ಮೈಸೂರು: ಬರದಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನು ಕಾಡಿನ ಕೆರೆಗಳಲ್ಲಿಯೂ ನೀರಿನ ಅಭಾವ ಎದುರಾಗಿದ್ದು, ಪ್ರಾಣಿ ಪಕ್ಷಿಗಳ ದಾಹ ನೀಗಿಸಲು ಟ್ಯಾಂಕರ್‌ಗಳ ಮೂಲಕ ಕೆರೆ ತುಂಬಿಸಲು ಅರಣ್ಯ ಇಲಾಖೆ ಮುಂದಾಗಿದೆ. ಸಣ್ಣ ಪ್ರಾಣಿ ಪಕ್ಷಿಗಳಿಗೆ ಅಲ್ಪ ನೀರು ಸಾಕು ಹೇಗೋ ಜೀವ ತಣ್ಣಗಾಗಿಸಿಕೊಳ್ಳುತ್ತವೆ. ಆನೆ, ಹುಲಿ, ಕಾಡುಕೋಣದಂತಹ ದೈತ್ಯ ಜೀವಿಗಳ ಪಾಡು ಹೇಳತೀರದು. ಈ ಬಿರು ಬೇಸಿಯಲ್ಲಿ ಜೀವ ಜಲಕ್ಕಾಗಿ ಪರಿತಪಿಸುವಂತಾಗಿದೆ.
ಕಳೆದ ಬಾರಿ ಸಕಾಲಕ್ಕೆ ಬಾರದ ಮುಂಗಾರು, ಹಿಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಉಷ್ಣಾಂಶದ ಪ್ರಮಾಣದ ಹೆಚ್ಚಾಗಿದೆ. ನೆರೆಯ ತಮಿಳುನಾಡಿನೊಂದಿಗೆ ಕಾವೇರಿಯನ್ನು ಹಂಚಿಕೊಂಡ ಪರಿಣಾಮ ಮೈಸೂರು ಭಾಗದ ಜಲಾಶಯಗಳೂ ಬತ್ತಿ ಹೋಗಿವೆ. ಪರಿಸ್ಥಿತಿ ಹೀಗಿರುವಾಗ ಕಾಡೊಳಗಿನ ಬತ್ತಿ ಹೋದ ಕೆರೆಕಟ್ಟೆಗಳನ್ನು ಟ್ಯಾಂಕರ್ಗಳ ಮೂಲಕ ನೀರು ತುಂಬಿಸಿ ಕಾಡುಪ್ರಾಣಿಗಳ ದಾಹವನ್ನು ತಣಿಸುವ ಪ್ರಯತ್ನವನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದಾರೆ.
ಕಾಡಿನ ಪ್ರಾಣಿ-ಪಕ್ಷಿಗಳಿಗೆ ಇಲ್ಲಿನ ಕೆರೆ ಕಟ್ಟೆಗಳೇ ನೀರಿನ ಮೂಲ. ಅವು ಇದೇ ನೀರನ್ನು ಕುಡಿಯಬೇಕು, ಇದೇ ನೀರಿನಲ್ಲಿ ಕುಳಿತು ವಿಶ್ರಾಂತಿ ಪಡೆದು ಜೀವ ತಂಪಾಗಿಸಿಕೊಳ್ಳಬೇಕು. ಬೇಸಿಗೆ ಆರಂಭವಾಗುತ್ತಿದ್ದಂತೆ ಕೆರೆಕಟ್ಟೆಗಳು ಬತ್ತುವುದರಿಂದ ಪ್ರಾಣಿಗಳು ನೀರನ್ನು ಹರಸಿ ನೂರಾರು ಕಿಮೀ ವಲಸೆ ಆರಂಭಿಸುತ್ತವೆ. ಈ ವೇಳೆ, ಮಾರ್ಗ ಮಧ್ಯೆ ಮಾನವನೊಂದಿಗೆ ಸಂಘರ್ಷಕ್ಕೂ ಇಳಿಸುವ ಸಾಧ್ಯತೆ ಇರುತ್ತದೆ. ಇದನ್ನು ಮನಗಂಡ ಅರಣ್ಯ ಇಲಾಖೆ ಪ್ರಾಣಿಗಳ ದಾಹವನ್ನು ತಣಿಸಿ ಅವುಗಳು ನೀರಿಗಾಗಿ ಅಲೆಯುವುದನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ಪ್ರತಿಬಾರಿಯಂತೆಯೇ ಈ ಬಾರಿಯೂ ಟ್ಯಾಂಕರ್ಗಳ ಮೂಲಕ ನೀರನ್ನು ತುಂಬಿಸುತ್ತಿದ್ದಾರೆ. ಇನ್ನು ಕಾಡಿನ ಕೆಲ ಕೆರೆಗಳ ಸಮೀಪ ಈ ಹಿಂದೆಯೇ ಕೊಳವೆ ಬಾವಿಗಳನ್ನು ತೆಗೆಯಲಾಗಿದ್ದು, ಅವುಗಳ ಮೂಲಕವೂ ಸ್ಥಳೀಯ ಕೆರೆಗಳಿಗೆ ನೀರಿನ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ ಕಾಡಂಚಿನಲ್ಲಿರುವ ಕೆರೆಗಳಿಗೆ ಸ್ಥಳೀಯ ಜಮೀನುಗಳ ಕೊಳವೆ ಬಾವಿಗಳ ಸಹಾಯ ಪಡೆದು ನೀರು ತುಂಬಿಸಲಾಗಿದೆ.
ಇದನ್ನೂ ಓದಿ: ಕಾಡಿನಿಂದ ನಾಡಿಗೆ ಬಂದು ಮನೆಗೆ ನುಗ್ಗಿದ ಜಿಂಕೆ: ವಿಡಿಯೋ - Deer
ಈ ಬಾರಿಯ ಬೇಸಿಗೆ ಅರಣ್ಯ ಇಲಾಖೆಗೆ ಹೆಚ್ಚಿನ ಸವಾಲನ್ನು ನೀಡಿದೆ. ಕಾಡನ್ನು ಬೆಂಕಿಯಿಂದ ರಕ್ಷಿಸಿಕೊಳ್ಳುವ ಜೊತೆಗೆ ಕಾಡಿನ ನೀರಿನ ಮೂಲಗಳು ಬತ್ತಿ ಹೋಗದಂತೆಯೂ ನೋಡಿಕೊಳ್ಳಬೇಕು. ಈ ಎರಡೂ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಿರುವ ನಾಗರಹೊಳೆ ಅರಣ್ಯ ಇಲಾಖೆಯು ಕಾಡಿನ ಮೇಲೆ ಹದ್ದಿನ ಕಣ್ಣಿಟ್ಟು ಕೆಲಸ ಮಾಡುತ್ತಿದೆ. ತಿಂಗಳ ಹಿಂದಷ್ಟೇ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗಿದೆ. ಈ ಬಾರಿಯೂ ಮಳೆ ಬೀಳುವ ಮುನ್ಸೂಚನೆ ಕಾಣುತ್ತಿಲ್ಲ. ಇದರಿಂದಾಗಿ ಕೊಳವೆ ಬಾವಿಗಳೂ ಬತ್ತಿ ಹೋಗುತ್ತಿದ್ದು, ಆತಂಕ ಶುರುವಾಗಿದೆ. ಮಳೆಗಾಗಿ ಎದುರುನೋಡುವಂತಾಗಿದೆ.
ಇದನ್ನೂ ಓದಿ: ಬತ್ತಿದ ವರದಾ ನದಿಗೆ ಕೊಳವೆಬಾವಿಯಿಂದ ನೀರು ಹರಿಸುತ್ತಿರುವ ರೈತ - Borewell Water To River
ಎಂತಹ ಬೇಸಿಗೆಯಾದರೂ ಸಂಪೂರ್ಣವಾಗಿ ಬತ್ತದ ತಾರಕ ಮತ್ತು ಕಬಿನಿ ಜಲಾಶಯಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ನೀರಿನ ಮೂಲವಾಗಿವೆ. ನಾಗರಹೊಳೆಯ ಶೇ.60ರಷ್ಟು ಜೀವಿಗಳು ಕಬಿನಿ ಮತ್ತು ತಾರಕ ಜಲಾಶಯದ ನೀರನ್ನೇ ಅವಲಂಭಿಸಿವೆ. ಇದು ನಾಗರಹೊಳೆಗೆ ಒಂದು ವರದಾನ ಕೂಡ. ಬೀಸಿಲಿನ ತಾಪ ಏರಿಕೆಯಾಗುತ್ತಿದ್ದಂತೆ ಕಬಿನಿ ಹಿನ್ನೀರಿನಲ್ಲಿ ಆನೆಗಳ ಹಿಂಡು ಬೀಡುಬಿಡುತ್ತವೆ. ಸಮೃದ್ಧವಾದ ಹಿನ್ನೀನಲ್ಲಿ ವಿಶ್ರಾಂತಿ ಪಡೆಯುತ್ತಾ ಬೇಸಿಗೆಯಿಂದ ರಕ್ಷಿಸಿಕೊಳ್ಳುತ್ತವೆ.
ಬೇಸಿಗೆಯಲ್ಲಿ ಸಹಜವಾಗಿ ನೀರಿನ ಮೂಲಗಳು ಬತ್ತಿ ಹೋಗುತ್ತವೆ. ಆದರಿಂದ ಈ ಬಾರಿಯೂ ಕಾಡಿನ ಕೆರೆಕಟ್ಟಿಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಿ ಪ್ರಾಣಿಗಳ ಬಾಯಾರಿಕೆಯನ್ನು ತಣಿಸಲಾಗುತ್ತಿದೆ ಎನ್ನುತ್ತಾರೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿಸಿಎ ಹರ್ಷಕುಮಾರ್ ಚಿಕ್ಕನರಗುಂದ.
ಇದನ್ನೂ ಓದಿ: ಬಿಸಿಲಿನ ಝಳಕ್ಕೆ ಬೆಂಡಾದ ಬೆಂಗಳೂರಿಗರು: ರಾಜ್ಯಾದ್ಯಂತ ಇನ್ನೂ ಒಂದು ವಾರ ಬಿಸಿ ಗಾಳಿ - Heatwave In Karnataka