ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮಿ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಮಠದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ. ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಇಂತಹ ಆರೋಪ ಮಾಡುತ್ತಿದ್ದು, ಮಾ. 7 ರಂದು ಸರ್ವಭಕ್ತರ ಸಭೆ ಕರೆಯುತ್ತೇವೆ ಎಂದು ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್ ಹೇಳಿದರು. ಮಠದ ಹಣ ದುರ್ಬಳಕೆಯಾಗಿದೆ ಎಂಬ ಕೆಲವರ ಆರೋಪದ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಭಕ್ತರ ಸಲಹೆ ಮತ್ತು ಪ್ರಶ್ನೆಗಳನ್ನು ಸ್ವೀಕರಿಸುತ್ತೇವೆ. ಎಲ್ಲದಕ್ಕೂ ಲಿಖಿತ ಉತ್ತರವನ್ನು ಕೊಡುತ್ತೇವೆ. ಪ್ರತಿಯೊಂದು ಖರ್ಚು ವೆಚ್ಚದ ಲೆಕ್ಕ ಪತ್ರಗಳು ನಮ್ಮ ಬಳಿ ಇವೆ ಎಂದು ಹೇಳಿದರು.
ಶ್ರೀ ಸಿದ್ಧಾರೂಢಮಠದ ಘನತೆಗೆ ಕುಂದು ತರುವಂತಹ ಯತ್ನದಲ್ಲಿ ಭಾಗಿಯಾದ ಗುರುಶಾಂತಪ್ಪ ಕಾರಿ ಮತ್ತು ಗುರುಸಿದ್ದಪ್ಪ ಅಂಗಡಿ ಇವರುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಟ್ರಸ್ಟ ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ. ಮಾ. 3 ರಂದು ದಾಸೋಹ ಸಭಾಂಗಣದಲ್ಲಿ ಶಿವರಾತ್ರಿ ಮಹೋತ್ಸವದ ನಿಮಿತ್ತ ಕರೆದ ಪೋಷಕರು, ಆಶ್ರಯದಾತರು, ಅಜೀವ ಸದಸ್ಯರ ಸಭೆಯಲ್ಲಿ ಮಠದವರು ಅಡಿಟ್ ರಿಪೋರ್ಟ್ ನೀಡಿರುವುದಿಲ್ಲ, ಅಲ್ಲದೇ ಜಮಾ ಖರ್ಚನ್ನು ನೀಡಿರುವುದಿಲ್ಲ ಎಂದು ಮಾಧ್ಯಮದವರ ಮುಂದೆ ಸುಳ್ಳು ಹೇಳಿಕೆ ನೀಡಿ ಮಠದ ಗೌರವಕ್ಕೆ ಧಕ್ಕೆ ತಂದಿದ್ದಾರಲ್ಲದೇ ಭಕ್ತಾಧಿಗಳನ್ನು ತಪ್ಪು ದಾರಿಗೆಳೆಯುವ ಯತ್ನ ಮಾಡಿದ್ದಾರೆ ಎಂದು ತಿಳಿಸಿದರು.
ಮಠದ ಟ್ರಸ್ಟ್‌ಗೆ ಬ್ಲಾಕ್ಮೇಲ್: ಶ್ರೀ ಮಠದ ಆರೂಢ ತತ್ವ ಪ್ರಚಾರ ವೇದಿಕೆ ಎಂಬ ಸುಳ್ಳು ಸಂಸ್ಥೆ ಹುಟ್ಟು ಹಾಕಿದ ಗುರುಶಾಂತಪ್ಪ ಕಾರಿ ಹಾಗೂ ಅಂಗಡಿಯವರ ತಂಡ ಮಾ. 3 ರಂದು ಶ್ರೀಮತಿ ಲೀಲಾವತಿ ಪಾಸ್ತೆ ಅವರು ಅಭಿಪ್ರಾಯ ಮಂಡಿಸಲು ಬಂದ ಸಂದರ್ಭದಲ್ಲಿ ಮೈಕ್ ಕಸಿದುಕೊಂಡು ದಾಂಧಲೆ ನಡೆಸಿದ್ದಾರಲ್ಲದೇ ವೇದಿಕೆ ಸದಸ್ಯರು ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾರೆ. ಅಂದು ಸಭೆಯಲ್ಲಿದ್ದ ಎಲ್ಲರಿಗೂ ಅಢಾವೆ ಪತ್ರಿಕೆಯನ್ನು ನೀಡಲಾಗಿತ್ತಲ್ಲದೇ ಅದನ್ನು ಅಲ್ಲಗಳೆದು ಅಡ್ಡಿಪಡಿಸಿ ಸಭೆಯಲ್ಲಿ ಆತಂಕದ ವಾತಾವರಣ ಹುಟ್ಟು ಹಾಕಲಾಗಿದೆ. ಜೊತೆಗೆ ಈ ಸದಸ್ಯರುಗಳು ಪದೇ ಪದೇ ಮಠದ ಟ್ರಸ್ಟ್‌ಗೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೊಟಕುಗೊಂಡ ಸಭೆಯನ್ನು ಮಾ.7 ರಂದು ಮಠದಲ್ಲಿ ಕರೆಯಲಾಗಿದ್ದು, ಮಠದ ಅಜೀವ ಸದಸ್ಯರು ಭಾಗವಹಿಸಿ ಸಲಹೆ ಸೂಚನೆ ನೀಡಬೇಕು ಎಂದು ಬಸವರಾಜದ ಕಲ್ಯಾಣಶೆಟ್ಟರ್ ಅವರು ಮನವಿ ಮಾಡಿದರು.
ಇದನ್ನೂ ಓದಿ: ಮಹಾಶಿವರಾತ್ರಿ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ 1,500 ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ