ಹುಬ್ಬಳ್ಳಿ: "ಶಿಗ್ಗಾಂವಿ ಉಪಚುನಾವಣೆ ವಿಚಾರವಾಗಿ ಸಭೆ ಮಾಡಿದ್ದೇವೆ. ಮೂರು ಪುರಸಭೆ, ಆರು ಜಿಲ್ಲಾ ಪಂಚಾಯತ್, 23 ತಾಲೂಕು ಪಂಚಾಯತ್ವಾರು ಸಭೆ ಮಾಡಿದ್ದೇವೆ. ಅನೇಕ ಹಿರಿಯರ ಜೊತೆ ಸಭೆ ಮಾಡಿದ್ದೇವೆ. ಪದಾಧಿಕಾರಿಗಳಿಗೆ ಅನೇಕ ಸೂಚನೆಗಳನ್ನು ಕೊಟ್ಟಿದ್ದೇವೆ. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದೆ. ಹೀಗಾಗಿ ನಮ್ಮ ಪ್ರಕಾರ ಶಿಗ್ಗಾಂವಿಯಲ್ಲಿ ನಾವೇ ಗೆಲ್ಲುತ್ತೇವೆ" ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಕಾಂಗ್ರೆಸ್ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಬಿಜೆಪಿಯವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಏನಾದರೊಂದು ಸತ್ತು ಹೋಗಿದೆ ಎಂದರೂ ಹಲ್ಲು ಕಿಸಿಯುತ್ತಾರೆ. ಹಾಗೆ ವಕ್ಫ್ ವಿಚಾರ ಮುಗಿದುಹೋಗಿದೆ. ಉಪಚುನಾವಣೆ ಇರುವ ಕಾರಣಕ್ಕೆ ಗೊಂದಲ ಮಾಡುತ್ತಿದ್ದಾರೆ. ಚುನಾವಣೆ ಇಲ್ಲದೆ ಇದ್ದಿದ್ರೆ, ಮಾತನಾಡುತ್ತಿರಲಿಲ್ಲ. ಉಪಚುನಾವಣೆ ಇರುವ ಕಾರಣಕ್ಕೆ ವಕ್ಫ್ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ" ಎಂದರು.
ಗ್ಯಾರಂಟಿ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಆ ಬಗ್ಗೆ ಡಿಸಿಎಂ, ಸಿಎಂ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಇದರಲ್ಲೂ ಸುಳ್ಳು ಹೇಳುತ್ತಿದ್ದಾರೆ" ಎಂದು ಟೀಕಿಸಿದರು.
ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: "ಶಿಗ್ಗಾಂವಿ ಉಪಚುನಾವಣೆ ಕಣ ರಂಗೇರುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು, ಹಾಗೂ ನಾಯಕರಿಗೆ ಈ ಬಾರಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಇದೆ. ಇಂದು ಹುಬ್ಬಳ್ಳಿಯಲ್ಲಿ ಸಭೆ ಮಾಡಿದ್ದೇವೆ. ನಾವು ಈ ಬಾರಿ ಉಪಚುನಾವಣೆಯಲ್ಲಿ ಗೆಲ್ಲಬೇಕು" ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಸಭೆ ಬಳಿಕ ಮಾತನಾಡಿದ ಅವರು, "ವಕ್ಫ್ ವಿಚಾರವಾಗಿ ಮೊದಲು ಪತ್ರ ಬರೆದಿದ್ದು ಬಿಜೆಪಿಯವರು. ಇದೀಗ ಚುನಾವಣೆ ಇದೆ ಎಂದು ನಾಟಕ ಮಾಡುತ್ತಿದ್ದಾರೆ. ಕೇವಲ ಹಿಂದೂ ರೈತರ ಅಲ್ಲ, ಮುಸ್ಲಿಂ ರೈತರ ಜಮೀನಿಗೂ ನೋಟಿಸ್ ಕೊಡಲಾಗಿದೆ. ಗದಗ ಜಿಲ್ಲೆಯಲ್ಲಿ ಯಾರಿಗೂ ನೋಟಿಸ್ ಕೊಟ್ಟಿಲ್ಲ. ವಕ್ಫ್ ಅಂದ್ರೆ ದಾನ, ಅದು ಕೂಡಾ ಸರ್ಕಾರದ ಒಂದು ಭಾಗ. ದಾನ ಕೊಟ್ಟ ಜಮೀನು ವಿಚಾರವಾಗಿ ಮೇಲ್ವಿಚಾರಣೆ ಮಾಡ್ತಾರೆ. ನಾವು ನಿಮ್ಮ ಭೂಮಿ ತೆಗೆದುಕೊಳ್ಳಲು ಬರಲ್ಲ. ವಕ್ಫ್ ಗೆಜೆಟ್ ನೋಟಿಫಿಕೇಶನ್ ಮಾಡಿರೋದರಲ್ಲಿ ಬಿಜೆಪಿ ಪಾಲಿದೆ" ಎಂದರು.
ನೀವೇ ಮೊದಲು ನೋಟಿಸ್ ಕೊಡಿ ಅಂದಿದ್ದು, ಇದು ರಾಜಕೀಯ ಕಪಟ ನಾಟಕ. ವಕ್ಫ್ ವಿಚಾರವಾಗಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ವಕ್ಫ್ ರಾಷ್ಟ್ರೀಕರಣ ಮಾಡಿ ಎನ್ನುವುದು, ಮಠ ರಾಷ್ಟ್ರೀಕರಣ ಮಾಡಿ ಎನ್ನುವುದು ಅಪಾಯಕಾರಿ. ಇವರೇ ನೋಟಿಸ್ ಕೊಟ್ಟು ನಾಟಕ ಮಾಡುತ್ತಿದ್ದಾರೆ. ನಾವು ಮಾತನಾಡೋಕೆ ಹೋದರೆ, ಇವರು ಏನೇನು ಮಾಡಿದ್ದಾರೋ ಎಲ್ಲವನ್ನೂ ಮಾತಾಡಬೇಕಾಗುತ್ತದೆ" ಎಂದು ಹೆಚ್ಕೆ ಪಾಟೀಲ್ ತಿರುಗೇಟು ನೀಡಿದರು.
ಇದನ್ನೂ ಓದಿ: ರೈತರಿಗೆ ವಕ್ಫ್ ನೋಟಿಸ್ ವಿವಾದ ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆ: ಭರತ್ ಬೊಮ್ಮಾಯಿ