ಶಿವಮೊಗ್ಗ: ಸಮಾಜದಲ್ಲಿ ಕೋಮುಭಾವನೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ನವೆಂಬರ್ 13ರಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೆ.ಎಸ್.ಈಶ್ವರಪ್ಪ ಅನ್ಯಕೋಮಿನ ಭಾವನೆ ಕೆರಳಿಸುವಂತಹ ಹೇಳಿಕೆ ನೀಡಿದ್ದಾರೆ. ಈಶ್ವರಪ್ಪ ಅವರು ಮಾತನಾಡಿರುವುದು ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಪ್ರಸಾರವಾಗಿದ್ದು, ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತದೆ ಎಂದು ಜಯನಗರ ಪೊಲೀಸ್ ಠಾಣೆಯ ಪಿಐ ಸಿದ್ದೇಗೌಡ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
''ಕೆ.ಎಸ್.ಈಶ್ವರಪ್ಪ ಅವರು ಸುದ್ದಿಗೋಷ್ಠಿ ಸಮಯದಲ್ಲಿ ಇನ್ನೊಂದು ಗುಂಪಿನ ವಿರುದ್ಧ ದ್ವೇಷ ಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ಅಸೌಹಾರ್ದತೆ ಹೆಚ್ಚಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಅನ್ಯಕೋಮಿಗೆ ಹಾಗೂ ಅನ್ಯ ಪಕ್ಷಕ್ಕೆ ಉದ್ರೇಕ ಉಂಟಾಗುವಂತೆ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿರುವ ಅವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆಂದು'' ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ವಕ್ಫ್ ಬೋರ್ಡ್ನಿಂದ ರೈತರ ಜಮೀನಿಗೆ ನೋಟಿಸ್ ಆರೋಪ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ