ಬೆಳಗಾವಿ : ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಶವವನ್ನು 6 ಕಿ. ಮೀ ವರೆಗೆ ಗ್ರಾಮಸ್ಥರು ಹೊತ್ತೊಯ್ದಿರುವ ಹೃದಯವಿದ್ರಾವಕ ಘಟನೆ ಖಾನಾಪುರ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಖಾನಾಪುರದ ಭೀಮಗಡ ಅಭಯಾರಣ್ಯ ಪ್ರದೇಶದಲ್ಲಿರುವ ಕೃಷ್ಣಾಪುರ ಗ್ರಾಮದ ಸದಾನಂದ ನಾಯಕ ತೀವ್ರ ಜ್ವರದಿಂದ ಬಳಲುತ್ತಿದ್ದರು. ಬಳಿಕ ಕುಟುಂಬಸ್ಥರು ಚಿಕಿತ್ಸೆಗಾಗಿ ಗೋವಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸದಾನಂದ ನಾಯಕ ನಿನ್ನೆ ಮೃತಪಟ್ಟಿದ್ದರು.
ಗೋವಾದಿಂದ ಮೃತದೇಹವನ್ನು ಕುಟುಂಬಸ್ಥರು ಇಂದು ಬೆಳಗ್ಗೆ ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದರು. ಬಳಿಕ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕಾಗಿ ಶವವನ್ನು ಸುಮಾರು 6 ಕಿ. ಮೀ ಹೊತ್ತುಕೊಂಡು ನಡೆದಿದ್ದಾರೆ. ಬಂಡೂರಿ ನಾಲಾಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟಿಗೆಯ ತೂಗುಸೇತುವೆ ಮೇಲೆ ಜೀವವನ್ನು ಕೈಯಲ್ಲಿ ಹಿಡಿದು ಶವ ಹೊತ್ತುಕೊಂಡು ಸಾಗಿರುವ ವಿಡಿಯೋ ಲಭ್ಯವಾಗಿದೆ.
ಖಾನಾಪುರ ಕಾಡಂಚಿನ ಗ್ರಾಮಗಳಲ್ಲಿ 12 ತಿಂಗಳು ಇದೇ ಪರಿಸ್ಥಿತಿ ಇದೆ. ತುರ್ತು ಆರೋಗ್ಯ ಸಮಸ್ಯೆ ಉಂಟಾದಾಗ ಆಸ್ಪತ್ರೆಗೆ ತೆರಳಲು ಕೂಡಾ ಪರದಾಡಬೇಕಿದೆ. ಮೊನ್ನೆಯಷ್ಟೇ ಇದೇ ಅಮಗಾಂವ ಗ್ರಾಮದ ಮಹಿಳೆ ಘಟನೆ ಮಾಸುವ ಮುನ್ನವೇ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.