ಬೆಂಗಳೂರು: ತೇಜಸ್ ಎಂ.ಕೆ.1 ಎ ಏರ್‌ಕ್ರಾಫ್ಟ್ ಸರಣಿಯ ಎಲ್ಎ 5033 ಯುದ್ಧ ವಿಮಾನ ಗುರುವಾರ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಆಕಾಶಕ್ಕೆ ಹಾರಿತು. ಒಟ್ಟು 18 ನಿಮಿಷಗಳ ಹಾರಾಟ ನಡೆಸಿದ ವಿಮಾನವನ್ನು ಮುಖ್ಯ ಪರೀಕ್ಷಾ ಪೈಲಟ್, ಗ್ರೂಪ್ ಕ್ಯಾಪ್ಟನ್ ಕೆ ಕೆ ವೇಣುಗೋಪಾಲ್ (ನಿವೃತ್ತ) ನಿಯಂತ್ರಿಸಿದರು.
ಇಂದಿನ ಹಾರಾಟದ ಕುರಿತು ಮಾತನಾಡಿರುವ ಎಚ್ಎಎಲ್ ಸಂಸ್ಥೆಯ ಸಿಎಂಡಿ ಸಿ.ಬಿ ಅನಂತಕೃಷ್ಣನ್, 2021 ರ ಫೆಬ್ರವರಿಯಲ್ಲಿ ನಡೆದ ಒಪ್ಪಂದದ ಪ್ರಕಾರ ಜಾಗತಿಕ ಭೌಗೋಳಿಕ- ರಾಜಕೀಯ ಪರಿಸರದಲ್ಲಿ ಪ್ರಮುಖ ವಿನ್ಯಾಸ ಮತ್ತು ಅಭಿವೃದ್ಧಿಯೊಂದಿಗೆ ಎಚ್ಎಎಲ್ ಮಹತ್ವದ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರಕ್ಷಣಾ ಇಲಾಖೆ, ಭಾರತೀಯ ವಾಯು ಸೇನೆ, ಡಿಆರ್ಡಿಒ/ ಎಡಿಎ, ಸೆಮಿಲ್ಯಾಕ್, ಡಿಜಿಎಕ್ಯೂಎ ಮತ್ತು ಎಂಎಸ್ಎಂಇ ಗೆ ಧನ್ಯವಾದ ಸಲ್ಲಿಸುತ್ತೇನೆ. ಸಂಸ್ಥೆಗಳ ನಿರಂತರ ಬೆಂಬಲದೊಂದಿಗೆ ಭಾರತೀಯ ವಾಯುಪಡೆಗೆ ತೇಜಸ್ ಎಂಕೆ1ಎ ಸೇರ್ಪಡೆಗೊಳ್ಳುತ್ತಿದೆ. ಎಚ್ಎಎಲ್ ನಲ್ಲಿ ಸ್ಥಾಪಿಸಲಾಗಿರುವ ಮೂರು ಉತ್ಪಾದನಾ ಕೇಂದ್ರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ನಿರೀಕ್ಷಿಸಬಹುದಾಗಿದೆ. ತೇಜಸ್ ಎಂಕೆ1ಎ ವಿಮಾನದಲ್ಲಿ ಸುಧಾರಿತ ಎಲೆಕ್ಟ್ರಾನಿಕ್ ರಡಾರ್, ಯುದ್ಧ ಸಂವಹನ ವ್ಯವಸ್ಥೆಗಳು, ಹೆಚ್ಚುವರಿ ಯುದ್ಧ ಸಾಮರ್ಥ್ಯ ಮತ್ತು ಸುಧಾರಿತ ನಿರ್ವಹಣಾ ವೈಶಿಷ್ಟ್ಯಗಳು ಇವೆ ಎಂದು ಸಿ.ಬಿ ಅನಂತಕೃಷ್ಣನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ತರಬೇತಿ ಹಾರಾಟದ ವೇಳೆ ಲಘು ಯುದ್ಧ ವಿಮಾನ ತೇಜಸ್ ಪತನ: ಪೈಲಟ್ಗಳಿಬ್ಬರು ಪ್ರಾಣಾಪಾಯದಿಂದ ಪಾರು