ತುಮಕೂರು: ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ ಸರಗಳ್ಳತನದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಈಜಿಹಳ್ಳಿ ಕ್ರಾಸ್‌ನಲ್ಲಿ ನಡೆದಿದೆ.
ಮಧುಗಿರಿ ಇನ್ಸ್ಪೆಕ್ಟರ್ ಹನುಮಂತ ರಾಯಪ್ಪ ಹಾಗೂ ಮಿಡಿಗೇಶಿ ಸಬ್ ಇನ್ಸ್ಪೆಕ್ಟರ್ ಅಮ್ಮನಗಿ ಅವರು ತಮ್ಮ ಸಿಬ್ಬಂದಿಯಾದ ರಮೇಶ್, ಪ್ರಕಾಶ್ ಮತ್ತು ಮುದ್ದುರಾಜ ಅವರೊಂದಿಗೆ ಕುಖ್ಯಾತ ಸರಗಳ್ಳತನದ ಆರೋಪಿ ರಿಜ್ವಾನ್ ಬಿನ್ ಬಾಬಾಜಾನ್ ಹಿಂದೂಪುರ ಎಂಬಾತನನ್ನು ಇಂದು ಬೆಳಗ್ಗೆ ಹೊಸಕೋಟೆಯಲ್ಲಿ ಬಂಧಿಸಿದ್ದರು.
ಆತನನ್ನು ಮಧುಗಿರಿಗೆ ಕರೆದುಕೊಂಡು ಬರುತ್ತಿರುವಾಗ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಈಜಿಹಳ್ಳಿ ಕ್ರಾಸ್‌ನಲ್ಲಿ ಬಹಿರ್ದೆಸೆಗೆಂದು ನಿಲ್ಲಿಸಿದಾಗ ಆರೋಪಿಯು ಇದ್ದಕ್ಕಿದ್ದಂತೆ ಸ್ಥಳದಲ್ಲಿ ಬಿದ್ದಿದ್ದ ಬಿಯರ್ ಬಾಟಲ್ನ ಗಾಜಿನ ಚೂರು ತೆಗೆದುಕೊಂಡು ಅಲ್ಲಿಯೇ ಇದ್ದ ರಮೇಶ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಎಸೆದಿದ್ದಾನೆ. ಇದರಿಂದ ರಮೇಶ್ ಗಾಯಗೊಂಡಿದ್ದನ್ನು ಕಂಡ ಇನ್ಸ್ಪೆಕ್ಟರ್ ಹನುಮಂತ ರಾಯಪ್ಪ ತಮ್ಮ ರಿವಾಲ್ವಾರ್ನಿಂದ ಆರೋಪಿಯ ಬಲಗಾಲಿಗೆ ಗುಂಡು ಹೊಡೆಡಿದ್ದಾರೆ. ಅಲ್ಲದೆ ಮುಂದೆ ನಡೆಯಬಹುದಾದಂತಹ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಆರೋಪಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಹತ್ಯೆ, ಪೊಲೀಸರಿಂದ ತನಿಖೆ - Double Murder in Bengaluru