ಹುಬ್ಬಳ್ಳಿ: ರಾಜ್ಯ ಸೇರಿದಂತೆ ದೇಶದಲ್ಲಿ ಸದ್ದು ಮಾಡಿರುವ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದರ ನಡುವೆಯೇ ನೇಹಾ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಇರುವ ಕಾರಣ ಸರ್ಕಾರ ಭದ್ರತೆ ಒದಗಿಸಿದೆ. ಜತೆಗೆ ನೇಹಾ ತಂದೆ ನಿರಂಜನ್ಗೆ ಅಂಗರಕ್ಷಕರನ್ನು ನಿಯೋಜನೆ ಮಾಡಲಾಗಿದೆ.
ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಮನೆಗೆ ಬಂದಾಗ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಹಾಗಾಗಿ ಭದ್ರತೆ ಬೇಕೆಂದು ನೇಹಾ ಕುಟುಂಬ ಮನವಿ ಮಾಡಿತ್ತು. ಕೂಡಲೇ ಇದಕ್ಕೆ ಸ್ಪಂದಿಸಿದ ಸರ್ಕಾರ ನಿರಂಜನ್ ಅವರಿಗೆ ಗನ್ ಮ್ಯಾನ್ ನಿಯೋಜನೆ ಮಾಡುವುದರ ಜತೆಗೆ ಅವರ ಮನೆಗೆ ಭದ್ರತೆಯನ್ನು ಒದಗಿಸಿದೆ.
ಈ ಬಗ್ಗೆ ಮಾತನಾಡಿರುವ ನಿರಂಜನ್ ಹಿರೇಮಠ, ಪಕ್ಷಾತೀತವಾಗಿ ಎಲ್ಲರೂ ನಮ್ಮ ನಿವಾಸಕ್ಕೆ ಆಗಮಿಸಿ ನೇಹಾಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಗುರುವಾರ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿ ನೇಹಾ ಕೊಲೆಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಮನೆಗೆ ಭದ್ರತೆ ಒದಗಿಸುವುದರ ಜೊತೆಗೆ ಅಂಗರಕ್ಷರನ್ನು ನಿಯೋಜನೆ ಮಾಡಿದ್ದಾರೆ. ನಮ್ಮ ಬೇಡಿಕೆ ಒಂದೇ, ನೇಹಾ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಯಾರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಏ. 18 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜ್ನಲ್ಲಿ ಆರೋಪಿ ಫಯಾಜ್ ನೇಹಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಕೊಲೆಯಾದ ನಂತರ ನೇಹಾ ತಂದೆ ನಿರಂಜನ್ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದರು.
ಇದನ್ನೂ ಓದಿ: ನೇಹಾ ಕೊಲೆ ಪ್ರಕರಣ: ಆರೋಪಿ ಫಯಾಜ್ ವಶಕ್ಕೆ ಪಡೆದ ಸಿಐಡಿ, ಘಟನಾ ಸ್ಥಳದ ಮಹಜರು - NEHA MURDER CASE