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಆರ್ಥಿಕ ದುಃಸ್ಥಿತಿಯ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪ ನಿರಾಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯವರು ಚುನಾವಣೆಯ ವೇಳೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಜಾರಿಯಾಗಲ್ಲ ಎನ್ನುತ್ತಿದ್ದರು. ಈಗ, ಸರ್ಕಾರದಲ್ಲಿ ಹಣ ಇಲ್ಲ ಎನ್ನುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ, ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಗ್ಯಾರಂಟಿ ಯೋಜನೆ ನಿಲ್ಲಲ್ಲ ಎಂದರು.
ಗಡಿ ಜಿಲ್ಲೆ ಚಾಮರಾಜನಗರದ ಜೊತೆ ರಾಜಕೀಯ ಸಂಬಂಧ ನಿನ್ನೆ- ಮೊನ್ನೆಯದ್ದಲ್ಲ. 40 ವರ್ಷಗಳ ಒಡನಾಟವಿದೆ. ಎಲ್ಲ ಸಂದರ್ಭದಲ್ಲೂ ನನಗೆ, ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ನೀಡುತ್ತಿದ್ದೀರಿ. ನಿಮ್ಮ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಚಾಮರಾಜನಗರಕ್ಕೆ ಬಂದ ಬಳಿಕ ನಾನು ಎರಡನೇ ಬಾರಿ ಸಿಎಂ ಆಗಿದ್ದೇನೆ ಎಂದರು.
ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬಂದರೂ ಬಡವರು, ದಲಿತರು, ಮಹಿಳೆಯರ ಪರ ಕೆಲಸ ಮಾಡಲಿದೆ. ಕೃಷಿ, ಆರ್ಥಿಕತೆ, ಕೈಗಾರಿಕೆ ಬೆಳವಣಿಗೆ ಆಗಿರುವುದು ಕಾಂಗ್ರೆಸ್ನಿಂದ, ಬಿಜೆಪಿಯವರ ಟೀಕೆಗಳನ್ನು ಜನರು ನಂಬುವುದಿಲ್ಲ. ಅಭಿವೃದ್ಧಿ ಮಾಡದ ಬಿಜೆಪಿ ಅವರಿಗೆ ಆರೋಪಿಸುವ ನೈತಿಕತೆಯೇ ಇಲ್ಲ. ಸುಳ್ಳನ್ನು 100 ಬಾರಿ ಹೇಳಿ ಸತ್ಯ ಮಾಡುವುದು ಬಿಜೆಪಿ ಅವರ ಕಸುಬು ಎಂದು ಕಿಡಿಕಾರಿದರು.
ಕಳೆದ ಬಾರಿ 25 ಮಂದಿ ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯವಾದರೂ ಮಾತನಾಡಲಿಲ್ಲ. ಈ ಬಾರಿ ಕಾಂಗ್ರೆಸ್ ಸಂಸದರು ಆಯ್ಕೆಯಾಗಿದ್ದಾರೆ. ಅವರೆಲ್ಲರಿಗೂ ರಾಜ್ಯದ ಅಭಿವೃದ್ಧಿಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿದ್ದೇನೆ. ಬಿಜೆಪಿ ಕಳೆದ ಬಾರಿ ಪಡೆದಿದ್ದ ಸ್ಥಾನಗಳನ್ನು ಈ ಸಲ ಕಳೆದುಕೊಂಡಿದೆ ಎಂದರು.
2 ಬಾರಿ ನಿದ್ರೆಗೆ ಜಾರಿದ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಎರಡು ಬಾರಿ ನಿದ್ರೆಗೆ ಜಾರಿದ ಘಟನೆ ನಡೆಯಿತು. ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡುತ್ತಿದ್ದ ವೇಳೆ ಎರಡು ಬಾರಿ ನಿದ್ರೆಗೆ ಜಾರಿದ್ದಾಗ ಅವರನ್ನು ಸನ್ಮಾನಿಸಲು ಬಂದ ಅಭಿಮಾನಿಗಳು ನಿದ್ರಾಭಂಗ ಮಾಡಿದರು. ಸಿದ್ದರಾಮಯ್ಯ ಭಾಷಣ ಮಾಡುವಾಗ ಸಚಿವ ಕೆ.ಎಚ್. ಮುನಿಯಪ್ಪ ಕೂಡ ನಿದ್ರೆ ಮಾಡುತ್ತಿದ್ದರು.
ಧನ್ಯವಾದ ಸಲ್ಲಿಸಿದ ಸುನೀಲ್ ಬೋಸ್: ಕೃತಜ್ಞತಾ ಸಭೆಯಲ್ಲಿ ಸಂಸದ ಸುನಿಲ್ ಬೋಸ್ ಮಾತನಾಡಿ, ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ಅವರೇ ಚುನಾವಣೆಗೆ ನಿಂತಿರುವ ರೀತಿ ಕೆಲಸ ಮಾಡಿದ್ದರಿಂದ ನನಗೆ ಐತಿಹಾಸಿಕ ಗೆಲುವು ಸಿಕ್ಕಿದೆ. ಎಲ್ಲರಿಗೂ ಕೂಡ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದು ಕೈ ಮುಗಿದರು.
ಈ ಗೆಲುವು ನನಗೆ ಹೊಸ ಜವಾಬ್ದಾರಿ ಕೊಟ್ಟಿದೆ. ಎಲ್ಲರ ವಿಶ್ವಾಸದಿಂದ ಉತ್ತಮ ಕೆಲಸ ಮಾಡುತ್ತೇನೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ಸಂವಿಧಾನ ವಿರೋಧಿ ಬಿಜೆಪಿಗೆ ಈ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ ಎಂದರು.