ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಪಾಲಿಕೆ ಸದಸ್ಯ ಇಮ್ರಾನ್ ಯಲಿಗಾರ ನಾಮಪತ್ರ ಸಲ್ಲಿಸಿದರೆ, ಉಪಮೇಯರ್ ಸ್ಥಾನಕ್ಕೆ ಪಾಲಿಕೆ ಸದಸ್ಯೆ ಮಂಗಳಾ ಹಿರೇಮನಿ ನಾಮಪತ್ರ ಸಲ್ಲಿಸಿದರು. ಉಭಯ ಸದಸ್ಯರು ತಮ್ಮ ಬೆಂಬಲಿಗರ ನೇತೃತ್ವದಲ್ಲಿ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.
ಇನ್ನೂ ಬಿಜೆಪಿ ಪಕ್ಷ ತನ್ನ ಪಕ್ಷದ ಮೇಯರ್ ಹಾಗೂ ಉಪಮೇಯರ್ ಯಾರು ಎಂಬುದುನ್ನು ಬಹಿರಂಗಪಡಿಸಿಲ್ಲ. ಆದರೆ, ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸುವವರ ಸಂಖ್ಯೆ ಹೆಚ್ಚಾಗಿದ್ದರಿಂದ ನೇರವಾಗಿ ಪಕ್ಷ ಸೂಚಿಸಿದ ವ್ಯಕ್ತಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.
ಮಹಾನಗರ ಪಾಲಿಕೆಯ 23ನೇ ಅವಧಿಗೆ ಮೇಯರ್, ಉಪಮೇಯರ್ ಆಯ್ಕೆಗೆ ಕ್ಷಣಗಣನೆ ಬಾಕಿ ಉಳಿದಿದೆ. ಬಣ ರಾಜಕಾರಣದಲ್ಲಿ ನಡುವೆ ಪಾಲಿಕೆಯ ಪ್ರಥಮ ಪ್ರಜೆ ಯಾರಾಗ್ತಾರೆ ಎಂಬುವುದು ತೀವ್ರ ಕುತೂಹಲ ಮೂಡಿಸಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಪುರುಷ ಹಾಗೂ ಉಪಮೇಯರ್ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ.