ಬಳ್ಳಾರಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಿಸದಂತೆ ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಒಎಂಸಿ (ಓಬಳಾಪುರಂ ಮೈನಿಂಗ್) ಅಕ್ರಮ ಗಣಿಗಾರಿಕೆ ಪ್ರಕರಣ ಆರೋಪದ ಹಿನ್ನೆಲೆ ಜಾಮೀನು ನೀಡುವ ವೇಳೆ ತವರಿಗೆ ತೆರಳದಂತೆ ಅವರಿಗೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಈ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗಳಿಸಿದೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ರೆಡ್ಡಿ ಅವರನ್ನು 2011ರ ಸೆ. 5 ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ಕೇಸ್ನಲ್ಲಿ 2015ರಲ್ಲಿ ಅವರಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿತ್ತು. ಆದರೆ, ಸಾಕ್ಷ್ಯ ನಾಶ ಸಾಧ್ಯತೆ ಹಿನ್ನೆಲೆಯಲ್ಲಿ ಬಳ್ಳಾರಿ, ಅನಂತಪುರ ಮತ್ತು ಕರ್ನೂಲು ಜಿಲ್ಲೆ ಪ್ರವೇಶಕ್ಕೆ ಅವರಿಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ, 13 ವರ್ಷಗಳಿಂದ ರೆಡ್ಡಿ ಬಳ್ಳಾರಿಯಿಂದ ದೂರವಿದ್ದರು.
ಮಗಳ ಮದುವೆ, ಮೊಮ್ಮಗಳ ನಾಮಕರಣ ಸೇರಿದಂತೆ ಇತರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಲ್ಕೈದು ಬಾರಿ ಕೋರ್ಟ್ ಅನುಮತಿಯೊಂದಿಗೆ ಬಳ್ಳಾರಿಗೆ ಬಂದಿದ್ದರು. ಆದರೆ, ಇದೀಗ ಶಾಶ್ವತವಾಗಿ ಬಳ್ಳಾರಿಗೆ ಬರಲು ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಇದರಿಂದ ಜಿಲ್ಲೆಯಲ್ಲಿ ರೆಡ್ಡಿ ಅಭಿಮಾನಿ ಬಳಗ ಸಂಭ್ರಮದಲ್ಲಿದೆ. ನಗರದ ಎಸ್ಪಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಕೇಕ್ ಕತ್ತರಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು. ತಾಯಿ ಕನಕ ದುರ್ಗಮ್ಮ ದೇವಿಗೆ ಸುಮಾರು 101 ತೆಂಗಿನಕಾಯಿ ಒಡೆಯುವ ಮೂಲಕ ಆಶೀರ್ವಾದ ಕೂಡ ಪಡೆದರು. ಅವರು ಗುರುವಾರ ಬಳ್ಳಾರಿ ನಗರಕ್ಕೆ ಭೇಟಿ ನೀಡಲಿದ್ದು, ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
''ಶಾಸಕ ಜನಾರ್ದನ ರೆಡ್ಡಿ ಅವರು ಪುನಃ ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಕನಕ ದುರ್ಗಮ್ಮನ ಆಶೀರ್ವಾದದಿಂದ ಅವರು ಮತ್ತೆ ಬರುವಂತಾಗಿದೆ. ಗುರುವಾರ ನಗರಕ್ಕೆ ಆಗಮಿಸಲಿದ್ದು, ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಸುಮಾರು 20 ಸಾವಿರ ಜನರನ್ನು ಸೇರಿಸಲು ಪ್ರಯತ್ನ ಮಾಡಲಾಗುತ್ತಿದೆ. 13 ವರ್ಷಗಳ ಬಳಿಕ ಜಿಲ್ಲೆಯ ಜನರು ಅವರನ್ನು ನೋಡುವ ಅವಕಾಶ ಬಂದಿದೆ'' ಎಂದು ರೆಡ್ಡಿ ಅಭಿಮಾನಿ ಬಳಗದ ಸದಸ್ಯರು ಖುಷಿ ಹಂಚಿಕೊಂಡರು.
ಮಗಳ ಮದುವೆ, ಹೆರಿಗೆ ವೇಳೆ ಅನುಮತಿ: ಮಗಳು ಬ್ರಹ್ಮಣಿ ಮದುವೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅನುಮತಿ ಪಡೆದು ಅವರು ಬಳ್ಳಾರಿಯಲ್ಲಿ 10 ದಿನ ವಾಸ್ತವ್ಯ ಹೂಡಿದ್ದರು. ಮಗಳ ಹೆರಿಗೆ ಸಂದರ್ಭದಲ್ಲಿ ಅವರು ಮತ್ತೆ ಕೆಲವು ದಿನಗಳ ಅನುಮತಿ ಪಡೆದು ಬಳ್ಳಾರಿ ಪ್ರವೇಶಿಸಿದ್ದರು. ಬಳ್ಳಾರಿ ಜತೆ, ಜನಾರ್ದನ ರೆಡ್ಡಿ ಅವರಿಗೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕಡಪ ಜಿಲ್ಲೆಗಳನ್ನು ಪ್ರವೇಶಿಸಿದಂತೆ ವಿಧಿಸಲಾಗಿದ್ದ ನಿರ್ಬಂಧವನ್ನು ಕೂಡ ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೋರ್ಟ್ ನಿರ್ಬಂಧದ ಹಿನ್ನೆಲೆಯಲ್ಲಿ ರೆಡ್ಡಿ ಅವರು ಕೋರ್ಟ್ ಅನುಮತಿ ಇಲ್ಲದೆ ಬಳ್ಳಾರಿಗೆ ಹೋಗಲು ಅವಕಾಶ ಇರಲಿಲ್ಲ. ಆದರೆ, ಆ ನಿರ್ಬಂಧ ತೆರವಾಗಿರುವುದರಿಂದ ಅವರು ಮುಕ್ತವಾಗಿ ಬಳ್ಳಾರಿಗೆ ಓಡಾಡಬಹುದಾಗಿದೆ.
ತಮ್ಮದೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದ ಅವರು, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಬಳ್ಳಾರಿಯಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಅದು ಸಾಧ್ಯವಾಗದ ಕಾರಣ, ಪತ್ನಿ ಅರುಣಾ ಅವರನ್ನು ಕಣಕ್ಕಿಳಿಸಿದ್ದರು. ಪತ್ನಿ ಸೋಲು ಅನುಭವಿಸಿದ್ದರು. ಗಂಗಾವತಿಯನ್ನು ತಮ್ಮ ಹೊಸ 'ತವರು' ಕ್ಷೇತ್ರವನ್ನಾಗಿಸಿಕೊಂಡಿರುವ ರೆಡ್ಡಿ, ಅಲ್ಲಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಮರಳಿ ಬಿಜೆಪಿ ಸೇರಿಕೊಂಡ ರೆಡ್ಡಿ, ತಮ್ಮ ಪಕ್ಷವನ್ನು ಅದರಲ್ಲಿ ವಿಲೀನಗೊಳಿಸಿದ್ದರು.