ಬೆಂಗಳೂರು: ಮಾಜಿ ಸಚಿವೆ, ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷರಾಗಿದ್ದ ನಾಗಮ್ಮ ಕೇಶವಮೂರ್ತಿ, ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್, ನಟಿ, ನಿರೂಪಕಿ ಅಪರ್ಣಾ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಸಂತಾಪ ಸಲ್ಲಿಸಲಾಯಿತು. ವಿಧಾನಸಭೆ ಕಲಾಪ ಬೆಳಗ್ಗೆ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಅವರು, ಸಂತಾಪ ಸೂಚನಾ ನಿರ್ಣಯ ಮಂಡಿಸಿದರು.
ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆಯನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಗಮ್ಮ ಕೇಶವಮೂರ್ತಿಯವರು ಸಾಮಾಜಿಕ ಸೇವೆಯಲ್ಲಿ ಮದರ್ ಥೆರೇಸಾ, ರಾಜಕಾರಣದಲ್ಲಿ ದಾವಣಗೆರೆ ಇಂದಿರಾಗಾಂಧಿ ಎಂದೇ ಖ್ಯಾತಿ ಪಡೆದಿದ್ದರು. ಶ್ರೀನಿವಾಸ ಪ್ರಸಾದ್ ಅವರು, ಆರು ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ ಶೋಷಿತರ, ದೀನ ದಲಿತರ ಹಿಂದುಳಿದವರ ಧ್ವನಿಯಾಗಿದ್ದರು ಎಂದು ಗುಣಗಾನ ಮಾಡಿದರು.

ನಟ, ನಿರ್ದೇಶಕ ದ್ವಾರಕೀಶ್ ಅವರು ಖ್ಯಾತ ಹಾಸ್ಯನಟರಾಗಿದ್ದು, ನಿರ್ಮಾಪಕ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಿಂಗಾಪುರದಲ್ಲಿ ರಾಜಾ ಕುಳ್ಳ ಸಿನಿಮಾ ವಿದೇಶದಲ್ಲೇ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎಂದು ಸ್ಮರಿಸಿದರು. ಸಾಹಿತಿ ಕಮಲಾ ಹಂಪನಾ ಅವರು ಜೈನ ಧರ್ಮ, ಹಳಗನ್ನಡ ಗ್ರಂಥ ಸಂಪಾದನೆ ಮಾಡಿದ್ದರು. ದಾನ ಚಿಂತಾಮಣಿ, ಅತ್ತಿಮಬ್ಬೆ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು. ನಾಡೋಜ ಗೌರವವೂ ಅವರಿಗೆ ಸಂದಿತ್ತು ಎಂದು ಹೇಳಿದರು.
ಇನ್ನೂ ನಿರೂಪಕಿ ಅಪರ್ಣಾ ಅವರು ಶುದ್ಧ ಕನ್ನಡದಲ್ಲಿ ನಿರೂಪಣೆ ಮಾಡುವ ಕಲೆ ಮೈಗೂಡಿಸಿಕೊಂಡಿದ್ದರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಎಂದು ಹೇಳಿದರು. ಖ್ಯಾತ ಧರ್ಮಗುರುವಾಗಿದ್ದ ಖಾಝಿ ಅಸ್ಸೈ ಯದ್ ಫಝಲ್ ಕೋಐಮ್ಮ ತಂಙಳ್ ಅಲ್ ಬುಖಾರಿ ಅವರು ಜಾತಿ, ಧರ್ಮ, ಮತ ಭೇದವಿಲ್ಲದೆ ಮಾನವೀಯತೆಯಿಂದ ಕೂಡಿದ ವ್ಯಕ್ತಿ ಎಂದು ಸ್ಮರಿಸಿದ ಸಿಎಂ, ಇತ್ತೀಚೆಗೆ ಅಗಲಿದ ಎಲ್ಲಾ ಗಣ್ಯರಿಗೂ ಶಾಂತಿ ದೊರೆಯಲಿ, ಸಾವಿನ ದುಃಖ ಭರಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ, ಹಿತೈಷಿಗಳಿಗೆ ಹಾಗೂ ಬಂಧುಗಳಿಗೆ ದೊರೆಯಲಿ ಎಂದು ಕೋರಿದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ನಾನು ಶಾಸಕನಾಗಿದ್ದಾಗ ಮತ್ತು ಶಾಸಕನಾಗುವ ಮೊದಲು ಸದಸ್ಯರಾಗಿದ್ದವರು ನಿಧನರಾಗಿದ್ದಾರೆ. ಅವರು ಈ ಸದನಕ್ಕೆ ಗೌರವ ತರುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಸಾಹಿತ್ಯ, ಚಿತ್ರರಂಗಕ್ಕೂ ಗೌರವ ತರುವ ರೀತಿಯಲ್ಲಿ ಕೆಲಸ ಮಾಡಿದ ಗಣ್ಯರೂ ಅಗಲಿದ್ದಾರೆ. ಇವರೆಲ್ಲರಿಗೂ ಸಂತಾಪವನ್ನು ಸೂಚಿಸುವುದಾಗಿ ತಿಳಿಸಿದರು. ನಾಗಮ್ಮ ಕೇಶವಮೂರ್ತಿಯವರು ಮಹಿಳೆಯರಿಗೆ ದಾರಿದೀಪವಾಗಿದ್ದವರು ಎಂದು ಸ್ಮರಿಸಿದರು. ಶ್ರೀನಿವಾಸ್ ಪ್ರಸಾದ್ ಅವರು ಯಾವುದೇ ಪಕ್ಷದಲ್ಲಿದ್ದರೂ ತಮ್ಮ ತನವನ್ನು ಬಿಟ್ಟುಕೊಟ್ಟಿರಲಿಲ್ಲ. ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಕೆಲಸ ಮಾಡಿದ್ದರು. ಅಪರ್ಣಾ ಅವರ ಧ್ವನಿ ಮೆಟ್ರೋದಲ್ಲಿ ಉಳಿದಿದೆ. ದ್ವಾರಕೀಶ್ ಅವರು ಹಾಸ್ಯನಟರಾಗಿ ಹೆಚ್ಚು ಚಿರಪರಿಚಿತರಾದವರು ಎಂದು ಮೃತರ ಗುಣಗಾನ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಶ್ರೀನಿವಾಸಪ್ರಸಾದ್ ಸ್ನೇಹಮಯಿಯಾಗಿದ್ದರು. ದ್ವಾರಕೀಶ್ ಅವರು ಆತ್ಮೀಯರಾಗಿದ್ದರೂ ಅವರ ಸಿನಿಮಾವನ್ನು ಕ್ಯೂನಲ್ಲಿ ನಿಂತು ಟಿಕೆಟ್ ಪಡೆದು ವೀಕ್ಷಿಸಲಾಗುತ್ತಿತ್ತು. ಕಮಲಾ ಹಂಪನಾ ಅವರ ಪುತ್ರನ ಜೊತೆ ತಾವೂ ವ್ಯಾಸಂಗ ಮಾಡುವಾಗ ರಾಜಾಜಿನಗರದಲ್ಲಿ ಸಮಯ ಕಳೆದಿದ್ದೆವು ಎಂದು ಮೃತರ, ಗಣ್ಯರ ನಡುವಿನ ಒಡನಾಟವನ್ನು ಮೆಲುಕು ಹಾಕಿದರು.

ಸಚಿವ ಡಾ.ಹೆಚ್.ಸಿಮಹದೇವಪ್ಪ ಮಾತನಾಡಿ, 14 ಜನ ಮಹನೀಯರು ನಮ್ಮನ್ನು ಅಗಲಿದ್ದಾರೆ. ಹುಟ್ಟು ಸ್ವಾಭಾವಿಕ, ಸಾವು ಖಚಿತ. ಬದುಕಿನ ಪ್ರಯಾಣ ಅಂತ್ಯಗೊಳಿಸಿದವರಿಗೆ ನಾವು ಸಂತಾಪವನ್ನು ಸಲ್ಲಿಸುತ್ತಿದ್ದೇವೆ ಎಂದರು. ಸದಸ್ಯರಾದ ಶ್ರೀನಿವಾಸ್ ಹರೀಶ್ ಪೂಂಜ, ದರ್ಶನ್ ಧ್ರುವನಾರಾಯಣ, ಕೂಡ್ಲಿಗಿ ಶ್ರೀನಿವಾಸ್, ಶೈಲೇಂದ್ರ ಬೆಲ್ದಾಳೆ, ಹರೀಶ್ ಬಿ.ಪಿ., ಆರ್. ಕೃಷ್ಣಮೂರ್ತಿ, ಬಿ.ವೈ.ವಿಜಯೇಂದ್ರ, ಬಸಂತಪ್ಪ, ಶಾರದ ಪೂರ್ಯ ನಾಯಕ್, ಶ್ರೀವತ್ಸ ಇವರೆಲ್ಲಾ ಸಂತಾಪ ನಿರ್ಣಯದ ಮೇಲೆ ಮಾತನಾಡಿ ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿದರು. ನಂತರ ಸದನದಲ್ಲಿ ಎರಡು ನಿಮಿಷ ಮೌನ ಆಚರಿಸಿ, ಅಗಲಿದ ಗಣ್ಯರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಓದಿ: ಮುಂಗಾರು ಅಧಿವೇಶನ: ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ - BPL Card