ಬೆಳಗಾವಿ: ಕಿತ್ತೂರು ಉತ್ಸವಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿಗಳು ವೀರರಾಣಿ ಚನ್ನಮ್ಮನ ಶೌರ್ಯ, ಪರಾಕ್ರಮ ಮತ್ತು ಸಾಹಸಗಾಥೆ ಕೇಳಿ ರೋಮಾಂಚನಗೊಂಡರು. ಅಲ್ಲದೇ ಚನ್ನಮ್ಮನ ಪರ ಘೋಷಣೆ ಮೊಳಗಿಸಿ, ನಾವೂ ಚನ್ನಮ್ಮ ಎಂದು ಝೇಂಕರಿಸಿದ್ದು, ವಿಶೇಷವಾಗಿತ್ತು.
ರಾಣಿ ಚನ್ನಮ್ಮಳ 200ನೇ ವಿಜಯೋತ್ಸವ ಕಿತ್ತೂರು ನಾಡು ಸಂಭ್ರಮಪಡುವಂತೆ ಮಾಡಿದೆ. ಉತ್ಸವ ನಿಮಿತ್ತ ಆಯೋಜಿಸಿದ್ದ ಮಹಿಳಾ ಗೋಷ್ಠಿಗೆ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಾಹಿತಿಗಳು, ವಿದ್ವಾಂಸರು ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಚನ್ನಮ್ಮನ ಬಗ್ಗೆ ಆಡಿದ ಮಾತುಗಳನ್ನು ಕೇಳಿ ಅಭಿಮಾನಪಟ್ಟರು.
'ಈಟಿವಿ ಭಾರತ' ಜೊತೆಗೆ ಮಾತನಾಡಿದ ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಇಮಾಮ್ ಬಿ.ಶಿಲೇದಾರ, "ನಾವು ಇಂದು ಇಷ್ಟು ಸ್ವತಂತ್ರ ಮತ್ತು ಸ್ವಚ್ಛಂದವಾಗಿ ಓಡಾಡುತ್ತಿದ್ದೇವೆ ಎಂದರೆ ಅದಕ್ಕೆ ರಾಣಿ ಚನ್ನಮ್ಮನವರ ಹೋರಾಟವೇ ಕಾರಣ. ಗೋಷ್ಠಿಯಲ್ಲಿ ಹಲವಾರು ವಿಷಯಗಳನ್ನು ತಿಳಿದುಕೊಂಡೆವು. ಪ್ರತಿಯೊಬ್ಬರಿಗೂ ಚನ್ನಮ್ಮ ಸ್ಫೂರ್ತಿ. ನಾನೂ ಕೂಡ ಚನ್ನಮ್ಮನಂತಾಗಲು ಪ್ರಯತ್ನಿಸುವೆ" ಎಂದರು.
ವಿದ್ಯಾರ್ಥಿನಿ ನಾಗರತ್ನಾ ಕಾಡಯ್ಯನವರಮಠ ಮಾತನಾಡಿ, "ಕಿತ್ತೂರು ನಾಡಿನಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ. ಮೂರು ದಿನಗಳ ಕಿತ್ತೂರು ಉತ್ಸವದಲ್ಲಿ ಚನ್ನಮ್ಮನ ಬಗ್ಗೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತಿದೆ. ಇದು ನಮಗೆ ಬಹಳಷ್ಟು ಖುಷಿ ಕೊಡುತ್ತಿದೆ. ಯಾವುದೇ ತಂತ್ರಜ್ಞಾನ ಇಲ್ಲದ ಕಾಲಘಟ್ಟದಲ್ಲಿ ನಮ್ಮ ಪೂರ್ವಜರು ಅಷ್ಟೊಂದು ದೊಡ್ಡ ಸಾಧನೆ ಮಾಡಿದ್ದಾರೆ. ಈಗ ನಾವು ಇನ್ನೂ ಹೆಚ್ಚಿನ ಸಾಧನೆಗೈಯ್ಯುವ ಮೂಲಕ ನಾಡಿಗೆ ಕೀರ್ತಿ ತರುವ ಕೆಲಸ ಮಾಡುತ್ತೇವೆ" ಎಂದು ಹೇಳಿದರು.
"ಬ್ರಿಟಿಷರ ವಿರುದ್ಧ ರಾಣಿ ಚನ್ನಮ್ಮ ಹೇಗೆ ದಿಗ್ವಿಜಯ ಸಾಧಿಸಿದರು?. ಸರ್ದಾರ ಗುರುಸಿದ್ದಪ್ಪ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಅವರ ಪರಾಕ್ರಮ ಹೇಗಿತ್ತು? ಮತ್ತು ಕಿತ್ತೂರು ಸಂಸ್ಥಾನದ ಇತಿಹಾಸದ ಕುರಿತು ಸಾಕಷ್ಟು ಮಾಹಿತಿ ನಮಗೆ ತಿಳಿಯಿತು" ಎನ್ನುವುದು ವಿದ್ಯಾರ್ಥಿನಿ ಸುಕನ್ಯಾ ಹುಬ್ಬಳ್ಳಿ ಅವರ ಮಾತು.
ಇದನ್ನೂ ಓದಿ: ಕಿತ್ತೂರು ಉತ್ಸವ ಫಲಪುಷ್ಪ ಪ್ರದರ್ಶನ: ಮರಳಿನಲ್ಲಿ ರಾಣಿ ಚೆನ್ನಮ್ಮ, ಸಿರಿಧಾನ್ಯಗಳಲ್ಲಿ ಅರಳಿದ ಮಡಿವಾಳ ಅಜ್ಜ