ಬೆಂಗಳೂರು: ಕೋಲಾರ ಟಿಕೆಟ್ ಗೊಂದಲ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಸಿಎಂ ಕಾವೇರಿ ನಿವಾಸದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬೈರತಿ ಸುರೇಶ್, ಇಂದು ಸಿಎಂ, ಡಿಸಿಎಂ ಸಭೆ ಕರೆದಿದ್ದರು. ಕೋಲಾರದ ಕೈ ಶಾಸಕರು, ಪರಿಷತ್ ಸದಸ್ಯರ ಜೊತೆ ಸಭೆ ನಡೆಸಲಾಗಿದೆ. ಸಂಧಾನ ಸಭೆ ಯಶಸ್ವಿಯಾಗಿದೆ. ಸಿಎಂ, ಡಿಸಿಎಂ, ಎಐಸಿಸಿ ಏನು ತಿರ್ಮಾನ ಕೈಗೊಳ್ಳುತ್ತೆದೆಯೋ ಅದನ್ನು ಪಾಲಿಸುತ್ತೇವೆ. ಅದರ ಪ್ರಕಾರ ನಡೆಯುತ್ತೇವೆ ಎಂದು ಎಲ್ಲರೂ ತಿಳಿಸಿದ್ದಾರೆ ಎಂದರು.
ಟಿಕೆಟ್ ವಿಚಾರವಾಗಿ ಕೋಲಾರ ಶಾಸಕರಿಗೆ ನಿನ್ನೆ ಗೊಂದಲ ಮೂಡಿತ್ತು. ನಮ್ಮ ಹೈಕಮಾಂಡ್ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿರಲಿಲ್ಲ. ಆದರೆ, ಟಿಕೆಟ್ ಫೈನಲ್ ಆಗಿದೆ ಎಂಬ ಕಾರಣಕ್ಕೆ ಗೊಂದಲ ಉಂಟಾಗಿತ್ತು. ಸದ್ಯ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂದು ಹೇಳಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಯಾವುದೇ ವ್ಯಕ್ತಿಯ ಹೆಸರು ಪ್ರಸ್ತಾಪ ಆಗಿಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಅದನ್ನು ಒಪ್ಪುತ್ತೇವೆ. ವೈಯ್ಯಕ್ತಿಕವಾಗಿ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಸಿಎಂ, ಡಿಸಿಎಂ ಕೆಲ ಸೂಚನೆ ನೀಡಿದ್ದು, ಬಹಿರಂಗವಾಗಿ ಮಾತನಾಡಬಾರದು ಎಂದು ಸಹ ಸೂಚಿಸಿದ್ದಾರೆ ಎಂದರು.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಇದೇ ವೇಳೆ ಮಾತನಾಡಿದ ಸಚಿವ ಎಂಸಿ ಸುಧಾಕರ್, ನಿನ್ನೆ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಿಎಂ, ಡಿಸಿಎಂ ನಮ್ಮ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಭಿನ್ನಾಭಿಪ್ರಾಯ ಸರಿಪಡಿಸುತ್ತೇವೆ. ನಮ್ಮ ಮೇಲೆ ನಂಬಿಕೆ ಇಡಿ ಎಂದು ಭರವಸೆ ನೀಡಿದ್ದಾರೆ. ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಅದನ್ನು ಒಪ್ಪುತ್ತೇವೆ ಎಂದರು.
ಪಕ್ಷಕ್ಕೆ ಮುಜುಗರ ಆಗುವ ಕೆಲಸ ಆಗಿದೆ. ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಮುಂದೆ ಗೊಂದಲ ಆಗದಂತೆ ನೋಡಿಕೊಳ್ಳುತ್ತೇವೆ. ನಾವು ಚುನಾವಣೆ ಎದುರಿಸಬೇಕಾಗಿದೆ. ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ಪಕ್ಷದ ಹಿತದೃಷ್ಟಿ ಮುಖ್ಯ ನಮಗೆ. ಆಕಾಂಕ್ಷಿಗಳ ಬಗ್ಗೆ ಚರ್ಚೆ ಆಗಿಲ್ಲ. ಸಮಸ್ಯೆಗಳನ್ನು ಆಲಿಸಿದ್ದಾರೆ. ಏನು ತೀರ್ಮಾನ ಮಾಡಿದರೂ ನಾವು ಅದಕ್ಕೆ ಬದ್ಧ. ಸಭೆಯಲ್ಲಿ ಯಾವುದೇ ಹೊಸ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ರಾಜೀನಾಮೆ ಪ್ರಸಂಗ ಅದೊಂದು ನಾಟಕ, ಯಾರು ರಾಜೀನಾಮೆ ಕೊಡುವುದಿಲ್ಲ: ಕೆ ಹೆಚ್ ಮುನಿಯಪ್ಪ - Lok Sabha Election 2024