ಬೆಂಗಳೂರು: ರಾಜ್ಯದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತ ತಲುಪಿದ್ದು, ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿ ಪಟ್ಟಿ ಅಂತಿಮಗೊಂಡಿದೆ ಎನ್ನಲಾಗಿದೆ. ನಾಲ್ಕೈದು ಕ್ಷೇತ್ರ ಹೊರತುಪಡಿಸಿ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಕೆಲ ಹಾಲಿಗಳಿಗೆ ಕೋಕ್ ನೀಡಿ ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಿಂದಲೇ ಕೇಳಿಬರುತ್ತಿವೆ.
ನವದೆಹಲಿಯಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಹೈಕಮಾಂಡ್ ನಾಯಕರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಮಹತ್ವದ ಸಮಾಲೋಚನೆ ನಡೆಸಿದ್ದು ಬಹುತೇಕ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ರಾಜ್ಯ ನಾಯಕರ ಅಭಿಪ್ರಾಯ, ವೀಕ್ಷಕರ ಸಲಹೆ, ಸಮೀಕ್ಷಾ ವರದಿಗಳು ಹಾಗು ಗೆಲ್ಲುವ ಸಾಮರ್ಥ್ಯದ ಆಧಾರದಲ್ಲಿ ಟಿಕೆಟ್ ಅಂತಿಮಗೊಳಿಸಲಾಗಿದೆ.
ಸದ್ಯ ಟಿಕೆಟ್ ಆಯ್ಕೆ ಕುರಿತ ಮಾತುಕತೆ ಮುಗಿದಿದ್ದು, ಯಾವುದೇ ಕ್ಷಣದಲ್ಲಿ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅಚ್ಚರಿ ಆಯ್ಕೆಯ ಅವಕಾಶವೂ ಈ ಬಾರಿ ಇರಲಿದ್ದು ಯಾರಿಗೆಲ್ಲಾ ಅವಕಾಶ ಸಿಗಲಿದೆ, ಟಿಕೆಟ್ ಕೈತಪ್ಪಲಿದೆ ಎನ್ನುವುದು ಪಟ್ಟಿ ಬಿಡುಗಡೆ ನಂತರವೇ ಗೊತ್ತಾಗಬೇಕಿದೆ.
ಮೂಲಗಳ ಪ್ರಕಾರ ಸೋಮಣ್ಣ ಅವರಿಗೆ ತುಮಕೂರು ಕ್ಷೇತ್ರ ನೀಡಲಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಶೋಭಾ ಕರಂದ್ಲಾಜೆಗೆ ನೀಡಲಾಗುತ್ತಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಮೈಸೂರಲ್ಲಿ ರಾಜವಂಶಸ್ಥ ಯದುವೀರ್ ಅವರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂಗಳಾದ ಶ್ರೀರಾಮುಲು ಮತ್ತು ಗೋವಿಂದ್ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
- ಚಿಕ್ಕೋಡಿ - ಅಣ್ಣಾ ಸಾಹೇಬ್ ಜೊಲ್ಲೆ/ ರಮೇಶ್ ಕತ್ತಿ
- ಬೆಳಗಾವಿ- ಜಗದೀಶ್ ಶೆಟ್ಟರ್
- ಧಾರವಾಡ- ಪ್ರಹ್ಲಾದ್ ಜೋಶಿ
- ಹಾವೇರಿ- ಬಸವರಾಜ್ ಬೊಮ್ಮಾಯಿ
- ಶಿವಮೊಗ್ಗ - ಬಿ.ವೈ ರಾಘವೇಂದ್ರ
- ಚಿಕ್ಕಮಗಳೂರು - ಉಡುಪಿ- ಶೋಭಾ ಕರದ್ಲಾಂಜೆ
- ದಕ್ಷಿಣ ಕನ್ನಡ - ನಳೀನ್ ಕುಮಾರ್ ಕಟೀಲ್/ಬ್ರಜೇಶ್ ಚೌಟ
- ಮೈಸೂರು- ಕೊಡಗು- ಪ್ರತಾಪ್ ಸಿಂಹ/ಯದುವೀರ್ ಒಡೆಯರ್
- ಬೆಂಗಳೂರು ಸೆಂಟ್ರಲ್ - ಪಿಸಿ ಮೋಹನ್
- ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ
- ಚಿಕ್ಕಬಳ್ಳಾಪುರ - ಡಾ.ಕೆ.ಸುಧಾಕರ್
- ಚಿತ್ರದುರ್ಗ - ನಾರಾಯಣಸ್ವಾಮಿ
- ಬಳ್ಳಾರಿ - ಶ್ರೀ ರಾಮುಲು
- ರಾಯಚೂರು- ಬಿ.ವಿ.ನಾಯಕ್
- ಕಲಬುರಗಿ - ಉಮೇಶ್ ಜಾಧವ್
- ಬೀದರ್ - ಭಗವಂತ ಖೂಬಾ
- ಬಿಜಾಪುರ - ಗೋವಿಂದ ಕಾರಜೋಳ
- ಚಾಮರಾಜನಗರ - ಡಾ.ಮೋಹನ್
- ಬೆಂಗಳೂರು ಗ್ರಾಮಾಂತರ- ಡಾ.ಮಂಜುನಾಥ್
- ತುಮಕೂರು - ಸೋಮಣ್ಣ
ಗೊಂದಲದಲ್ಲಿರೋ ಕ್ಷೇತ್ರಗಳು: ದಾವಣಗೆರೆ, ಕೊಪ್ಪಳ, ಬೆಂಗಳೂರು ಉತ್ತರ, ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಇನ್ನು ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಜೆಡಿಎಸ್ ಪಕ್ಷಕ್ಕೆ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳು ಖಚಿತ ಎನ್ನಲಾಗುತ್ತಿದೆ.
ಓದಿ: ಎಲ್ಲ 28 ಕ್ಷೇತ್ರಗಳ ಕುರಿತು ಚರ್ಚೆ, ಎರಡು ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿ.ವೈ.ವಿಜಯೇಂದ್ರ