ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆಯನ್ನೂ ಮಾಡಿದ್ದೇವೆ. ಹಾಗಾಗಿ, ಸದ್ಯಕ್ಕೆ ಮಳೆಯಿಂದ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿಗೆ ಈಗ ಕೇವಲ 65 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಆದ್ದರಿಂದ ಸದ್ಯ ಕೃಷ್ಣಾ ನದಿ ತೀರದಲ್ಲಿ ಯಾವುದೇ ಪ್ರವಾಹದ ಭೀತಿ ಇಲ್ಲ. ಇನ್ನು ಘಟಪ್ರಭಾ ನದಿ ತೀರಕ್ಕೆ ನಾನು ಭೇಟಿ ನೀಡಿ ಬಂದಿದ್ದೇನೆ. ಮಾರ್ಕಂಡೇಯ, ಹಿರಣ್ಯಕೇಶಿ ಮತ್ತು ಘಟಪ್ರಭಾ ಮೂರು ನದಿಗಳ ನೀರು ಸೇರುವ ಹಿಡಕಲ್ ಜಲಾಶಯ 51 ಟಿಎಂಸಿ ಸಾಮರ್ಥ್ಯ ಹೊಂದಿದೆ. ಸದ್ಯ 32 ಟಿಎಂಸಿ ನೀರು ಸಂಗ್ರಹವಾಗಿದ್ದು, ಅಲ್ಲಿಯೂ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಖಾನಾಪುರ ತಾಲೂಕಿನಲ್ಲಿ ವಾಡಿಕೆಗಿಂತ ಶೇ.37ರಷ್ಟು ಮಳೆ ಹೆಚ್ಚಾಗಿದೆ. ಇಲ್ಲಿನ 13 ಸೇತುವೆಗಳು ಮುಳುಗಡೆಯಾಗಿವೆ. ನಿನ್ನೆ ಕಂದಾಯ, ಲೋಕೋಪಯೋಗಿ ಸಚಿವರು ಮಾತನಾಡಿದ್ದಾರೆ. ಅವರ ನಿರ್ದೇಶನದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಇನ್ನು ಚೋರ್ಲಾ ಘಾಟ್ ಹತ್ತಿರ ಕುಸುಮಳ್ಳಿ ಒಂದು ಸೇತುವೆ ಅಪಾಯಕಾರಿಯಾಗಿದೆ. ನಿನ್ನೆಯಿಂದ ಸಂಚಾರ ಮಾಡಬಾರದು ಎಂದು ಆದೇಶಿಸಲಾಗಿದೆ. ಭಾರೀ ಗಾತ್ರದ ವಾಹನಗಳಿಗೆ ನಿಷೇಧ ಹೇರಲಾಗಿದೆ. ಸಣ್ಣ, ನಾಲ್ಕು ಟನ್ ಒಳಗಿನ ವಾಹನಗಳು ಓಡಾಡಬಹುದು. ಖಾನಾಪುರ ಮೇಲೆ ಪರ್ಯಾಯವಾಗಿ ಓಡಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬಿದ್ದ ಮನೆಗಳಿಗೆ ಎಸ್ಡಿಆರ್ಎಫ್ ನಿಯಮದ ಪ್ರಕಾರ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಅದೇ ರೀತಿ ಎನ್ಡಿಆರ್ಎಫ್ ಪ್ರಕಾರ ಪೂರ್ತಿ ಬಿದ್ದ ಮನೆಗಳಿಗೆ ಎ ಕೆಟಗೇರಿ - 1.25 ಲಕ್ಷ ರೂ., ಭಾಗಶಃ ಬಿದ್ದ ಮನೆ ಬಿ ಕೆಟಗೇರಿ - 16,500 ರೂ., ಸ್ವಲ್ಪ ಬಿದ್ದ ಮನೆಗಳಿಗೆ ಸಿ ಕೆಟಗೇರಿ-5 ಸಾವಿರ ರೂ. ನೀಡಲಾಗುತ್ತದೆ. ಬರುವ ಎರಡು ದಿನಗಳಲ್ಲಿ ಎಷ್ಟು ಹಾನಿಯಾಗಿದೆ ಎಂಬುದನ್ನು ತಿಳಿದುಕೊಂಡು ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 421 ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಜನರ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ. ಅವರಿಗೆ ಊಟ, ವಸತಿ, ಔಷಧ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. 2019ರಲ್ಲಿ ಕಾರವಾರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಿಸಿದ ಅನುಭವ ಇದೆ. ಹಾಗಾಗಿ, ಜನಪ್ರತಿನಿಧಿಗಳು ಹಾಗೂ ಎಲ್ಲ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
ಕುಂದಾನಗರಿ ಜೀವನಾಡಿ ರಾಕಸಕೊಪ್ಪ ಜಲಾಶಯ ಭರ್ತಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಮಹಾನಗರದ ಜೀವನಾಡಿ ಆಗಿರುವ ರಾಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಕಳೆದ ಆರು ವರ್ಷಗಳಲ್ಲೆ ಅತಿವೇಗವಾಗಿ ರಾಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯ ಭರ್ತಿಯಿಂದ ಕುಂದಾನಗರಿ ಜನತೆ ನಿರಾಳರಾಗಿದ್ದಾರೆ.
ಬೆಳಗಾವಿ ನಗರಕ್ಕೆ ಇದೇ ಜಲಾಶಯದಿಂದ ನೀರು ಸರಬರಾಜು ಮಾಡಲಾಗುತ್ತದೆ. ಮಾರ್ಕಂಡೇಯ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಎರಡು ಗೇಟ್ ತೆರೆದು ಜಲಮಂಡಳಿ ಅಧಿಕಾರಿಗಳು ನೀರನ್ನು ಬಿಟ್ಟಿದ್ದಾರೆ. ಈ ನೀರು ಮಾರ್ಕಂಡೇಯ ನದಿ ಸೇರುತ್ತದೆ.
ಗೇಟ್ನಲ್ಲಿ ಸಿಲುಕಿದ ಬೃಹದಾಕಾರದ ಮೀನು: ಬೆಳಗಾವಿ ತಾಲೂಕಿನ ರಾಕಸಕೊಪ್ಪ ಗ್ರಾಮದಲ್ಲಿರುವ ರಾಕಸಕೊಪ್ಪ ಜಲಾಶಯ 2478 ಅಡಿ ವಿಸ್ತೀರ್ಣ ಹೊಂದಿದ್ದು, ರಾಕಸಕೊಪ್ಪ ಜಲಾಶಯದಿಂದ ಎರಡು ಗೇಟ್ ಮೂಲಕ ನೀರು ಬಿಡುಗಡೆ ಮಾಡುವ ವೇಳೆ ಬೃಹತ್ ಆಕಾರದ ಮೀನುಗಳು ಕಾಣಿಸಿಕೊಂಡಿವೆ. ಗೇಟ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೀನನನ್ನು ಬಿಡಿಸಲು ಜಲಾಶಯ ಸಿಬ್ಬಂದಿ ಹರಸಾಹಸ ಪಟ್ಟರು. ಅಂದಾಜು 10 ಕೆಜಿ ತೂಕ ಇರುವ ಬೃಹತ್ ಮೀನನ್ನು ಕೊನೆಗೂ ಸಿಬ್ಬಂದಿ ಬಿಡಿಸಿದರು.
ಚಿಕ್ಕೋಡಿಯಲ್ಲಿ 7 ಸೇತುವೆಗಳು ಜಲಾವೃತ: ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಕಳೆದು 15 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ವೇದಗಂಗಾ, ದೂದಗಂಗಾ, ಹೀರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ನದಿಗೆ ಅಡ್ಡಲಾಗಿರುವ 7 ಸೇತುವೆಗಳು ಜಲಾವೃತಗೊಂಡಿವೆ.
ದೂದಗಂಗಾ ನದಿಗೆ ಅಡ್ಡಲಾಗಿರುವ ಚಿಕ್ಕೋಡಿ ತಾಲೂಕಿನ ದತ್ತವಾಡ-ಮಲ್ಲಿಕವಾಡ, ನಿಪ್ಪಾಣಿ ತಾಲೂಕಿನ ಭೋಜ-ಕಾರದಗಾ ಹಾಗೂ ಭೋಜವಾಡಿ-ಕುನ್ನೂರು ಹಾಗೂ ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಗೆ ಅಡ್ಡಲಾಗಿರುವ ಜತ್ರಾಟ-ಭೀವಶಿ, ಮತ್ತು ಅಕ್ಕೋಳ- ಸಿದ್ನಾಳ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿರುವ ಚಿಕ್ಕೋಡಿ ತಾಲೂಕಿನ ಮಾಂಜರಿ- ಭಾವನ ಸೌಂದತ್ತಿ ಹಾಗೂ ಹುಕ್ಕೇರಿ ತಾಲೂಕಿನ ಹೀರಣ್ಯಕೇಶಿ ನದಿಗೆ ಅಡ್ಡಲಾಗಿರುವ ಯರನಾಳ- ಮದಮಕ್ಕನಾಳ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿವೆ.
ಇದನ್ನೂ ಓದಿ: ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳಿಗೆ ಜೀವಕಳೆ: ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ ಹೀಗಿದೆ - Water Level