ಹಾವೇರಿ: ''ಶಿಗ್ಗಾಂವ ಉಪಚುನಾವಣೆ ನಾವು ಗೆಲ್ಲಬೇಕಿದೆ. ಹೀಗೆ ಕಚ್ಚಾಡಿಕೊಂಡು ಹೋದರೆ ಬಹಳ ಕಷ್ಟ ಆಗುತ್ತೆ. ಇಡೀ ಸರ್ಕಾರವೇ ನಿಂತು ಇಲ್ಲಿ ಉಪಚುನಾವಣೆ ನಡೆಸಲಿದೆ. ಇನ್ನೂ ಬೈ ಎಲೆಕ್ಷನ್ ಘೋಷಣೆ ಆಗಿಲ್ಲ, ಈಗಲೇ ನೀವು ಹೀಗೆ ಮಾಡಿದರೆ ಹೇಗೆ? ಮುಂದೆ ಚುನಾವಣೆ ಗೆಲ್ಲೋದು ಹೇಗೆ? ಟಿಕೆಟ್ ಆಕಾಂಕ್ಷಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ತರಾಟೆ ತಗೆದುಕೊಂಡರು.
ಶಿಗ್ಗಾಂವ ಭೇಟಿ ನೀಡಿದ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ''ಇಂದಿನ ಬೆಳವಣಿಗೆಗಳು ನನಗೆ ಬೇಸರ ತರಿಸಿದೆ. ಇಂಥ ಬೆಳವಣಿಗೆಗಳಿಂದಲೇ ಶಿಗ್ಗಾವಿಯಲ್ಲಿ ನಾವು ಸೋಲುತ್ತಾ ಬಂದಿದ್ದೇವೆ. ಅಶಿಸ್ತು ನಡೆಯಲ್ಲ, ಎಲ್ಲರೂ ಒಂದುಗೂಡಿ ಚುನಾವಣೆ ಎದುರಿಸಬೇಕು ಎಂದು ಆಕಾಂಕ್ಷಿಗಳಿಗೆ ತಾಕೀತು ಮಾಡಿದರು.
''ನಮ್ಮ ಅಧ್ಯಕ್ಷರು, ಸಿಎಂ ಮುಂಚಿತವಾಗಿ ಹೇಳಿದ್ದು, ಶಿಗ್ಗಾಂವಿ ಕ್ಷೇತ್ರದ ಬಗ್ಗೆ ಇಂಚಿಂಚೂ ಮಾಹಿತಿ ತಗೆದುಕೊಂಡಿದ್ದೇವೆ. ನನಗೆ ಇಲ್ಲಿ ಪಕ್ಷ ಸಂಘಟನೆ ಮಾಡಲು ಸೂಚನೆ ನೀಡಿದ್ದಾರೆ. ಯಾರಿಗೆ ಟಿಕೆಟ್ ಕೊಡೋದು, ಬಿಡೋದು ಪಕ್ಷ ತೀರ್ಮಾನ ಮಾಡುತ್ತೆ'' ಎಂದ ಅವರು, ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರಿಂದ ಗಲಾಟೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ, ''ಪಕ್ಷ ಅಂದರೆ ಶಿಸ್ತು. ಈ ತರ ಆದಾಗ ಬೇರೆ ದಾರಿಯಲ್ಲಿ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ . ಲಿಂಗಾಯತರು, ಮುಸ್ಲಿಮರು, ಒಬಿಸಿ ಎಲ್ಲರೂ ಟಿಕೇಟ್ ಕೇಳ್ತಾ ಇದ್ದಾರೆ. ಒಳಒಪ್ಪಂದ ರಾಜಕಾರಣಕ್ಕೆ ಈ ಬಾರಿ ಅವಕಾಶ ಇಲ್ಲ. ಈ ಬಾರಿ ಬಹಳಷ್ಟು ಮಂತ್ರಿಗಳು, ಶಾಸಕರು ಈ ಕ್ಷೇತ್ರದಲ್ಲೇ ಇರ್ತಾರೆ. ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶ ಇರಲ್ಲ'' ಎಂದು ತಿಳಿಸಿದರು.
''ಅಭ್ಯರ್ಥಿ ಪಾಪ್ಯುಲರ್ ಇರಬೇಕು. ಎಲ್ಲಾ ಸಮುದಾಯಗಳು ಒಪ್ಪಬೇಕು ಅಂಥವರಿಗೆ ಇಲ್ಲಿ ಟಿಕೆಟ್ ಕೊಡುತ್ತೇವೆ. ನಮಗೆ ಚುನಾವಣೆ ಮಾಡೋದಷ್ಟೆ ಜವಾಬ್ದಾರಿ. ಬಣಗಳು ಒಂದಾಗಬೇಕು, ಇಲ್ಲದಿದ್ದರೆ, ಮತದಾರರು ಒಂದಾಗ್ತಾರೆ'' ಎಂದ ಅವರು, ಈ ಸಲ ಯಾವುದೇ ಡ್ಯಾಮೇಜ್ ಆಗಲ್ಲ. ಸಾಮೂಹಿಕ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇನೆ'' ಎಂದರು.
ಶಿಗ್ಗಾಂವ ಉಪಚುನಾವಣೆ ನಾವೇ ಗೆಲ್ಲುತ್ತೇವೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿ, ಅವರ ಪಕ್ಷ, ಅವರು ಏನ್ ಹೇಳಿದ್ರೂ ನಮಗೆ ಸಂಬಂಧ ಪಟ್ಟಿದ್ದಲ್ಲ. ಇಲ್ಲಿ 6 ತಿಂಗಳ ಮುಂಚೆ ನಾವೂ ತಯಾರಿ ಮಾಡ್ತಾ ಇದ್ಧೇವೆ. ನಾವೇ ಗೆಲ್ಲುತ್ತೇವೆ. ಶಿಗ್ಗಾಂವ ಕ್ಷೇತ್ರದಲ್ಲಿ ಕಾಂಗ್ರೆಸ್ ಬಣಗಳ ಗುದ್ದಾಟದ ವಿಚಾರ ತಿಳಿದೇ ಮುಂಚಿತವಾಗಿಯೇ ಬಂದಿದ್ದೇವೆ. ಆಕಾಂಕ್ಷಿ ಎಲ್ಲಿಂದ ಬಂದ? ಯಾವ ಕಡೆಯಿಂದ ಬಂದ ನೋಡಲ್ಲ ಗೆಲುವಷ್ಟೆ ನಮಗೆ ಮಾನದಂಡ ಸರ್ವೆ ಮಾಡಿಸಿ ಟಿಕೆಟ್ ಕೊಡುತ್ತೇವೆ. ಗೆಲ್ಲುತ್ತಾನೆ ಅಂತ ಸರ್ವೆಲಿ ಬಂದರೆ, ಎಸ್ಸಿ, ಎಸ್ಟಿ ಅಭ್ಯರ್ಥಿಗೂ ಅವಕಾಶ ಕೊಡುತ್ತೇವೆ'' ಎಂದು ಸಚಿವ ಜಾರಕಿಹೊಳಿ ತಿಳಿಸಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡಿ, ''ಕಾನೂನಿನಲ್ಲಿ ತನಿಖೆ ನಡೆಯಲಿ, ಅಂತಿಮ ವರದಿ ಬರಲಿ ಮೇಲ್ನೋಟಕ್ಕೆ ಇದು ಆರೋಪ ಅಷ್ಟೆ. ಈಗಾಗಲೇ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿದ್ದಾರೆ. ಎಸ್ಐಟಿ ತನಿಖೆ ಪೂರ್ತಿ ಆಗಲಿ ಸತ್ಯಾಂಶ ಬರುತ್ತೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ಸತೀಶ್ ಜಾರಕಿಹೊಳಿ ಅವರು, ಶಿಗ್ಗಾಂವ ಉಪಚುನಾವಣೆ ಟಿಕೆಟ್ ಆಕಾಂಕ್ಷಿಗಳಾದ ಅಜ್ಜಂಫೀರ್ ಖಾದ್ರಿ, ಯಾಸೀರ್ ಖಾನ್ ಪಠಾಣ್, ಸೋಮಣ್ಣ ಬೇವಿನಮರದ, ಆರ್. ಶಂಕರ್, ರಾಜು ಕುನ್ನೂರ್ ಅವರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ, ಖಡಕ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಎಲ್ಲ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ: ಡಿ.ಕೆ. ಶಿವಕುಮಾರ್ ಟಾಂಗ್ - D K Sivakumar