ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಪ್ರಮುಖ ದಾಖಲೆಗಳ ಸಂಗ್ರಹವಿದ್ದ ನಾಲ್ಕು ಲ್ಯಾಪ್‌ಟಾಪ್ ಕಳ್ಳತನ ಮಾಡಿರುವುದು ಸೋಮವಾರ ಬೆಳಕಿಗೆ ಬಂದಿದೆ.
ಬೆಳಗಾವಿ ಬಸವೇಶ್ವರ ವೃತ್ತದಲ್ಲಿನ ಪಾಲಿಕೆ ದಕ್ಷಿಣ ವಲಯದ ಕಂದಾಯ ಕಚೇರಿಯಲ್ಲಿದ್ದ ಲ್ಯಾಪ್‌ಟಾಪ್ ಕಳ್ಳತನ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಚೇರಿಯೊಳಗೆ ಕಿಡಕಿ ಗಾಜು ಒಡೆದು ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಲ್ಯಾಪ್‌ಟಾಪ್ ಎಗರಿಸಿ ಪರಾರಿಯಾಗಿದ್ದಾರೆ. ಅಲ್ಲದೇ ಇನ್ನು ಏನೆಲ್ಲ ಕದ್ದಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
ನಾಲ್ಕು ಲ್ಯಾಪ್‌ಟಾಪ್ ಕದ್ದು ಪರಾರಿ: ಆಸ್ತಿ ಮಾಲೀಕತ್ವ ದಾಖಲಾತಿ, ಆಸ್ತಿ ಮಾಲೀಕರ ಗುರುತಿನ ಚೀಟಿ, ತೆರಿಗೆ ಚೀಟಿ, ಕಟ್ಟಡ ಪರವಾನಗಿ ಪತ್ರ, ಹೀಗೆ 26 ವಾರ್ಡ್‌ಗಳ ನಿವಾಸಿಗಳ ದಾಖಲೆಗಳ ಸಂಗ್ರಹವಿದ್ದ ನಾಲ್ಕು ಲ್ಯಾಪ್ಟಾಪ್ಗಳನ್ನು ಕಳ್ಳರು ಕದ್ದಿದ್ದಾರೆ.
ಸಿಬ್ಬಂದಿ ಕಚೇರಿಗೆ ಸೋಮವಾರ ಬೆಳಗ್ಗೆ ಬಂದು ನೋಡಿದಾಗ, ನಿನ್ನೆ ತಡರಾತ್ರಿ ಕಳ್ಳರು ಕಚೇರಿಗೆ ನುಗ್ಗಿ ತಿಜೋರಿಯಲ್ಲಿಟ್ಟಿದ್ದ ನಾಲ್ಕು ಲ್ಯಾಪ್‌ಟಾಪ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಟಿಳಕವಾಡಿ ಠಾಣೆ ಪೊಲೀಸರು ಹಾಗೂ ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೂರು ದಾಖಲು, ಪೊಲೀಸರಿಂದ ತನಿಖೆ: ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್. ಲೋಕೇಶ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪಾಲಿಕೆ ದಕ್ಷಿಣ ವಲಯದ ಕಂದಾಯ ಕಚೇರಿಯಲ್ಲಿದ್ದ ಲ್ಯಾಪ್‌ಟಾಪ್ ಕಳ್ಳತನ ಆಗಿರುವ ಬಗ್ಗೆ ಬೆಳಗ್ಗೆ ಮಾಹಿತಿ ಸಿಕ್ಕಿದೆ. ಈ ಕುರಿತು ಈಗಾಗಲೇ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ, ಏನೆಲ್ಲಾ ಮಹತ್ವದ ದಾಖಲೆಗಳು ಕಳ್ಳತನ ಆಗಿವೆಯೋ ಅದರ ಬಗ್ಗೆ ಪರಿಶೀಲಿಸುತ್ತೇವೆ. ಪೊಲೀಸರು ತನಿಖೆ ನಡೆಸಲಿದ್ದು, ನಮ್ಮ ಮೂಲಗಳಿಂದಲೂ ಕಳ್ಳತನದ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪಾಲಿಕೆ ಕಂದಾಯ ಅಧಿಕಾರಿ ಡಿ.ಜಿ. ಕೋರಿ ಮಾತನಾಡಿ, ನಿನ್ನೆ ರಜೆ ಇತ್ತು, ಇಂದು ಬೆಳಗ್ಗೆ 9.15ಕ್ಕೆ ಕಚೇರಿಗೆ ಬಂದು ನೋಡಿದಾಗ, ಕಳ್ಳತನ ಆಗಿರೋದು ಗೊತ್ತಾಗಿದೆ. ಇಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಇಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಮಹತ್ವದ ದಾಖಲೆಗಳು ಇರುವ ಪಾಲಿಕೆ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಪೊಲೀಸರು ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.
ಇದನ್ನೂಓದಿ:ರಾಮನಗರ: ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ ತಗುಲಿ ಮೂವರು ಸಜೀವ ದಹನ, ಐವರಿಗೆ ಗಾಯ