ಬೆಂಗಳೂರು: ತಮಿಳುನಾಡು ಹಿಜ್ಬ್ - ಉತ್ - ತಹ್ರೀರ್ ಪ್ರಕರಣದ ಪ್ರಮುಖ ಆರೋಪಿಯನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಅಜೀಜ್ ಅಹಮದ್ ಅಲಿಯಾಸ್ ಜಲೀಲ್ ಅಜೀಜ್ ಅಹ್ಮದ್ ಬಂಧಿತ ಆರೋಪಿ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಯಿತು ಎಂದು ಎನ್ಐಎ ತಿಳಿಸಿದೆ.
ಉಗ್ರಗಾಮಿ ಹಾಗೂ ಇಸ್ಲಾಂ ಮೂಲಭೂತ ಸಿದ್ಧಾಂತದಿಂದ ಪ್ರಭಾವಿತವಾಗಿ ಜಗತ್ತಿನ ಇಸ್ಲಾಮೀಕರಣ ಮತ್ತು ಇಸ್ಲಾಮಿಕ್ ಕಾನೂನು ಸ್ಥಾಪಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಆರು ಮಂದಿ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿಕೊಂಡಿತ್ತು. ಹಿಜ್ಬ್ -ಉತ್ - ತಹ್ರೀರ್‌ನ ಸಂಸ್ಥಾಪಕ ತಾಕಿ ಅಲ್-ದಿನ್ ಅಲ್-ನಭಾನಿ ಬರೆದ ಸಂವಿಧಾನವನ್ನು ಭಾರತದಲ್ಲಿ ಜಾರಿಗೊಳಿಸುವ ಗುರಿಯನ್ನು ಆರೋಪಿಗಳು ಹೊಂದಿದ್ದರು.
ಎನ್‌ಐಎ ತನಿಖೆಯ ಪ್ರಕಾರ, ಆರೋಪಿಗಳು ಅನೇಕ ಯುವಕರನ್ನು ಒಗ್ಗೂಡಿಸಿ ಹಿಜ್ಬ್ - ಉತ್-ತಹ್ರೀರ್‌ನ ಸಿದ್ಧಾಂತಗಳನ್ನು ಅವರ ತಲೆಗೆ ತುಂಬುವ, ಹಾಗೂ ತಮ್ಮ ಗುರಿ ಸಾಧಿಸಲು ಶತ್ರು ಶಕ್ತಿಗಳಿಂದ ಮಿಲಿಟರಿ ಸಹಾಯ (ನುಸ್ರಾ) ಪಡೆಯುವ ಶಿಬಿರಗಳನ್ನು (ಬಯಾನ್) ಸಂಘಟಿಸಿದ್ದರು. ಅಂತಹ ರಹಸ್ಯ ಬಯಾನ್‌ಗಳನ್ನು ಸಂಘಟಿಸುವ ಪ್ರಮುಖ ಆರೋಪಿಗಳಲ್ಲಿ ಅಜೀಜ್ ಅಹಮದ್ ಸಹ ಓರ್ವನಾಗಿದ್ದ. ಸದ್ಯ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿರುವುದಾಗಿ ಎನ್‌ಐಎ ತಿಳಿಸಿದೆ.
ಇದನ್ನೂ ಓದಿ: ಭಯೋತ್ಪಾದಕ ಸಂಘಟನೆ ಜೊತೆ ನಂಟು ಶಂಕೆ: ಶಿರಸಿಯಲ್ಲಿ ಓರ್ವನ ವಶಕ್ಕೆ ಪಡೆದ ಎನ್ಐಎ ತಂಡ - NIA takes man into custody