ಬೆಂಗಳೂರು: ರಾಜ್ಯ ಹೈಕೋರ್ಟ್ಗೆ ಏಪ್ರಿಲ್ 29 ರಿಂದ ಮೇ 25 ರವರೆಗೆ ಬೇಸಿಗೆ ರಜೆ ಇರಲಿದೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿಯಲ್ಲಿ ವಿಭಾಗೀಯ ಮತ್ತು ಏಕಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ರಜಾಕಾಲೀನ ಪೀಠಗಳನ್ನು ರಚಿಸಲಾಗಿದೆ. ಆದರೆ, ವಾಸ್ತವದಲ್ಲಿ ಏಪ್ರಿಲ್ 26 ರಿಂದಲೇ ಹೈಕೋರ್ಟ್ಗೆ ರಜೆ ಇರಲಿದೆ.
ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠದಲ್ಲಿ ರಜಾಕಾಲದ ಪೀಠಗಳು ಕಾರ್ಯನಿರ್ವಹಣೆ ಮಾಡಲಿವೆ. ಈ ವೇಳೆ, ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾಕಾಲೀನ ಅವಧಿಯಲ್ಲಿ ನಡೆಸಲಾಗುತ್ತದೆ. ಮೇಲ್ಮನವಿ, ಕ್ರಿಮಿನಲ್ ಮೇಲ್ಮನವಿ, ಕ್ರಿಮಿನಲ್ ಅರ್ಜಿ, ಸಿವಿಲ್ ರೂಪದ ಅರ್ಜಿಗಳ ವಿಚಾರಣೆ ಇರುವುದಿಲ್ಲ. ಇ-ಫೈಲಿಂಗ್ ಪೋರ್ಟಲ್ ಮೂಲಕ ಇ-ಫೈಲಿಂಗ್ ಮಾಡಬಹುದಾಗಿದೆ ಎಂದು ರಿಜಿಸ್ಟ್ರಾರ್ (ಜುಡಿಷಿಯಲ್) ಎಂ.ಚಂದ್ರಶೇಖರ್ ರೆಡ್ಡಿ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಧೀಶರ ವರ್ಗಾವಣೆ: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ 388 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ನಿರ್ದೇಶನದಂತೆ ಈ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ಈ ವರ್ಗಾವಣೆಗಳು ಮೇ 27 ರಿಂದ ಜಾರಿಗೆ ಬರಲಿವೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರ್ಗಾವಣೆ ಪಟ್ಟಿಯನ್ನು ಹೈಕೋರ್ಟ್ನ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. 6 ಮಂದಿ ಜಿಲ್ಲಾ ನ್ಯಾಯಾಧೀಶರು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರನ್ನು ಬೇರೆ ಬೇರೆ ರಿಜಿಸ್ಟ್ರಾರ್ಗಳ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅಂತೆಯೇ 62 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದ್ದು, 16 ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಪಧೋನ್ನತಿ ನೀಡಿ ವರ್ಗಾವಣೆ ಮಾಡಲಾಗಿದೆ. ಅಂತೆಯೇ 166 ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ 138 ಸಿವಿಲ್ ನ್ಯಾಯಾಧೀಶರನ್ನು ಬೇರೆ ಬೇರೆ ಸ್ಥಳಗಳಿಗೆ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಬೈಕ್ ಟ್ಯಾಕ್ಸಿಗಳಿಗೆ ಅಡ್ಡಿ: ಸೂಕ್ತ ಕಾನೂನು ಕ್ರಮಕ್ಕೆ ಹೈಕೋರ್ಟ್ ಸೂಚನೆ - Bike Taxi Services