ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ಪೈಕಿ ಏಳು ಮಂದಿಗೆ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಇಂದು ಸಂಜೆಯೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಕಳೆದ ಶುಕ್ರವಾರ ನಟ ದರ್ಶನ್, ನಟಿ ಪವಿತ್ರಾಗೌಡ, ಪ್ರದೋಷ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್ ಹಾಗೂ ಜಗದೀಶ್ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಶನಿವಾರ ಹಾಗೂ ಭಾನುವಾರ ನ್ಯಾಯಾಲಯಕ್ಕೆ ರಜೆ ಹಿನ್ನೆಲೆಯಲ್ಲಿ ಇಂದು ಶ್ಯೂರಿಟಿ ಸೇರಿ ಜಾಮೀನಿನ ಷರತ್ತುಗಳನ್ನು ಕೆಳಹಂತದ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಜಾಮೀನು ಆದೇಶ ಪ್ರತಿ ದೊರೆತ ಬಳಿಕ ಆರೋಪಿಗಳಿರುವ ವಿವಿಧ ಕಾರಾಗೃಹಗಳ ಜೈಲಾಧಿಕಾರಿಗಳಿಗೆ ಆದೇಶ ಪ್ರತಿ ತೋರಿಸಬೇಕಾಗುತ್ತದೆ. ಆ ಬಳಿಕವಷ್ಟೇ ಬಿಡುಗಡೆ ಪ್ರಕ್ರಿಯೆಯನ್ನು ಜೈಲಾಧಿಕಾರಿಗಳು ಮಾಡಲಿದ್ದಾರೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡ, ಪ್ರದೋಷ್ ಸೇರಿ ವಿವಿಧ ಜೈಲಿನಲ್ಲಿರುವ ಆರೋಪಿಗಳು ಬಿಡುಗಡೆಯಾಗಲಿದ್ದಾರೆ.
ವೈದ್ಯಕೀಯ ಕಾರಣಕ್ಕಾಗಿ ಮಧ್ಯಂತರ ಜಾಮೀನಿನ ಮೇರೆಗೆ ಹೊರಗಿರುವ ದರ್ಶನ್, ರೆಗ್ಯೂಲರ್ ಬೇಲ್ ಆದೇಶ ಪ್ರತಿಯನ್ನು ಬಳ್ಳಾರಿ ಜೈಲಾಧಿಕಾರಿಗಳಿಗೆ ತೋರಿಸಿದ ನಂತರ ಮಾನ್ಯವಾಗಲಿದೆ. ಕೊಲೆ ಪ್ರಕರಣದಲ್ಲಿ ಈಗಾಗಲೇ 11 ಜನರ ಆರೋಪಿಗಳಿಗೆ ಜಾಮೀನು ಲಭಿಸಿದೆ.
ಇದನ್ನೂ ಓದಿ: ನಟ ದರ್ಶನ್ಗೆ ಜಾಮೀನು: ಅಭಿಮಾನಿಗಳನ್ನು ನಿಯಂತ್ರಿಸಲು ಆಸ್ಪತ್ರೆ, ಮನೆಗೆ ಪೊಲೀಸ್ ಭದ್ರತೆ