ಕೊಪ್ಪಳ: ತುಂಗಭದ್ರಾ ಅಣೆಕಟ್ಟೆಯ ಚೈನ್ ಲಿಂಕ್ ತುಂಡಾದ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಸ್ಟಾಪ್ ಗೇಟ್ ಅಳವಡಿಕೆಯ ಮೊದಲ ಹಂತದ ಪ್ಲೇಟ್ ಅಳವಡಿಕೆ ಕೆಲಸ ಇಂದು ಸಂಜೆ ಯಶಸ್ವಿಯಾಗಿ ನಡೆಯಿತು. ತಜ್ಞ ಕಣ್ಣಯ್ಯ ಮತ್ತು ತಂಡದ ಸದಸ್ಯರನ್ನು ಸಚಿವರಾದ ಶಿವರಾಜ ತಂಗಡಗಿ ಮತ್ತು ಜಮೀರ್ ಅಹ್ಮದ್ ಖಾನ್ ಸಿಹಿ ತಿನಿಸಿ ಅಭಿನಂದಿಸಿದರು.
ಒಟ್ಟು ಐದು ಪ್ಲೇಟ್ ಅಳವಡಿಸಬೇಕಿದೆ. ಶನಿವಾರದ ವೇಳೆಗೆ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.
ಸ್ಟಾಪ್ ಗೇಟ್ ಅಳವಡಿಕೆಯ ಮೊದಲ ಹಂತ ಯಶಸ್ವಿಯಾದ ಕುರಿತು ಸಚಿವರಾದ ಜಮೀರ್ ಅಹಮದ್ ಖಾನ್ ಮತ್ತು ಶಿವರಾಜ ತಂಗಡಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ದೂರವಾಣಿ ಕರೆ ಮಾಡಿ ಮೂಲಕ ಮಾಹಿತಿ ನೀಡಿದರು.
ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕರಾದ ಗವಿಯಪ್ಪ, ಕಂಪ್ಲಿ ಗಣೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದ ಮೂರು ದಿನಗಳಿಂದ ಇಲ್ಲಿನ ವೈಕುಂಠ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದ ಇಬ್ಬರು ಸಚಿವರು ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಟಿಬಿ ಡ್ಯಾಂ ಗೇಟ್ ಅಳವಡಿಕೆ ಯಶಸ್ವಿಯಾಗಲೆಂದು ದೇವರ ಮೊರೆ ಹೋದ ರೈತರು - TB Dam Gate