ದಾವಣಗೆರೆ: ಧಾರಾಕಾರ ಮಳೆಯಿಂದ ತಾಲೂಕಿನ ಕುರ್ಕಿ ಗ್ರಾಮದ ಸಮೀಪ ರೈಲ್ವೆ ಕೆಳಸೇತುವೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು, ಟ್ರ್ಯಾಕ್ಟರ್ ಮುಳುಗಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಅಪಾಯಕ್ಕೆ ಸಿಲುಕಿದ್ದ 10 ಜನರನ್ನು ರಕ್ಷಣೆ ಮಾಡಲಾಗಿದೆ.
ಚನ್ನಗಿರಿ ತಾಲೂಕಿನ ಲಕ್ಷ್ಮಿಸಾಗರ ಸೇರಿದಂತೆ ಚಿಕ್ಕಗಂಗೂರು ಗ್ರಾಮಗಳ ಅಡಕೆ ಕೆಲಸಗಾರರಾದ ಅಶೋಕ್, ರಾಕೇಶ್, ಆದರ್ಶ, ಬಸವರಾಜ್, ವೆಂಕಟೇಶ್, ರುದ್ರಪ್ಪ, ಆನಂದ್, ರಮೇಶ್, ಗೋವಿಂದಪ್ಪ ಹಾಗೂ ತೀರ್ಥಪ್ಪ ಎಂಬವರನ್ನು ರಕ್ಷಿಸಲಾಗಿದೆ. ತುಮಕೂರು – ದಾವಣಗೆರೆ – ಚಿತ್ರದುರ್ಗ ನೇರ ರೈಲು ಮಾರ್ಗದ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಕುರ್ಕಿ ಗ್ರಾಮದ ಸಮೀಪ ನಡೆಯುತ್ತಿದೆ. ಹೀಗಾಗಿ, ಕುರ್ಕಿಯಲ್ಲಿನ ಕೆಳಸೇತುವೆ ಮುಖಾಂತರ ವಾಹನಗಳು ಸಾಗಬೇಕಾದ ಪರಿಸ್ಥಿತಿ ಇದೆ.
ದಾವಣಗೆರೆ ತಾಲೂಕಿನಲ್ಲಿ ಹೆಚ್ಚು ಮಳೆಯಾದ ಕಾರಣ ಈ ಕುರ್ಕಿ ಸೇತುವೆ ಕೆಳ ಭಾಗದಲ್ಲಿ ಹೆಚ್ಚು ನೀರು ಸಂಗ್ರಹವಾಗಿತ್ತು. ಅಡಿಕೆ ತುಂಬಿದ ಟ್ರ್ಯಾಕ್ಟರ್ ಆನಗೋಡಿನಿಂದ ಕುರ್ಕಿ ಮಾರ್ಗವಾಗಿ ಚಿಕ್ಕಗಂಗೂರಿಗೆ ತೆರಳುತ್ತಿತ್ತು. ರಾತ್ರಿ ನೀರಿನ ಮಟ್ಟ ಏರಿಕೆಯಾಗಿದ್ದನ್ನು ಗಮನಿಸದ ಚಾಲಕ ಹಾಗೆಯೇ ಟ್ರ್ಯಾಕ್ಟರ್ ಚಲಾಯಿಸಿದ್ದಾನೆ. ಆದರೆ, ಎಂಜಿನ್ ಸ್ಥಗಿತಗೊಂಡು ಟ್ರ್ಯಾಕ್ಟರ್ ನಿಂತ ಪರಿಣಾಮ ಅನಾಹುತಕ್ಕೆ ಕಾರಣವಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಮುಳುಗಿದ್ದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಜನರನ್ನು ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದಾರೆ. ಜೊತೆಗೆ, ಲಕ್ಷಾಂತರ ರೂ. ಮೌಲ್ಯದ ಅಡಕೆ ಹೊತ್ತಿದ್ದ ಟ್ರ್ಯಾಕ್ಟರ್ ಅನ್ನು ನೀರಿನಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಎನ್. ನಾಗೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್. ಅಶೋಕಕುಮಾರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: ಕಲಬುರಗಿ: ಭೀಮಾ ನದಿಯಲ್ಲಿ ಬಾಲಕಿಯರಿಬ್ಬರು ಸಾವು; ಹೃದಯಾಘಾತದಿಂದ ವ್ಯಕ್ತಿ ಮೃತ