ಮೈಸೂರು: ಫೆಬ್ರವರಿ 6 ರಿಂದ 11ರ ವರೆಗೆ 6 ದಿನಗಳ ಕಾಲ ನಡೆಯಲಿರುವ ಶಿವರಾತ್ರಿಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸದ ಅಂಗವಾಗಿ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ನಂತರ ಅನ್ನ ದಾಸೋಹಕ್ಕೆ ಇಂದು (ಸೋಮವಾರ) ಚಾಲನೆ ನೀಡಿದರು.
ನಾಳೆಯಿಂದ (ಮಂಗಳವಾರ) 6 ದಿನಗಳ ಕಾಲ ನಿರಂತರವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಪ್ರಸಿದ್ಧ ಸುತ್ತೂರು ಶಿವರಾತ್ರಿ ಶಿವಯೋಗಿಯವರ ಜಾತ್ರಾ ಮಹೋತ್ಸವ ಫೆಬ್ರವರಿ 6ರಿಂದ 11ರ ವರೆಗೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಈ ಜಾತ್ರೆ ಕೇವಲ ಭಕ್ತಿಗಷ್ಟೇ ಸಿಮಿತವಾಗದೆ, ರೈತರಿಗೆ ಮಾಹಿತಿ ನೀಡುವ ಹಲವಾರು ಹೊಸ ಕೃಷಿ ಸಂಶೋಧನೆಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಿಗೆ ಪ್ರಸಿದ್ಧವಾಗಿದೆ. ಜಾತ್ರಾ ಮಹೋತ್ಸಕ್ಕೆ ಭಕ್ತರು, ಸೇವಾರ್ಥದಾರರು, ಸಂಘ ಸಂಸ್ಥೆಗಳು, ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಸುತ್ತೂರು ಜಾತ್ರೆಯ 6 ದಿನಗಳವರೆಗಿನ ಪ್ರಮುಖ ಕಾರ್ಯಕ್ರಮಗಳು: ಫೆಬ್ರವರಿ 6 ರಂದು ಸುತ್ತೂರು ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದ್ದು, ಅಂದು ವೀರಭದ್ರೇಶ್ವರ ಕೊಂಡೋತ್ಸವ ನಡೆಯಲಿದೆ. ಫೆಬ್ರವರಿ 7 ರಂದು ಸಾಮೂಹಿಕ ವಿವಾಹ ಹಾಗೂ ಹಾಲರವಿ ಉತ್ಸವ ನೆರವೇರಲಿದೆ. ಫೆಬ್ರವರಿ 8 ರಂದು ರಥೋತ್ಸವ, ಫೆಬ್ರವರಿ 9 ರಂದು ಕೊಂಡೋತ್ಸವ ಮತ್ತು ಲಕ್ಷ ದೀಪೋತ್ಸವ ಜರುಗಲಿದೆ. ಈ ಬಾರಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಮೇಳದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 10 ರಂದು ಪಾರ್ವತಿ ಮತ್ತು ಶಾಮನೂರು ಶಿವಶಂಕರಪ್ಪ ಅತಿಥಿ ಗೃಹ ಉದ್ಘಾಟನೆ ಹಾಗೂ ತೆಪ್ಪೋತ್ದವ ನೆರವೇರಲಿದೆ. ಸುತ್ತೂರು ಜಾತ್ರಾ ಮಹೋತ್ಸವದ ಕೊನೆ ದಿನ ಫೆಬ್ರವರಿ 11 ರಂದು ಅನ್ನ ಬ್ರಹ್ಮೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಟದ ಕಾರ್ಯದರ್ಶಿ ಎಸ್.ಮಂಜುನಾಥ್ ಮಾಹಿತಿ ನೀಡಿದರು.
ನಿರಂತರ ಅನ್ನ ದಾಸೋಹ: ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆಯಿಂದ 6 ದಿನಗಳ ಕಾಲ ಜಾತ್ರೆಗೆ ಬರುವ ಭಕ್ತರಿಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ಇಂದು ಸುತ್ತೂರು ಶ್ರೀಗಳು ಗದ್ದುಗೆಗೆ ಪೂಜೆ ಸಲ್ಲಿಸಿ ಅನ್ನದಾಸೋಹಕ್ಕೆ ಚಾಲನೆ ನೀಡಿದರು. ಪ್ರತಿದಿನ ಬೆಲ್ಲದನ್ನ, ಅಕ್ಕಿ ನುಚ್ಚಿನ ಉಪ್ಪಿಟ್ಟು, ಕೇಸರಿ ಬಾತ್, ಖಾರಾ ಬಾತ್, ಸಿಹಿ ಪೊಂಗಲ್, ಖಾರಾ ಪೊಂಗಲ್, ಚಿತ್ರಾನ್ನವನ್ನು ಉಪಹಾರವಾಗಿ ನೀಡಲಾಗುವುದು.
ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದಕ್ಕೆ ಪಾಯಸ, ಸಿಹಿ ಬೂಂದಿ, ತರಕಾರಿ ಉಳಿ, ಅನ್ನ, ಸಾಂಬಾರು ಮಜ್ಜಿಗೆ ಹಾಗೂ ವಿಶೇಷ ದಿನಗಳಂದು ಗೋಧಿ ಪಾಯಸ, ಮೈಸೂರು ಪಾಕ್, ಬಿಸಿಬೇಳೆ ಬಾತ್ ನೀಡುತ್ತಾರೆ. ಈಗಾಗಲೇ ಸಾವಿರ ಕ್ವಿಂಟಲ್ ಅಕ್ಕಿ, 180 ಕ್ವಿಂಟಲ್ ತೊಗರಿ ಬೇಳೆ, 1500 ಕ್ಯಾನ್ ಅಡುಗೆ ಎಣ್ಣೆ, 12 ಟನ್ ಬೆಲ್ಲ ಸೇರಿದಂತೆ ಆಹಾರ ಪದಾರ್ಥಗಳನ್ನು ಸುತ್ತೂರಿನ ಸುತ್ತಮುತ್ತಲ 48 ಗ್ರಾಮದ ಭಕ್ತರು ದಾನವಾಗಿ ನೀಡಿರುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಗಿದೆ. ಮಠದ 500 ಸಿಬ್ಬಂದಿ ಜೊತೆಗೆ ಇತರ ಕಡೆಯಿಂದ ಬಂದ ಕೆಲಸಗಾರು ಪ್ರಸಾದದ ತಯಾರಿಕೆ ಹಾಗೂ ವಿತರಣೆಯನ್ನು ನೋಡಿಕೊಳ್ಳಲಿದ್ದಾರೆ.
ಜಾತ್ರೆ ಜ್ಞಾನ ಕೇಂದ್ರ: ಜಾತ್ರೆಗೆ ಬರುವ ರೈತರಿಗೆ ಕೃಷಿ ಬಗ್ಗೆ ಹಾಗೂ ಹನಿ ನೀರಾವರಿ ಜೊತೆಗೆ ಕೃಷಿಯಲ್ಲಿನ ಹೊಸ ಆವಿಷ್ಕಾರಗಳ ಬಗ್ಗೆ ಹಾಗೂ ವಿವಿಧ ಬೆಳೆಗಳ ಹೊಸ ತಳಿಗಳ ಬಗ್ಗೆ ತಿಳಿಸಲು ಫೆಬ್ರವರಿ 6 ರಿಂದ 12ರ ವರೆಗೆ ಸುತ್ತೂರು ಜಾತ್ರೆಯಲ್ಲಿ ಕೃಷಿ ಮೇಳ ಆಯೋಜನೆ ಮಾಡಲಾಗಿದೆ. ಇದರ ಜೊತೆಗೆ ವಸ್ತು ಪ್ರದರ್ಶನದಲ್ಲಿ ಕೈಗಾರಿಕಾ ಉತ್ಪನ್ನಗಳು, ಕೈಮಗ್ಗ, ಗ್ರಾಮೀಣ ಕರಕುಶಲ ಉತ್ಪನ್ನಗಳು, ಜವಳಿ, ಸ್ತ್ರೀ ಶಕ್ತಿ ಸಂಘಗಳು ತಯಾರಿಸಿರುವ ಗೃಹ ಬಳಕೆಯ ಉತ್ಪನ್ನಗಳ ಪ್ರದರ್ಶನ ಜೊತೆಗೆ ವಿಜ್ಞಾನದ ಮಾದರಿಗಳನ್ನು ವಸ್ತು ಪ್ರದರ್ಶನದಲ್ಲಿ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಪುತ್ತೂರು: ಗೋ ವಿಹಾರ ಧಾಮದಲ್ಲಿ ಗೋಲೋಕೋತ್ಸವ; ಜನರನ್ನು ಆಕರ್ಷಿಸಿದ ದೇಶಿ ತಳಿಗಳ ಪ್ರದರ್ಶನ