ಬೆಂಗಳೂರು: ಕೇಂದ್ರ ಸರಕಾರ ನಿನ್ನೆ ಪಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂಪಾಯಿ ನಿಧಿ ಮೀಸಲಿಡಲಾಗಿದೆ. ಇದು ತಂತ್ರಜ್ಞಾನ ಅಭಿವೃದ್ಧಿಗೆ ಅದರಲ್ಲೂ ಬೆಂಗಳೂರು ಮೂಲದ ಉದ್ಯಮಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಬಿಜೆಪಿ ಲೋಕಸಭೆ ಸದಸ್ಯ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂಪಾಯಿ ಹಣವನ್ನು ಕಾರ್ಪಸ್ ಫಂಡ್ ಆಗಿ ಮೀಸಲಿಡಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಯೋಜನೆಯಿಂದ ದೇಶದ ಸಿಲಿಕಾನ್ ಸಿಟಿ ಬೆಂಗಳೂರು ನಗರದ ಉದ್ದಿಮೆಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
-
Biggest takeaway from #ViksitBharatBudget for Bengaluru is the setting up of a corpus of Rs 1 lakh crore with 50-year interest-free loan for research and innovation.
— Tejasvi Surya (@Tejasvi_Surya) February 1, 2024
Namma Bengaluru leads the way in innovation with institutes like IISc, NIMHANS, HAL, NAL, IIM, IIIT & other… pic.twitter.com/PLWbVLXTIq
ಈ ಯೋಜನೆಯ ಪ್ರಕಾರ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿನ ಸಂಸ್ಥೆಗಳಿಗೆ ಮುಂದಿನ 50 ವರ್ಷಗಳವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ರಾಷ್ಟ್ರದ ಅಭಿವೃದ್ಧಿಗೆ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಾದ ಐ.ಐ.ಎಸ್.ಸಿ, ನಿಮ್ಹಾನ್ಸ್, ಹೆಚ್.ಎ.ಎಲ್, ಎನ್.ಎ.ಎಲ್, ಐ.ಐ.ಐ.ಟಿ ಮತ್ತು ಇತರ ಅನೇಕ ಸಂಸ್ಥೆಗಳು ಈ ನಿಧಿ ಸ್ಥಾಪನೆಯಿಂದ ಹೆಚ್ಚಿನ ಪ್ರಯೋಜನ ಪಡೆಯಲಿವೆ ಎಂದು ಹೇಳಿದ್ದಾರೆ.
ದೇಶದ ಶೇ.60ರಷ್ಟು ಬಯೋಟೆಕ್ ಕಂಪನಿಗಳು ಬೆಂಗಳೂರು ನಗರದಿಂದಲೇ ಕಾರ್ಯ ನಿರ್ವಹಣೆ ಮಾಡುತ್ತಿವೆ. ಕರ್ನಾಟಕವು 400ಕ್ಕೂ ಅಧಿಕ ಸಂಶೋಧನಾಧರಿತ, 85 ಚಿಪ್ ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ. ಪ್ರತಿ 4 ರಲ್ಲಿ 1 ಕಂಪನಿಯು ಡೀಪ್ ಟೆಕ್, ಆರೋಗ್ಯ, ಹಣಕಾಸು ತಂತ್ರಜ್ಞಾನದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಬೆಂಗಳೂರಿನಲ್ಲಿ ಫಂಡಿಂಗ್ ಹೊಂದಿರುವುದು ವಿಶೇಷ.
ಬೆಂಗಳೂರು ನಗರ 800 ಕಾಲೇಜುಗಳನ್ನು ಹೊಂದಿದ್ದು, ಅವುಗಳಲ್ಲಿ 100 ಎಂಜಿನಿಯರಿಂಗ್ ಕಾಲೇಜುಗಳೇ ಇರುವುದು ಗಮನಾರ್ಹ. ತಂತ್ರಜ್ಞಾನ ಸಂಶೋಧನೆ, ಅಭಿವೃದ್ಧಿಯಲ್ಲಿ ನಿರತರಾಗಿರುವ ಐ.ಐ.ಎಸ್.ಸಿ, ಐ.ಐ.ಎಂ.ಬಿ, ಐ.ಐ.ಐ.ಟಿಗಳು ಬೆಂಗಳೂರಿನಲ್ಲಿ ಇರುವುದರಿಂದ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಮುಂಗಡಪತ್ರದಲ್ಲಿ ಮಂಡಿಸಿದ ಕಾರ್ಪಸ್ ಫಂಡ್ ಯೋಜನೆಯಿಂದ ಅನುಕೂಲವಾಗಲಿದೆ ಎಂದಿದ್ದಾರೆ.
ಮುಂಗಡ ಪತ್ರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿರುವಂತೆ, ಡೀಪ್ ಟೆಕ್ನಾಲಜಿ ಅಭಿವೃದ್ಧಿ, ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರತೆ ಸಾಧಿಸುವ ನಿಟ್ಟಿನಲ್ಲಿ ನೂತನ ಯೋಜನೆ ಘೋಷಣೆ ಮಾಡಿರುವುದು ವಿಶೇಷವಾಗಿದೆ. ಯುವಜನತೆಯ ಕಲ್ಯಾಣಕ್ಕಾಗಿ ಹಲವಾರು ಗಮನಾರ್ಹ ಯೋಜನೆಗಳನ್ನು ಜಾರಿಗೆ ತಂದಿರುವ ಪ್ರಧಾನಿ ನರೆಂದ್ರ ಮೋದಿಯವರ ನೇತೃತ್ವದ ಸರ್ಕಾರದ, ಕಳೆದ 10 ವರ್ಷಗಳ ಅವಧಿಯಲ್ಲಿ, ಸ್ಕಿಲ್ ಇಂಡಿಯಾ ಯೋಜನೆ ಅಡಿಯಲ್ಲಿ 1.4 ಕೋಟಿ ಯುವ ಜನತೆಗೆ ಕೌಶಲ್ಯ ತರಬೇತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಕಸಿತ ಭಾರತ ಅಲ್ಲ, ವಿನಾಶಕಾರಿ ಭಾರತ ಮಾಡುವ ಬಜೆಟ್ ಇದು: ಸಿಎಂ ಸಿದ್ದರಾಮಯ್ಯ