ಬೆಂಗಳೂರು: ತಮ್ಮ ಕುರಿತ ಗೌಪ್ಯ ಮಾಹಿತಿಯನ್ನು ನ್ಯಾಷನಲ್ ರೆಸ್ಟೋರೆಂಟ್ ಆಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ)ಗೆ ನೀಡದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗದ(ಸಿಸಿಐ)ಕ್ಕೆ ನಿರ್ದೇಶನ ನೀಡಬೇಕು ಎಂದು ಗ್ರಾಹಕರ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ತಲುಪಿಸುವ ಸ್ವಿಗ್ಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ರಜಾಕಾಲದ ನ್ಯಾಯಪೀಠ, ಸಿಸಿಐ ಕಚೇರಿ ದೆಹಲಿಯಲ್ಲಿ ಇರುವುದರಿಂದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ಗೆ ವಿಚಾರಣೆ ನಡೆಸುವುದಕ್ಕೆ ನ್ಯಾಯಾಂಗ ವ್ಯಾಪ್ತಿ ಇದೆಯೇ? ಎಂಬ ಪ್ರಶ್ನೆಯಿದೆ ಎಂದು ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಸಜ್ಜನ್ ಪೂವಯ್ಯ, ಸ್ವಿಗ್ಗಿ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ನೋಂದಾಯಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಈ ಸಂಬಂಧ ಅರ್ಜಿ ವಿಚಾರಣೆ ನಡೆಸಬಹುದಾಗಿದೆ ಎಂದು ತಿಳಿಸಿದರು. ವಾದ ಆಲಿಸಿದ ನ್ಯಾಯಪೀಠ ಮುಂದುವರಿದ ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದೆ.
ಸ್ವಿಗ್ಗಿ ಮತ್ತು ಜೊಮಾಟೋ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿವೆ ಎಂಬುದಾಗಿ ಎನ್‌ಆರ್‌ಎಐ ಆರೋಪಗಳಿಗೆ ಸಂಬಂಧಿಸಿದಂತೆ ಸ್ವಿಗ್ಗಿ ಗೌಪ್ಯ ಮಾಹಿತಿಯನ್ನು ಸಿಸಿಐ ಮಹಾನಿರ್ದೇಶನಾಲಯ ಬಹಿರಂಗ ಪಡಿಸಿದೆ. ಈ ರೀತಿಯಲ್ಲಿ ಗೌಪ್ಯ ಮಾಹಿತಿ ಬಹಿಂಗ ಪಡಿಸಿರುವುದು ಸ್ಪರ್ಧಾತ್ಮಕ ಕಾಯಿದೆಯ ಉಲ್ಲಂಘನೆಯಾಗಿದೆ. ಅರ್ಜಿದಾರನ ಸಂಸ್ಥೆಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿದಾರರ ಮನವಿಗಳು: ಎನ್‌ಆರ್‌ಎಐ ಮನವಿಯ ಆಧಾರದಲ್ಲಿ ನಡೆದ ತನಿಖೆಯ ಭಾಗವಾಗಿ, ಸೆಪ್ಟೆಂಬರ್ 2022 ಮತ್ತು ಅಕ್ಟೋಬರ್ 2023ರ ನಡುವೆ ಸಿಸಿಐನ ಡಿಜಿಯ ಪ್ರಶ್ನೆಗಳಿಗೆ ಪ್ರತಿಕ್ರಿಯೆಸಿದ್ದು, ಸ್ವಿಗ್ಗಿ ಅತ್ಯಂತ ಗೌಪ್ಯ ಮಾಹಿತಿಯನ್ನು ಸಲ್ಲಿಸಿದ್ದು, ತನಿಖೆ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಳಿಸಿದೆ. ಆದರೆ, ಸ್ವಿಗ್ಗಿ ಮತ್ತು ಜೊಮಾಟೊ ಎರಡಕ್ಕೂ ಸಂಬಂಧಿಸಿದ ತನಿಖಾ ವರದಿಯ ಗೌಪ್ಯ ಮಾಹಿತಿಯನ್ನು ಎನ್‌ಆರ್‌ಎಐ ಮನವಿ ಮಾಡಿತು. ಈ ಸಂಬಂಧ ಸಿಐಐ 2024ರ ಏಪ್ರಿಲ್ 24 ಎಂದು ಇದಕ್ಕೆ ಅನುಮತಿ ನೀಡಿ ಆದೇಶಿಸಿದೆ.
ಈ ರೀತಿಯಲ್ಲಿ ಸ್ವಿಗ್ಗಿ ಗೌಪ್ಯ ಮಾಹಿತಿಯನ್ನು ಎನ್‌ಆರ್‌ಎಐಗೆ ಲಭ್ಯವಾಗುವಂತೆ ಮಾಡುವುದು ಸಿಸಿಐನ ನಿಯಮಗಳಿಗೆ ವಿರುದ್ಧವಾಗಿದೆ. ಅಲ್ಲದೇ ವ್ಯಾಪಾರ ರಹಸ್ಯಗಳು ಮತ್ತು ಹೆಚ್ಚು ಗೌಪ್ಯ ವ್ಯವಹಾರಗಳ ಮಾಹಿತಿಯನ್ನು ಒಳಗೊಂಡಿರುವುದರಿಂದ ಸ್ವಿಗ್ಗಿಗೆ ಸರಿಪಡಿಸಲಾಗದಷ್ಟು ಹಾನಿಯನ್ನುಂಟು ಮಾಡುತ್ತದೆ.
ಅಲ್ಲದೇ ಸ್ವಿಗ್ಗಿಗೆ ಸೇರಿದ ಗೌಪ್ಯ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಬಹಿರಂಗಪಡಿಸುವುದು ಸ್ಪರ್ಧಾ ಕಾಯ್ದೆ, 2002 ರ ಸೆಕ್ಷನ್ 57 ರ ಅಡಿ ಗೌಪ್ಯ ಮಾಹಿತಿಯನ್ನು ಸಂರಕ್ಷಿಸುವುದು ಸಿಸಿಐನ ಜವಾಬ್ದಾರಿಯನ್ನು ಉಲ್ಲಂಘಿಸಿದಂತಾಗಲಿದೆ. ಅಲ್ಲದೇ, ಎನ್‌ಆರ್‌ಎಐ ಸ್ವಿಗ್ಗಿಯ ವಾಣಿಜ್ಯದ ಸೂಕ್ಷ್ಮ ಮಾಹಿತಿಯನ್ನು ಮೂರನೇ ವ್ಯಕ್ತಿಗಳಿಗೆ ಬಹಿರಂಗಪಡಿಸಿರುವುದು ಎಂದು ಸ್ವಿಗ್ಗಿ ತನ್ನ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಇದು ವ್ಯವಹಾರ ಸೂಕ್ಷ್ಮ ಮಾಹಿತಿ ಒಳಗೊಂಡಿರುವುದರಿಂದ ಸ್ವಿಗ್ಗಿಯ ವ್ಯವಹಾರ ಚಟುವಟಿಕೆಗಳನ್ನು ನಡೆಸುವ ಹಕ್ಕಿನ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಸಿಸಿಐನ ಏಪ್ರಿಲ್ 24 ರ ಆದೇಶ ರದ್ದುಪಡಿಸಬೇಕು. ಈಗಾಗಲೇ ಸ್ವಿಗ್ಗಿ ಮಾಹಿತಿಯನ್ನು ಒದಗಿಸಿದ್ದರೆ, ಅಂತಹ ಗೌಪ್ಯ ದಾಖಲೆಗಳನ್ನು ನಾಶಪಡಿಸಲು ಆದೇಶಿಸಬೇಕು ಕೋರಿದ್ದಾರೆ.
ಅಲ್ಲದೇ, ಸ್ವಿಗ್ಗಿ ಕುರಿತ ಗೌಪ್ಯ ಮಾಹಿತಿ ಎನ್‌ಆರ್‌ಎಐ ಅವರಿಗೆ ಪರಿಶೀಲನೆ ಮಾಡುವುದಕ್ಕೆ ಅವಕಾಶ ಕಲ್ಪಿಸಿರುವ ಆದೇಶವನ್ನು ರದ್ದುಗೊಳಿಸಬೇಕು. ಪ್ರಕರಣ ಸಂಬಂಧ ಯಾವುದೇ ದಾಖಲೆಗಳನ್ನು ಎನ್‌ಆರ್‌ಎಐ ಒದಗಿಸಬಾರದು. ಎನ್‌ಆರ್‌ಎಐಗೆ ಈ ವರೆಗೆ ಲಭ್ಯವಿರುವ ಎಲ್ಲ ರೀತಿಯ ಮಾಹಿತಿಯನ್ನು ನಾಶ ಪಡಿಸಲು ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಸಿಸಿಐ ಮುಂದೆ ಎನ್‌ಆರ್‌ಎಐನ ಮನವಿಗಳು: ರಸ್ಟೋರೆಂಟ್ನಿಂದ ಆಹಾರ ಪದಾರ್ಥಗಳನ್ನು ಎಲ್ಲಿಗೆ ತಲುಪಿಸಲಾಗುತ್ತಿದೆ. ಅಥವಾ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ರೆಸ್ಟೋರೆಂಟ್ಗಳಿಗೆ ಮಾಹಿತಿ ನೀಡುತ್ತಿಲ್ಲ. ಈ ದತ್ತಾಂಶ ಮರೆ ಮಾಚಲಾಗುತ್ತಿದೆ.
ಜತೆಗೆ, ಆಹಾರ ವಿತರಣೆ ಜವಾಬ್ದಾರಿಯನ್ನು ರೆಸ್ಟೋರೆಂಟ್ಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತಿದೆ. ಸ್ವಿಗ್ಗಿ ಮತ್ತು ಜೊಮಾಟೊ ಸಂಸ್ಥೆಗಳು ತಮ್ಮ ವೇದಿಕೆಗಳಲ್ಲಿ ತಮ್ಮದೇ ಕ್ಲೌಡ್ ಕಿಚನ್(ಪಾರ್ಸೆಲ್ ಸೇವೆಗೆ)ಗಳನ್ನು ಪಟ್ಟಿ ಮಾಡಿದೆ. ಇದರಿಂದ ಆಂತರಿಕ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತಿದೆ.
ಏಕ ಪಕ್ಷೀಯವಾಗಿ ಚೌಕಾಸಿ ಮಾಡಲಾಗುತ್ತಿದೆ. ಹೆಚ್ಚು ಪ್ರಮಾಣದ ಕಮಿಷನ್ ದರಗಳನ್ನು ವಿಧಿಸುವುದರಿಂದ ರೆಸ್ಟೋರೆಂಟ್ಗಳಿಗೆ ಕಡಿಮೆ ಆದಾಯ ಬರುತ್ತಿದೆ. ರಿಯಾಯಿತಿಗಳ ಹೆಚ್ಚಳವು ರೆಸ್ಟೋರೆಂಟ್ ವೆಚ್ಚಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಮನವಿ ಸಲ್ಲಿಸಿದ್ದರು.
ಈ ಸಂಬಂಧದ ವಿಚಾರಣೆ ನಡೆಸಿದ್ದ ಸಿಸಿಐ ಸ್ವಿಗ್ಗಿ, ಜೊಮಾಟೋ ಕಂಪನಿಗಳ ಗೌಪ್ಯ ಮಾಹಿತಿಯನ್ನು ಎನ್‌ಆರ್‌ಎಐಗೆ ಲಭ್ಯವಾಗುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸ್ವಿಗ್ಗಿ ಹೈಕೋರ್ಟ್ ಮೆಟ್ಟಿಲೇರಿದೆ.
ಇದನ್ನೂಓದಿ:ಮೇ 25, 26ರಂದು ಕುದುರೆ ರೇಸ್ ನಡೆಸುವ ಕುರಿತ ನಿರ್ಧಾರ ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - High Court