ಬೆಂಗಳೂರು: ಟಿ-20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿದ್ದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ವಿಧಾನ ಪರಿಷತ್ನಲ್ಲಿ ಅಭಿನಂದನೆ ಸಲ್ಲಿಸಿದ್ದು, ರಾಜ್ಯ ಸರ್ಕಾರ ದ್ರಾವಿಡ್ಗೆ ಸನ್ಮಾನಿಸಿ ಗೌರವಿಸಬೇಕು ಎಂದು ಒತ್ತಾಯಿಸಲಾಯಿತು. ವಿಧಾನ ಪರಿಷತ್ ಕಲಾಪದಲ್ಲಿ ಚುನಾವಣಾ ಪ್ರಸ್ತಾಪಗಳ ನಂತರ ಬಿಜೆಪಿ ಸದಸ್ಯ ಡಿಎಸ್ ಅರುಣ್, ಈ ಬಾರಿಯ ಟಿ-20 ವಿಶ್ವಕಪ್ ಗೆದ್ದಿದ್ದಕ್ಕೆ ಭಾರತ ಕ್ರಿಕೆಟ್ ತಂಡ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಪ್ರಸ್ತಾಪ ಮಂಡಿಸಿದರು.
ಭಾರತದಲ್ಲಿ ಕ್ರಿಕೆಟ್ ಭಾರತೀಯರ ರಿಲಿಜಿಯನ್ ರೀತಿ ಆಗಿದೆ. ಈವರೆಗೂ ಭಾರತ ನಾಲ್ಕು ಬಾರಿ ವಿಶ್ವಕಪ್ ಗೆದ್ದಿದೆ. 1983ರಲ್ಲಿ ಮೊದಲ ವಿಶ್ವಕಪ್ ಗೆದ್ದಿತ್ತು. ಕಪಿಲ್‌ದೇವ್ ನಾಯಕತ್ವದಲ್ಲಿ ಗೆದ್ದ ನಂತರ 2007 ರಲ್ಲಿ ಟಿ-20, 2011 ರಲ್ಲಿ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. 2024 ರಲ್ಲಿ ಮತ್ತೆ ಟಿ-20 ಕಪ್ ಗೆದ್ದಿದೆ. ಮಿಸ್ಟರ್ ಡಿಪೆಂಡಬಲ್, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಸ್ಪೂರ್ತಿ, ಕಪ್ ಗೆಲ್ಲುವಲ್ಲಿ ಸಹಕಾರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡಿದ ಪ್ರಕಾಶ್ ರಾಥೋಡ್, ದ್ರಾವಿಡ್ಗೆ ಅಭಿನಂದನೆ ಸಲ್ಲಿಸುವ ಪ್ರಸ್ತಾವನೆಗೆ ಸಹಮತ ವ್ಯಕ್ತಪಡಿಸಿದರು. ನಾನು ಬಿಯುಸಿಸಿಗೆ ಆಡುವಾಗ ರಾಹುಲ್ ನನ್ನ ತಂಡದಲ್ಲಿ ಆಡುತ್ತಿದ್ದರು. ರಣಜಿ ಆಡುವ ಮೊದಲು ದ್ರಾವಿಡ್, ವೆಂಕಟೇಶ್ ಪ್ರಸಾದ್ ಸೇರಿ ಹಲವರನ್ನು ಲಂಡನ್ಗೆ ಕರೆದುಕೊಂಡು ಹೋಗಿ ಆಟ ಆಡಿಸಿದ್ದೆವು. ಆಗ ಬೌಲಿಂಗ್, ಕೀಪಿಂಗ್ ಮಾಡುತ್ತಿದ್ದರು. ಹೆಚ್ಚು ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಆದರೆ ನಂತರ ಒಳ್ಳೆಯ ಬ್ಯಾಟರ್ ಆಗಿ ಮತ್ತು ಈಗ ಕೋಚ್ ಆಗಿ ಭಾರತಕ್ಕೆ ಕೊಡುಗೆ ನೀಡಿದ್ದಾರೆ. ಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆ ಸದನ ಅಭಿನಂದನೆ ಸಲ್ಲಿಸುವ ಜೊತೆಗೆ ದ್ರಾವಿಡ್ಗೆ ರಾಜ್ಯ ಸರ್ಕಾರ ವಿಶೇಷ ಸನ್ಮಾನ ಮಾಡಬೇಕು ಎನ್ನುವ ಮನವಿ ಮಾಡಿದರು.
ನಂತರ ಸಭಾಪತಿ ಬಸವರಾಜ ಹೊರಟ್ಟಿ ಈ ಪ್ರಸ್ತಾವನೆಯನ್ನು ಸದನ ಅನುಮೋದಿಸುತ್ತದೆ ಎಂದು ಪ್ರಕಟಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ಕಪ್ ಗೆಲ್ಲಲು ಸೂರ್ಯ ಕುಮಾರ್ ಯಾದವ್ ಹಿಡಿದ ಕ್ಯಾಚ್ ಮುಖ್ಯ, ಅವರು ನಮ್ಮ ರಾಜ್ಯದ ಅಳಿಯ ಕೂಡ, ಅವರಿಗೂ ಅಭಿನಂದನೆ ಸಲ್ಲಿಸಬೇಕು ಎಂದರು. ಇದಕ್ಕೆ ಸಹಮತಿಸಿದ ಸಭಾಪತಿಗಳು ಅವರ ಹೆಸರನ್ನೂ ಸೇರಿಸಲಾಗಿದೆ ಎಂದು ಪ್ರಕಟಿಸಿದರು. ನಂತರ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಇತ್ತೀಚೆಗೆ ನಿಧನರಾದ ನಿರೂಪಕಿ ಅಪರ್ಣಾ ಹೆಸರಲ್ಲಿ ಪ್ರಶಸ್ತಿ ನೀಡಲು ಮನವಿ ಮಾಡಿದರು. ಇದನ್ನು ಪರಿಶೀಲಿಸಿ ಪರಿಗಣಿಸಿ ಎಂದು ಸಭಾಪತಿ ಸೂಚಿಸಿದರು.