ಚಾಮರಾಜನಗರ: ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತದಲ್ಲಿ ಹಲವರು ಸಾವನ್ನಪ್ಪಿದ ಹಿನ್ನೆಲೆ ಗಡಿಜಿಲ್ಲೆಯಲ್ಲಿ ಅಬಕಾರಿ ಪೊಲೀಸರು ಹಳೇ ಅಡ್ಡೆಗಳಿಗೆ ದಾಳಿ ಮಾಡಿದ್ದು ಮಾತ್ರವಲ್ಲದೆ, ಹಳೇ ಕೇಸ್ಗಳ ಆರೋಪಿಗಳ ಮನೆಗಳಲ್ಲಿ ತಲಾಶ್ ನಡೆಸಿದರು.
ಚಾಮರಾಜನಗರ ತಾಲೂಕಿನ ಮೂಕನಪಾಳ್ಯ ಗ್ರಾಮದ ಹಳೇ ಆರೋಪಿಗಳ ಮನೆ ಹಾಗೂ ಕಳ್ಳಭಟ್ಟಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯಾವುದೇ ಅಕ್ರಮಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ.
ಹನೂರು ತಾಲೂಕಿನ ಕೊತ್ತಗುಳಿ, ಸಾಹೇಬರ ದೊಡ್ಡಿ, ವೀರನಾಯ್ಕನ ದೊಡ್ಡಿ, ಮಾರಳ್ಳಿ, ದೊಮ್ಮನಗದ್ದೆ ಹಾಗೂ ಕಾಂಚಳ್ಳಿ ಗ್ರಾಮಗಳಲ್ಲಿ ಹಾಗೂ ಸುತ್ತಮುತ್ತಲ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಕಳ್ಳಭಟ್ಟಿ ಮಾಡುತ್ತಿದ್ದ ಹಳೇ ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಹಳೇ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದ ಪೊಲೀಸರು ಯಾವುದೇ ರೀತಿಯ ಕಳ್ಳಭಟ್ಟಿ ತಯಾರಿಸದಂತೆ ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಿದ್ದಾರೆ.
ಈ ಕುರಿತು ಅಬಕಾರಿ ಡಿಸಿ ನಾಗಶಯನ ಮಾಹಿತಿ ನೀಡಿದ್ದು, "ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ತಮಿಳುನಾಡಿನಲ್ಲಿ ನಡೆದ ದುರಂತದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ದಿಢೀರ್ ಪರಿಶೀಲನೆ ನಡೆಸಿದ್ದು, ಯಾವುದೇ ರೀತಿ ಕಳ್ಳಭಟ್ಟಿ ಪ್ರಕರಣ ಕಂಡುಬಂದಿಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಕಲಿ ಮದ್ಯ ಸೇವಿಸಿ 35 ಮಂದಿ ದುರ್ಮರಣ : 20 ಜನರ ಸ್ಥಿತಿ ಚಿಂತಾಜನಕ - fake liquor consuming case
ಗಸ್ತಿಗೆ ತೆರಳಿದ್ದ ವೇಳೆ ಆನೆ ದಾಳಿ - ಮೂವರು ವಾಚರ್ಗಳಿಗೆ ಗಂಭೀರ ಗಾಯ: ಜಮೀನುಗಳಿಗೆ ಆನೆ ನುಗ್ಗುವುದನ್ನು ತಪ್ಪಿಸಲು ಗಸ್ತಿಗೆ ತೆರಳಿದ್ದ ವೇಳೆ ಆನೆ ದಾಳಿಗೆ ಮೂವರು ವಾಚರ್ಗಳು ಗಂಭೀರವಾಗಿ ಗಾಯಗೊಂಡ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಹುಸಣೆಪಾಳ್ಯ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಬಿಆರ್ಟಿ ಸುರಕ್ಷಿತ ಪ್ರದೇಶದ ಪಿ.ಜಿ.ಪಾಳ್ಯ ವಲಯದ ಹೊರಗುತ್ತಿಗೆ ವಾಚರ್ಗಳಾದ ಮುನಿಯಪ್ಪ (33), ಜಡೇಸ್ವಾಮಿ(27) ಹಾಗೂ ನಾಗರಾಜು(36) ಎಂಬವರು ಗಾಯಗೊಂಡವರು. ಮಲೆ ಮಹದೇಶ್ವರ ವನ್ಯಜೀವಿ ಧಾಮದಿಂದ ಆಹಾರ ಅರಸಿ ಜಮೀನುಗಳತ್ತ ನುಗ್ಗುವ ಆನೆಗಳನ್ನು ಕಾಡಿಗೆ ಓಡಿಸಲು ಇವರು ತೆರಳಿದ್ದ ವೇಳೆ ಏಕಾಏಕಿ ಆನೆ ದಾಳಿ ನಡೆಸಿದೆ.
ಮುನಿಯಪ್ಪ ಮೇಲೆ ದಾಳಿ ಮಾಡಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಜಡೆಸ್ವಾಮಿಯನ್ನು ಓಡಿಸಿಕೊಂಡು ಹೋದ ವೇಳೆ ಗುಂಡಿಯೊಳಕ್ಕೆ ಬಿದ್ದು ಕಾಲು ಮುರಿದಿದೆ. ನಾಗರಾಜು ಎಂಬವರಿಗೆ ಎಡಗೈಗೆ ಗಾಯವಾಗಿದೆ. ಮೂವರಿಗೂ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.