ಬೆಳಗಾವಿ: ಕಿತ್ತೂರು ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ದೇಶ, ವಿದೇಶದ ಜಗಜಟ್ಟಿಗಳು ಭಾಗವಹಿಸಿ, ಕುಸ್ತಿ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡಿದರು. 200ನೇ ವಿಜಯೋತ್ಸವದ ನಿಮಿತ್ತ ಈ ಬಾರಿ ಮತ್ತಷ್ಟು ವಿಶೇಷವಾಗಿ ಕುಸ್ತಿ ಆಯೋಜಿಸಲಾಗಿತ್ತು. ಒಂದೆಡೆ ಕಣದಲ್ಲಿ ಪೈಲ್ವಾನರು ಸೆಣಸಾಟ ನಡೆಸಿದರೆ, ಮತ್ತೊಂದೆಡೆ ಸೇರಿದ್ದ ಜನಸ್ತೋಮ ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಹುರಿದುಂಬಿಸಿದರು.
ಉತ್ತರಪ್ರದೇಶದ ಕುಸ್ತಿಪಟು ಜಾಂಟಿ ಭಾಟಿ ಅವರು, ಇರಾನ್ ದೇಶದ ಇರ್ಫಾನ್ ಹುಸೇನ್‌ಜಾದ್ ಶಾ ಅಲಿ ನಡುವಿನ ಪಂದ್ಯವು ಬಲು ರೋಚಕವಾಗಿತ್ತು. 'ಡಬಲ್ ಲೆಗ್ ಅಟ್ಯಾಕ್' ಮೂಲಕ ಇರ್ಫಾನ್ ಕಣದಲ್ಲಿ ಚಿತ್ ಮಾಡಿ ಗೆಲುವು ಸಾಧಿಸಿದರು.
ಅದೇ ರೀತಿ ಮಹಾರಾಷ್ಟ್ರದ ಪ್ರಕಾಶ ಬನಕರ್ ಹರಿಯಾಣದ ರೋಹಿತ್ ಗುಲಿಯಾ ಅವರ ವಿರುದ್ಧ ಗೆಲುವಿನ ನಗೆ ಬೀರಿದರು. ಹರಿಯಾಣದ ಅಂಕಿತ್ ಪಂಜಾಬಿನ ಗುರುಲಾಲ್ ಸಿಂಗ್ ಅವರನ್ನು ಸೋಲಿಸಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಶಿವಯ್ಯ ಪೂಜಾರಿ ಮಧ್ಯಪ್ರದೇಶದ ಪ್ರಿನ್ಸ್ ಸೋನಕರ್ ಅವರನ್ನು ಪರಾಭವಗೊಳಿಸಿದರು. ಮಧ್ಯಪ್ರದೇಶದ ಸಚಿನ್ ವಿರುದ್ಧ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕಾರ್ತಿಕ ಕಾಟೆ ಗೆದ್ದು ಬೀಗಿದರು.
ಮಹಿಳಾ ಕುಸ್ತಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಶಾಲಿನಿ ಸಿದ್ದಿ ಮಹಾರಾಷ್ಟ್ರದ ಅಸ್ಮಿತಾ ಪಾಟೀಲ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು. ಮೈಸೂರಿನ ಯಶಸ್ವಿನಿ ಆರ್. ವಿರುದ್ಧ ಬೆಳಗಾವಿಯ ಶೀತಲ್ ಸುತಾರ ಗೆದ್ದರು. ಪುರುಷರ ವಿಭಾಗದಲ್ಲಿ 72 ಜೋಡಿ, ಮಹಿಳೆಯರ ವಿಭಾಗದಲ್ಲಿ 9 ಜೋಡಿ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಸಂಗೀತ ರಸದೌತಣ: ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಿವುಡ್ನ ಖ್ಯಾತ ಗಾಯಕ ಅರ್ಮಾನ್ ಮಲಿಕ್ ತಮ್ಮ ಅದ್ಭುತ ಗಾಯನದ ಮೂಲಕ ನೆರೆದಿದ್ದ ಜನರ ಗಮನ ಸೆಳೆದರು. ಅರ್ಮಾನ್ ಮಲಿಕ್ ಹಾಡುಗಳನ್ನು ಕೇಳಲು ತುದಿಗಾಲ ಮೇಲೆ ನಿಂತಿದ್ದ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಕ್ಕಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹಿಂದಿ ಹಾಡು ಹಾಡಿ ಪ್ರೇಕ್ಷಕರ ಗಮನ ಸೆಳೆದರು. ಇದಕ್ಕೂ ಮೊದಲು ಚಲನಚಿತ್ರ ನಟ ಡಾಲಿ ಧನಂಜಯ ವೇದಿಕೆ ಆಗಮಿಸಿ, ನಿಮಗೆ ಕೊಡಬೇಕು ಕಪ್ಪ, ಅಂಕಲ್ ನ ಹೊಡಿತಿನಿ ಸುಬ್ಬಿ ಡೈಲಾಗ್ ಹೊಡೆದು ಪ್ರೇಕ್ಷಕರಿಗೆ ಕಿಕ್ ಕೊಟ್ಟರು. ಇದೇ ವೇಳೆ ಮಾಡಿ ಮಾಡಿ ಕೆಟ್ಟರು ನಿಜವಿಲ್ಲದೇ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ ಎಂಬ ಬಸವಣ್ಣನವರ ವಚನದ ಮೂಲಕ ಭಕ್ತಿಯ ಸವಿಯನ್ನೂ ಉಣಬಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಅಕ್ಷತಾ ಸಾಂಸ್ಕೃತಿಕ ಕಲಾ ಅಕಾಡೆಮಿ ನೃತ್ಯರೂಪಕ, ಸವದತ್ತಿಯ ಮೋಹನಗೌಡ ಪಾಟೀಲ ಸಂಗೀತ ಪ್ರತಿಷ್ಠಾನದ ಸುಗಮ ಸಂಗೀತ, ಪುಂಡಲಿಕ ಭಜಂತ್ರಿ ಅವರ ಶಹನಾಯಿ ವಾದನ, ಶಂಕ್ರಣ್ಣ ಕೋತಬಾಳ ಅವರ ಲಾವಣಿ ಪದ, ಅಮರೇಶ್ವರ ಮಹಾರಾಜರ ಡೊಳ್ಳಿನ ಪದಗಳು, ಬೆಂಗಳೂರಿನ ಜಾಹ್ನವಿ ಐತಾಳ ಮತ್ತು ತಂಡದವರ ಹೆಜ್ಜೆನಾದ ಹಾಗೂ ಜೋಗಿಲ ಸಿದ್ದರಾಜು ಅವರ ಜನಪದ ಸಂಗೀತ ಕಾರ್ಯಕ್ರಮ ಮನರಂಜನೆ ನೀಡಿದವು.
ಇದಕ್ಕೂ ಮೊದಲು ಚಲನಚಿತ್ರ ನಟ ಡಾಲಿ ಧನಂಜಯ ವೇದಿಕೆಗೆ ಆಗಮಿಸಿ, 'ನಿಮಗೆ ಏಕೆ ಕೊಡಬೇಕು ಕಪ್ಪ', 'ಅಂಕಲ್ನ ಹೊಡಿತಿನಿ ಸುಬ್ಬಿ' ಎಂದು ಡೈಲಾಗ್ ಹೊಡೆದು ಪ್ರೇಕ್ಷಕರಿಗೆ ಕಿಕ್ ಕೊಟ್ಟರು. ಇದೇ ವೇಳೆ, 'ಮಾಡಿ ಮಾಡಿ ಕೆಟ್ಟರು ನಿಜವಿಲ್ಲದೇ', 'ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ' ಎಂಬ ಬಸವಣ್ಣನವರ ವಚನದ ಮೂಲಕ ಭಕ್ತಿಯ ಸವಿಯನ್ನೂ ಊಣಬಡಿಸಿದರು.
ಇದನ್ನೂ ಓದಿ: ಚನ್ನಪಟ್ಟಣ: ಖಾದ್ರಿ ಅವರ 285ನೇ ಗಂಧ ಮಹೋತ್ಸವಕ್ಕೆ ಅದ್ಧೂರಿ ಚಾಲನೆ