ಮಂಗಳೂರು: ರಾಜ್ಯದಲ್ಲಿ ಪಿಯುಸಿ, ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾದಾಗ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿರುತ್ತದೆ. ಬುದ್ದಿವಂತರ ಜಿಲ್ಲೆ ಎಂದು ಕರೆಯಲ್ಪಡುವ ಕರಾವಳಿಯ ಜಿಲ್ಲೆ ರಾಜ್ಯದಲ್ಲಿ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಲು ಕಾರಣವೇನು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷರು ಈ ಬಗ್ಗೆ ವಿವರಿಸಿದ್ದಾರೆ.
ಬುಧವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗ ಎಂದಿನಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. 97.37 ಶೇಕಡ ಫಲಿತಾಂಶ ಪಡೆದ ದಕ್ಷಿಣ ಕನ್ನಡ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 95.24 ಶೇಕಡಾ ಫಲಿತಾಂಶ ಪಡೆದು ಉಡುಪಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ. ಕಳೆದ ಮೂರು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು , ಉಡುಪಿ ಜಿಲ್ಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಬಂದಿದೆ. ಕರಾವಳಿಯ ಈ ಎರಡು ಜಿಲ್ಲೆಗಳನ್ನು ಶೈಕ್ಷಣಿಕ ಹಬ್ ಎಂದು ಕರೆಯುತ್ತಾರೆ.
ಉತ್ತಮ ಫಲಿತಾಂಶಕ್ಕಾಗಿ ಕಾಲೇಜುಗಳ ನಡುವೆ ಪೈಪೋಟಿ: ಈ ಎರಡು ಜಿಲ್ಲೆಗಳಲ್ಲಿ ವ್ಯಾಸಂಗಕ್ಕಾಗಿ ಹೊರಜಿಲ್ಲೆಗಳ ವಿದ್ಯಾರ್ಥಿಗಳು ಬರುತ್ತಾರೆ. ಪ್ರತಿ ಬಾರಿಯೂ ದಾಖಲೆ ಫಲಿತಾಂಶ ಪಡೆಯುವ ಈ ಜಿಲ್ಲೆಗಳು ಈ ರೀತಿಯ ಸಾಧನೆ ಮಾಡಲು ಹಲವು ಕಾರಣಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಕಾಲೇಜುಗಳ ನಡುವೆ ತೀವ್ರ ಪೈಪೋಟಿ ಇದೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಖಾಸಗಿ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡಲು ಸ್ಪರ್ಧೆಯನ್ನೊಡ್ಡುತ್ತಿದೆ. ಖಾಸಗಿ ಕಾಲೇಜುಗಳ ಸಾಧನೆಗಳನ್ನು ನೋಡಿ ಈ ಕಾಲೇಜುಗಳಿಗೆ ದಾಖಾಲತಿ ಪಡೆಯಲು ವಿದ್ಯಾರ್ಥಿಗಳು, ಪೋಷಕರು ನಿರ್ಧರಿಸುತ್ತಾರೆ. ಈ ಕಾರಣದಿಂದ ಉತ್ತಮ ಫಲಿತಾಂಶ ಪಡೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಒತ್ತು ನೀಡುತ್ತದೆ.
ಉಪನ್ಯಾಸಕರ, ಪ್ರಾಂಶುಪಾಲರ ಬದ್ಧತೆ ಕರಾವಳಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು, ಪ್ರಾಂಶುಪಾಲರ ಬದ್ಧತೆ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ. ಶಾಲಾ ಅವಧಿ ಮುಗಿದರೂ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವುದು, ತಮ್ಮ ಮಕ್ಕಳಂತೆ ಕಾಣುವ ಪ್ರವೃತ್ತಿ, ಮಕ್ಕಳ ಉತ್ತಮ ಅಂಕ ಗಳಿಕೆಗೆ ಹೆಚ್ಚಿನ ಒತ್ತು ಉಪನ್ಯಾಸಕರು, ಪ್ರಾಂಶುಪಾಲರು ನೀಡುತ್ತಿದ್ದಾರೆ. ಉಪನ್ಯಾಸಕರು ಪಡುವ ಶ್ರಮದಷ್ಟೆ ವಿದ್ಯಾರ್ಥಿಗಳು ಪಡುತ್ತಾರೆ. ಅಡ್ಡದಾರಿ ಹಿಡಿದು, ನಕಲು ಮಾಡುವುದು, ಚೀಟಿ ಕೊಂಡೊಯ್ಯುವಂತಹ ಕಾರ್ಯ ಮಾಡದೇ ಶಾಲಾ ಅವಧಿಯಲ್ಲಿ ಕಲಿಕೆಗೆ ಒತ್ತು ನೀಡುತ್ತಾರೆ. ಉಪನ್ಯಾಸಕ , ಪ್ರಾಂಶುಪಾಲ ಸಂಘದ ಕಾರ್ಯಕ್ರಮ ದಕ್ಷಿಣ ಕನ್ನಡದಲ್ಲಿರುವ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘಗಳು ಕೇವಲ ವೇತನ ವಿಚಾರದ ಬಗ್ಗೆ ಮಾತ್ರ ಚರ್ಚಿಸದೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತವೆ. ಕಾಲೇಜು ಆರಂಭಕ್ಕೆ ಮುಂಚೆಯೆ ಉಪನ್ಯಾಸಕರಿಗೆ ತರಬೇತಿ, ಕಾರ್ಯಾಗಾರ, ವಿಚಾರಗೋಷ್ಠಿಗಳನ್ನು ನಡೆಸಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತದೆ.
ಪಿಯುಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉತ್ತಮ ಸಾಧನೆ ಮಾಡುವ ವಿಚಾರದ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಆಳ್ವಾ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸತತ ಪ್ರಯತ್ನದಿಂದ ಈ ಸಾಧನೆ ಆಗಿದೆ. ಖಾಸಗಿ ಮತ್ತು ಸರಕಾರಿ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಶ್ರಮಪಟ್ಟು ಕೆಲಸ ನಿರ್ವಹಿಸುತ್ತಾರೆ. ಇದರಿಂದ ಇದು ಸಾಧ್ಯವಾಗಿದೆ. ಪ್ರಾಂಶುಪಾಲರ ಸಂಘ ಶೈಕ್ಷಣಿಕವಾಗಿ ಗುಣಮಟ್ಟ ಹೆಚ್ಚಿಸಲು ಉಪನ್ಯಾಸಕರಿಗೆ ತರಬೇತಿ ನೀಡುವುದು, ವಿಚಾರಗೋಷ್ಠಿ ಏರ್ಪಡಿಸುವುದು, ಶೈಕ್ಷಣಿಕವಾಗಿ ಪೂರಕವಾದ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು .
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಕಾಲೇಜುಗಳು ಕೂಡ 90 ಶೇಕಡಾ ಫಲಿತಾಂಶ ಪಡೆಯುತ್ತೆ. ಖಾಸಗಿ ಕಾಲೇಜಿಗಿಂತಲೂ ಕೆಲವು ಕಡೆ ಉತ್ತಮ ಶೇಕಡ ಬರುತ್ತದೆ. ನಮ್ಮ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ನಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಅದೆ ಗುಣಮಟ್ಟ ಪಿಯುಸಿಯಲ್ಲಿ ಪಡೆದುಕೊಳ್ಳುತ್ತಾರೆ. ನಾವು ಭೋಧಿಸುವ ವಿಷಯ ಪ್ರೀತಿಸಬೇಕು. ನಮ್ಮ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು. ಅದಕ್ಕಿಂತಲೂ ಮುಖ್ಯವಾಗಿ ನಮ್ಮ ಮಕ್ಕಳೆಂದು ಅವರಿಗೆ ಭೋಧಿಸಿದಾಗ ಈ ರೀತಿಯ ಫಲಿತಾಂಶ ಬರಲು ಸಾಧ್ಯವಿದೆ ಎನ್ನುತ್ತಾರೆ ಗಂಗಾಧರ ಆಳ್ವಾ.
ಜೂನ್ ಜುಲೈನಲ್ಲಿ ಶೈಕ್ಷಣಿಕವಾಗಿ ಉಪನ್ಯಾಸಕರು ಅಪ್ಡೇಟ್ ಆಗಲು ವಿಚಾರಗೋಷ್ಟಿ, ಕಾರ್ಯಾಗಾರಗಳನ್ನು ಮಾಡಲಾಗುತ್ತದೆ. ಇದರಿಂದ ಇಡೀ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ಸಿಗುತ್ತದೆ. ಸಿಲೆಬಸ್ ಡಿಸೆಂಬರ್ ಒಳಗಡೆ ಮುಗಿಸಿ ಶಾಲಾ ಟೂರ್, ವಾರ್ಷಿಕೋತ್ಸವ ಅಕ್ಟೋಬರ್ ಒಳಗೆ ಮುಗಿಸಿ ವಿದ್ಯಾರ್ಥಿಗಳಿಗೆ ಇಲಾಖೆ ನಡೆಸುವ ಪೂರ್ವ ಸಿದ್ದತಾ ಪರೀಕ್ಷೆಗಿಂತ ಮೊದಲೇ ಪೂರ್ವ ಸಿದ್ದತಾ ಪರೀಕ್ಷೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಆಸಕ್ತಿ ಹೊಂದಿದ್ದಾರೆ. ಯಾರೂ ಕೂಡ ಅಡ್ಡ ದಾರಿ ಹಿಡಿದು, ನಕಲು ಮಾಡಿ ಪಾಸಾಗಬೇಕೆಂದು ಇರಾದೆ ಇಲ್ಲ. ವಿದ್ಯಾರ್ಥಿಗಳು ಸಾಕಷ್ಟು ಶ್ರಮಿಸುತ್ತಾರೆ. ಶಾಲಾ ಸಮಯದ ನಂತರವು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾರೆ.ಇದರಿಂದ ಮಕ್ಕಳಿಗೆ ಪ್ರಯೋಜನವಾಗಿದೆ ಎಂದಿದ್ದಾರೆ.
ಗೈರಾದ ವಿದ್ಯಾರ್ಥಿಗಳನ್ನು ತಕ್ಷಣ ಮನೆಗೆ ಮಾಹಿತಿ ನೀಡಿ ಆತ ಯಾತಕ್ಕಾಗಿ ಗೈರಾಗಿದ್ದಾನೆ ಎಂದು ತಿಳಿದುಕೊಳ್ಳಲಾಗುತ್ತದೆ. ಬಹುತೇಕ ಕಾಲೇಜುಗಳಲ್ಲಿ ಗೈರು ಆದರೆ ಹೆತ್ತವರಿಗೆ ಮೆಸೇಜ್ ಹೋಗುವಂತಹ ಸೌಲಭ್ಯ ಇದೆ. ಖಾಸಗಿ ಕಾಲೇಜುಗಳಲ್ಲಿ ಉತ್ತಮ ಪೈಪೋಟಿ ಇದೆ. ಒಳ್ಳೆಯ ಫಲಿತಾಂಶದಿಂದ ನಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಿದೆ. ಈ ಕಾರಣದಿಂದ ಬೇರೆ ಜಿಲ್ಲೆಯಿಂದ ಬರುತ್ತಿದ್ದಾರೆ ಎಂದು ಹೇಳುತ್ತಾರೆ ಆಳ್ವಾ.
ದ.ಕ : 2023-24 ರ ವಿಭಾಗವಾರು ಫಲಿತಾಂಶ:
ವಿಭಾಗ | ಶೇಕಡವಾರು ಫಲಿತಾಂಶ |
---|---|
ಕಲಾ | 93.64% |
ವಿಜ್ಞಾನ | 98.44% |
ವಾಣಿಜ್ಯ | 96.79 % |
ದ.ಕ ಹಿಂದಿನ ವರ್ಷಗಳ ಫಲಿತಾಂಶ:
ವರ್ಷ | ಶೇಕಡಾವಾರು ಫಲಿತಾಂಶ |
2017-18 | 91.49 % |
2018-19 | 90.91 % |
2019-20 | 90.71 % |
2020-21 | 100 % |
2021-22 | 88.02 % |
2022-23 | 95.33 % |
2023-24 | 97.37 % |
ಇದನ್ನೂ ಓದಿ: ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ಇವರೇ ನೋಡಿ ಟಾಪರ್ಸ್; ಹೀಗಿದೆ ಡಿಟೇಲ್ಸ್ - 2nd PUC toppers