ಧಾರವಾಡ: ಮಗ ತನ್ನ ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದ ಹೊಸ ಯಲ್ಲಾಪುರದಲ್ಲಿರುವ ಉಡುಪಿ ನಗರದಲ್ಲಿ ನಡೆದಿದೆ. ಶಾರದಾ ಭಜಂತ್ರಿ (60) ಕೊಲೆಯಾದ ತಾಯಿ. ರಾಜೇಂದ್ರ ಭಜಂತ್ರಿ (40) ಕೊಲೆ ಮಾಡಿದ ಮಗ.
ರಾಜೇಂದ್ರ ಮಾನಸಿಕ ತೊಂದರೆ ಅನುಭವಿಸುತ್ತಿದ್ದ ಮತ್ತು ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ. ತಾಯಿ ಶಾರದಾ ಭಜಂತ್ರಿಗೆ ಬರುತ್ತಿದ್ದ ಪಿಂಚಣಿ ಹಣ ಮತ್ತು ಆಸ್ತಿ ಮೇಲೆ ಕಣ್ಣಿಟ್ಟಿದ್ದ ರಾಜೇಂದ್ರ, ಖಾಲಿ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ತಾಯಿ ಬಳಿ ದುಂಬಾಲು ಬಿದ್ದಿದ್ದ. ಆದರೆ ಶಾರದಾ ಭಜಂತ್ರಿ ಇದಕ್ಕೆ ನಿರಾಕರಿಸಿದ್ದರು. ಇದರಿಂದ ಇಬ್ಬರ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿ ರಾಜೇಂದ್ರ ತಾಯಿ ಶಾರದಾ ಭಜಂತ್ರಿಗೆ ರಾಡ್‌ನಿಂದ ಥಳಿಸಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಧಾರವಾಡ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಬರ್ಬರ ಕೊಲೆ
ಜೈಲಿನಿಂದ ಹೊರ ಬಂದ ಮೂರೇ ತಿಂಗಳಿಗೆ ಕೊಲೆಯಾದ ವ್ಯಕ್ತಿ (ಶಿವಮೊಗ್ಗ): ಇತ್ತೀಚಿಗೆ, ಆಸ್ತಿ ವಿಚಾರಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆನಂದಪುರಂ ಬಳಿಯ ನೇದ್ರವಳ್ಳಿ ಕ್ರಾಸ್ ಬಳಿ ನಡೆದಿತ್ತು. ಕೊಲೆಯಾದ ವ್ಯಕ್ತಿಯ ಹೆಸರು ರಫೀಕ್ ಎಂದು ಗುರುತಿಸಲಾಗಿದ್ದು, ಈತ ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದವರು ಎಂದು ಹೇಳಲಾಗ್ತಿದೆ. ಆಸ್ತಿ ವಿಚಾರದಲ್ಲಿ ರಫೀಕ್ ತನ್ನ ಹಿರಿಯ ಸಹೋದರನನ್ನು ಕೊಂದು ಜೈಲು ಸೇರಿದ್ದರು.
ಜೈಲಿನಿಂದ ಹೊರ ಬಂದು ಮೂರು ತಿಂಗಳಾಗಿತ್ತು. ಆದರೆ ನಿನ್ನೆ ರಾತ್ರಿ ಆನಂದಪುರಂನಿಂದ ಸಾಗರದ ಮಾರ್ಗದ ನೇದ್ರವಳ್ಳಿ ಕ್ರಾಸ್ ಬಳಿಯ ರಸ್ತೆ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದರು. ಪತ್ತೆಯಾದಾಗ ರಫೀಕ್ ಮುಖ ರಕ್ತ ಸಿಕ್ತವಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ರಫೀಕ್ನನ್ನು ಆತನ ಸಂಬಂಧಿಕರು ಕಾರಿನಲ್ಲಿ ಆನಂದಪುರಂ ಬಳಿ ಕರೆದುಕೊಂಡು ಹೋಗಿದ್ದರು. ಬಳಿಕ ಆಸ್ತಿ ವಿಚಾರಕ್ಕೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದಾಗ ರಫೀಕ್ನನ್ನು ಕಾರಿನಲ್ಲೇ ಕೊಲೆ ಮಾಡಿದ್ದರು. ಬಳಿಕ ಕಾರಿನಿಂದ ಮೃತದೇಹವನ್ನು ಕೆಳಕ್ಕೆ ಎಸೆದು ಪರಾರಿಯಾಗಿದ್ದರು ಎಂಬ ಮಾಹಿತಿಯನ್ನು ಪೊಲೀಸ್ ಇಲಾಖೆ ತಿಳಿಸಿದ್ದರು.