ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ವಿವಿಧೆಡೆ ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಕಾಯಕವನ್ನು ನಿರ್ವಹಿಸುತ್ತಿರುವ ಶಾಂತಿನಗರದ ರಾಣಿಯಮ್ಮ ಅವರು ಸಚಿವ ಡಾ ಎಂ. ಸಿ. ಸುಧಾಕರ್ ಬೆಂಬಲಿತರಾಗಿ ನಗರಸಭಾ ಸದಸ್ಯರಾಗಿ ಆಯ್ಕೆಗೊಂಡು ಈಗ ಉಪಾಧ್ಯಕ್ಷರ ಸ್ಥಾನ ಅಲಂಕರಿಸಿದ್ದಾರೆ.
ನಗರಸಭೆಯ ಉಪಾಧ್ಯಕ್ಷೆ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಸಚಿವ ಸುಧಾಕರ್ ಬಣದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ರೇಖಾ ಉಮೇಶ್ ಹಾಗೂ ರಾಣಿಯಮ್ಮರಿಗೆ ಮಾತ್ರ ಅವಕಾಶವಿತ್ತು. ಈ ಹಿನ್ನೆಲೆಯಲ್ಲಿ ರಾಣಿಯಮ್ಮರಿಗೆ ಉಪಾಧ್ಯಕ್ಷೆ ಸ್ಥಾನ ಒಲಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ರಾಣಿಯಮ್ಮ, ನಾನು ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ವೃತ್ತಿಯಲ್ಲಿ ಇದ್ದೆ. ಕಳೆದ ನಗರಸಭಾ ಚುನಾವಣೆಯಲ್ಲಿ ಸಚಿವರಾದ ಡಾ. ಎಂ. ಸಿ. ಸುಧಾಕರ್ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟರು. ನನ್ನ ವಾರ್ಡಿನ ಜನತೆ ನನ್ನ ಕೈಹಿಡಿದು ಚುನಾವಣೆಯಲ್ಲಿ ಗೆಲ್ಲಿಸಿದ್ದರ ಫಲವಾಗಿ ನಾನು ಇಂದು ಉಪಾಧ್ಯಕ್ಷೆಯಾಗಿದ್ದೇನೆ. ನನ್ನಂತಹವರನ್ನು ಈ ಹುದ್ದೆಗೆ ಆಯ್ಕೆ ಮಾಡಿದ ಸಚಿವರು ಹಾಗೂ ನನ್ನನ್ನು ಆಯ್ಕೆ ಮಾಡಿದ್ದ ವಾರ್ಡಿನ ಜನತೆಗೆ ಸದಾ ಚಿರಋಣಿಯಾಗಿರುತ್ತೇನೆ. ಹಾಗೇ ನಗರದಲ್ಲಿ ಸ್ವಚ್ಛತೆ ಮತ್ತು ನೀರಿನ ಸಮಸ್ಯೆಗೆ ಹೆಚ್ಚಿನ ಗಮನವನ್ನು ಕೊಟ್ಟು ಜನರ ಸಮಸ್ಯೆಗಳನ್ನು ಬಗೆಹರಿಸಿ ಸಚಿವ ಎಂಸಿ ಸುಧಾಕರ್ ಅವರಿಗೆ ಒಳ್ಳೆಯ ಹೆಸರು ತರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರದಂತೆ ಮೈಸೂರಿಗೂ ರೈಲ್ವೆ ಸೌಲಭ್ಯ ಸಿಗಲಿದೆ: ಕೇಂದ್ರ ಸಚಿವ ವಿ.ಸೋಮಣ್ಣ - railway facility to Mysuru