ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರಿಗೆ ಮುಡಾ (ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರ) ನೀಡಿರುವ ಬದಲಿ ನಿವೇಶನದಲ್ಲಿ ಅಕ್ರಮ ನಡೆದಿದೆ. ಹೀಗಾಗಿ ಅವರಿಗೆ ನೀಡಿರುವ 14 ಬದಲಿ ನಿವೇಶನಗಳನ್ನು ವಾಪಸ್ ಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ಅವರಿಂದು ಮುಡಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಬಗ್ಗೆ ದಾಖಲೆಸಮೇತ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. ಅವರು ಎಲ್ಲವನ್ನೂ ಪರಿಶೀಲಿಸಿ, ಸಿಎಂಗೆ ನೋಟಿಸ್ ನೀಡಿದ್ದಾರೆ. ಈ ವಿಚಾರ ಕುರಿತು ಕ್ಯಾಬಿನೆಟ್ನಲ್ಲಿ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳೇ ನಿಮ್ಮದು ತಪ್ಪಿಲ್ಲ ಎಂದರೆ ಯಾಕೆ ಭಯ ಪಡುತ್ತೀರಿ?. ನನ್ನನ್ನು ಮುಖ್ಯಮಂತ್ರಿಗಳು ಬ್ಲಾಕ್‌ಮೇಲರ್ ಎಂದು ಕರೆದಿದ್ದಾರೆ. ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಬದಲಾಗಿ ಕಾನೂನುರೀತ್ಯ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ಪಡೆದಿರುವ ಬದಲಿ ನಿವೇಶನದಲ್ಲಿ ಅಕ್ರಮ ನಡೆದಿದೆ. ಸೈಟ್ ಹಂಚಿಕೆಯಲ್ಲಿ ತಪ್ಪಾಗಿದೆ. ಮುಖ್ಯಮಂತ್ರಿಗಳ ಪತ್ನಿ ಹೆಸರಿನಲ್ಲಿ ದಾನ ಪಡೆದಿರುವುದೂ ಸಹ ಕಾನೂನು ರೀತ್ಯಾ ನಡೆದಿಲ್ಲ. ಇದಕ್ಕೆ ಬದಲಾಗಿ ಬದಲಿ ನಿವೇಶನ ಪಡೆದಿರುವುದು ಸರಿಯಿಲ್ಲ. ಈ ಎಲ್ಲ ಮಾಹಿತಿಯನ್ನು ರಾಜ್ಯಪಾಲರಿಗೆ ಒದಗಿಸಿದ್ದೇನೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಭೇಟಿಗೆ ಅವಕಾಶ ಕೊಡಿಸಿ: ನಿನ್ನೆ ರಾಜ್ಯಕ್ಕೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಉತ್ತಮ ರಾಜಕಾರಣಿ ಎಂದು ಹೊಗಳಿದ್ದಾರೆ. ನನಗೆ ರಾಹುಲ್ ಗಾಂಧಿ ಅವರ ಭೇಟಿಗೆ ಒಂದು ಅವಕಾಶ ಕೊಡಿಸಿ, ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ಪಡೆದ ಬದಲಿ ನಿವೇಶನಗಳ ಬಗ್ಗೆ ಅವರಿಗೆ 15 ಪ್ರಶ್ನೆಗಳನ್ನು ಕೇಳುತ್ತೇನೆ. ಅವರು, ಸಿದ್ದರಾಮಯ್ಯರದ್ದು ತಪ್ಪೇನಿಲ್ಲ ಎಂದು ಹೇಳಿದರೆ ನಾನು ದೆಹಲಿಯಿಂದ ಬೆಂಗಳೂರಿಗೆ ಬಂದು ಸಿದ್ದರಾಮಯ್ಯ ನವರ ಮನೆಗೆ ಹೋಗಿ, ಅವರ ಕ್ಷಮೆ ಕೇಳುತ್ತೇನೆ. ಬಳಿಕ ರಾಜ್ಯದ ಜನರ ಕ್ಷಮೆ ಕೇಳಿ ಕೇಸ್ ವಾಪಸ್ ಪಡೆಯುತ್ತೇನೆ ಎಂದರು.
ಇದನ್ನೂ ಓದಿ: ಮುಡಾ: ಕಾನೂನಾತ್ಮಕ, ರಾಜಕೀಯ ಹೋರಾಟಕ್ಕೆ ಸಿದ್ಧ- ಸಿಎಂ ಸಿದ್ದರಾಮಯ್ಯ - CM Siddaramaiah