ಮೈಸೂರು: ಸಹಾಯಕನಿಂದಲೇ ಸ್ವಾಮೀಜಿ ಬರ್ಬರವಾಗಿ ಕೊಲೆಯಾದ ಘಟನೆ ನಗರದ ಸಿದ್ಧಾರ್ಥ ನಗರದಲ್ಲಿರುವ ಅನ್ನದಾನೇಶ್ವರ ಮಠದಲ್ಲಿ ಸೋಮವಾರ ನಡೆದಿದೆ. ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (92) ಸಹಾಯಕನಿಂದಲೇ ಕೊಲೆಯಾದವರು. ಅವರ ಸಹಾಯಕನಾಗಿದ್ದ ರವಿ (60) ಕೊಲೆ ಆರೋಪಿಯಾಗಿದ್ದು, ಹತ್ಯೆ ಸ್ಥಳದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾನಮತ್ತನಾಗಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ನಜರ್ಬಾದ್ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಸ್ವಾಮೀಜಿಯವರ ಸಂಬಂಧಿಕರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಬುದ್ಧಿವಾದ ಹೇಳಿದ್ದರಿಂದ ಹುಲ್ಲು ಕತ್ತರಿಸುವ ಮಚ್ಚಿನಿಂದ ಸ್ವಾಮೀಜಿ ಮೇಲೆ ಸಹಾಕ ರವಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಪಾನಪತ್ತನಾಗಿ, ವಿಷ ಸೇವಿಸಿ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಎಂದು ಸ್ವಾಮೀಜಿ ಅವರ ಅಣ್ಣನ ಮಗ ಲೋಕೇಶ್ ಮಾಹಿತಿ ನೀಡಿದ್ದಾರೆ.
ಆರೋಪಿ ರವಿಯನ್ನು 2.5 ವರ್ಷದಿಂದ ಸ್ವಾಮೀಜಿ ಅವರ ನೋಡಿಕೊಳ್ಳಲು ನೇಮಕ ಮಾಡಲಾಗಿತ್ತು. ಟಿ ನರಸೀಪುರ ತಾಲೂಕಿನ ಹುಕ್ಕಲ್ಗೇರಿ ಗ್ರಾಮದ ರವಿ ನಂಬಿಕಸ್ಥನಾಗಿದ್ದ. ನಿನ್ನೆ ದುಡ್ಡು ಕೇಳಲು ಬಂದ ತನ್ನ ಹೆಂಡತಿಯನ್ನು ರವಿ ಹೊಡೆದಿದ್ದ. ಈ ಬಗ್ಗೆ ಸ್ವಾಮೀಜಿ ಬೈದು, ಬುದ್ಧಿವಾದ ಹೇಳಿದ್ದರು. ಇಂದು ಬೆಳಗ್ಗೆ 9.30 ಗಂಟೆಯಾದರೂ ಸಹಾಯಕ ತಿಂಡಿ ತೆಗೆದುಕೊಂಡು ಹೋಗಲು ಬಂದಿರಲಿಲ್ಲ. ಆಗ ಅಕ್ಕ ಮತ್ತು ಮಗ ಸ್ವಾಮೀಜಿಗೆ ತಿಂಡಿ ತಂದಾಗ ಬರ್ಬರವಾಗಿ ಹತ್ಯೆ ಮಾಡಿರುವುದು ಗೊತ್ತಾಗಿದೆ. ಸ್ವಾಮೀಜಿ ಮೃತದೇಹದ ಪಕ್ಕದಲ್ಲೇ ವಿಷಸೇವಿಸಿ ರವಿ ಕುಳಿತಿದ್ದ. ಕೊಠಡಿ ರಕ್ತವಾಗಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ತಕ್ಷಣ ಪೊಲೀಸರು ಬಂದು ಅಸ್ವಸ್ಥನಾಗಿದ್ದ ರವಿಯನ್ನು ಆಸ್ಪತ್ರೆಗೆ ಸೇರಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಠದ ಆವರಣದಲ್ಲೇ ಅಂತ್ಯ ಸಂಸ್ಕಾರ: ಜೀವಂತವಾಗಿದ್ದಾಗಲೇ ಸ್ವಾಮೀಜಿ ಸಿದ್ಧ ಮಾಡಿಟ್ಟುಕೊಂಡಿದ್ದ ಗದ್ದುಗೆಯಲ್ಲೇ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಲೋಕೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ವಾಮೀಜಿ ಕೊಲೆ ಬಗ್ಗೆ ತನಿಖೆ ನಡೆಸಬೇಕು. ಮಠವು ನಗರದ ಪ್ರಮುಖ ಸ್ಥಳದಲ್ಲಿದ್ದು, ಅದರ ಮೇಲೆ ಕೆಲವು ರಿಯಲ್ ಎಸ್ಟೇಟ್ ವ್ಯಕ್ತಿಗಳ ಕಣ್ಣು ಬಿದ್ದಿತ್ತು. ಜೊತೆಗೆ ಮಠದ ಪಕ್ಕದಲ್ಲೇ ಸರ್ಕಾರಿ ಕೆರೆ ಇದ್ದು, ಅದರ ಉಳಿವಿಗಾಗಿ ಸ್ವಾಮೀಜಿ ಹೋರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
ಶಿವಾನಂದ ಸ್ವಾಮೀಜಿಗಳು ಸಂಸ್ಕೃತ ಪಾಠ ಶಾಲೆಯ ನಿವೃತ್ತ ಉಪನ್ಯಾಸಕರಾಗಿದ್ದರು. ಸಿದ್ಧಾರ್ಥ ನಗರದ ಬಳಿ ಅನ್ನದಾನೇಶ್ವರ ಮಠ ಸ್ಥಾಪಿಸಿ, ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದರು.
ಇದನ್ನೂ ಓದಿ: ಬೆಳಗಾವಿ: ಮಕ್ಕಳ ಮಾರಾಟ ಜಾಲದ ಐವರ ಬಂಧನ; ಪ್ಲಾನ್ ಮಾಡಿ ಖೆಡ್ಡಾಕ್ಕೆ ಬೀಳಿಸಿದ ಅಧಿಕಾರಿಗಳು - Child Trafficking Network