ದಾವಣಗೆರೆ : ಧೀಮಂತ ರಾಜಕಾರಣಿ, ದಿವಂಗತ ಮಾಜಿ ಮುಖ್ಯಮಂತ್ರಿ ತವರೂರು ಕಾರಿಗನೂರು ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಮಳೆಗೆ ಧೋ ಎಂದು ಸೋರುತ್ತಿದೆ. ಶಾಲೆಯ ಗೋಡೆಗಳು ಬೀಳುವ ಹಂತಕ್ಕೆ ತಲುಪಿವೆ. ಶಾಲೆಯ ಸ್ಥಿತಿ ಮಾತ್ರ ಹೇಳತೀರದಾಗಿದೆ. ಶಾಲಾ ಕೊಠಡಿಯಲ್ಲಿ ನಿಂತು ನೋಡಿದ್ರೆ ಒಡೆದ ಹಂಚಿನಿಂದ ಆಕಾಶ ಕಾಣುತ್ತದೆ, ಮಳೆ ಬಂದ್ರೆ ಮಕ್ಕಳು ಪಾಠ ಕೇಳಲು ಹರಸಾಹಸ ಪಡುವಂತಾಗಿದೆ. ಬಿರುಕು ಬಿಟ್ಟ ಗೋಡೆಯಿಂದ ನೀರು ತೊಟ್ಟಿಕ್ಕಲು ಆರಂಭವಾಗಲಿದ್ದು, ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಐತಿಹಾಸಿಕ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಬೇಕಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿರುವ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆಯ ಮಾಳಿಗೆ ಸೋರುತ್ತಿದೆ. ಒಂದು ಕಾಲದಲ್ಲಿ ರಾಜ್ಯವನ್ನೇ ಆಳಿದ್ದ ದಿ. ಮಾಜಿ ಸಿಎಂ ಜೆ. ಹೆಚ್ ಪಟೇಲ್ ಅವರ ತವರೂರು ಕಾರಿಗನೂರಿನಲ್ಲಿರುವ ಶಾಲೆಗೆ ಕಾಯಕಲ್ಪ ಬೇಕಾಗಿದೆ. ಮಳೆಗಾಲ ಬಂತೆಂದರೆ ಸಾಕು, ಈ ಶಾಲೆಯ ದುಸ್ಥಿತಿ ಹೇಳತೀರದಾಗಿದೆ.
ಮಳೆ ಬಂತು ಎಂದರೆ ಒಡೆದ ಹೆಂಚಿನಿಂದ, ಬಿರುಕು ಬಿಟ್ಟ ಗೋಡೆಯಿಂದ ನೀರು ಸೋರಲು ಆರಂಭಿಸುತ್ತದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಶಾಲೆ ಮಳೆಯಿಂದ ಸೋರುತ್ತಿದ್ದರೂ ಕೂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಯಕಲ್ಪ ಒದಗಿಸಲು ಮುಂದಾಗಿಲ್ಲ. ದುರಂತ ಎಂದರೆ ಮಳೆ ಬಂದ್ರೆ ತರಗತಿಗಳಲ್ಲಿ ಪಾಠ ನಡೆಯುವುದಿಲ್ಲ. ಕೆಲ ಕೊಠಡಿಗಳಲ್ಲಿ ಮಳೆ ಬಂದು ನೀರು ಸೋರಲು ಆರಂಭವಾದ್ರೆ ಮಕ್ಕಳು ನಿಂತುಕೊಂಡು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲವೇ ಬೇರೆ ತರಗತಿಯ ವಿದ್ಯಾರ್ಥಿಗಳೊಂದಿಗೆ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ಇದ್ದು, ಶಾಲೆ ದುರಸ್ತಿ ಮಾಡಿಸಿಕೊಡುವಂತೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.
ಶಾಲೆಯಲ್ಲಿ ಕಲಿಯುತ್ತಿದ್ದಾರೆ 154 ಮಕ್ಕಳು : ಈ ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿಯಿಂದ ಹಿಡಿದು ಏಳನೇ ತರಗತಿವರೆಗೆ ಒಟ್ಟು 154 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ 8 ಜನ ಶಿಕ್ಷಕರಿದ್ದು, ಮಳೆಯಿಂದ ರೋಸಿಹೋಗಿದ್ದಾರೆ. ಒಟ್ಟು 11 ಕೊಠಡಿಗಳ ಪೈಕಿ ಐದು ಕೊಠಡಿಗಳನ್ನು ತುರ್ತು ದುರಸ್ತಿ ಮಾಡಿಸಬೇಕಿದೆ. ಮಳೆಗಾಲ ಬಂತೆಂದರೆ ಇಡೀ ಶಾಲೆ ಸೋರುತ್ತದೆ. ಅಷ್ಟೇ ಅಲ್ಲದೇ ಶಾಲೆಯ ದುಸ್ಥಿತಿ ಕಂಡು ಪೋಷಕರು 20-30 ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸುತ್ತಿರುವ ಉದಾಹರಣೆ ಇದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಲೆ ದುರಸ್ತಿ ಮಾಡಿಸುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಮನವಿ ಮಾಡಿದ್ದಾರೆ.
ಎಂಡಿಎಂಸಿ ಅಧ್ಯಕ್ಷರು ಹೀಗಂತಾರೆ : 'ಸ್ವಾತಂತ್ರ್ಯ ಪೂರ್ವದ ಈ ಸರ್ಕಾರಿ ಶಾಲೆಯಲ್ಲಿ 154 ಮಕ್ಕಳಿದ್ದಾರೆ. 1 ರಿಂದ 7 ನೇ ತರಗತಿವರೆಗೆ ಮಕ್ಕಳು ಕಲಿಯುತ್ತಿದ್ದಾರೆ. ಶಾಲೆ ಸೋರುತ್ತಿದೆ. ಅಧಿಕಾರಿಗಳು ಗಮನ ಹರಿಸ್ಬೇಕಾಗಿದೆ. ಮಕ್ಕಳಿಗೆ ತೊಂದರೆ ಆಗ್ತಿದ್ದರಿಂದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಕ್ಕಳು ಮಳೆಯಲ್ಲಿ ಪಾಠ ಕೇಳ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಮುಖ್ಯಮಂತ್ರಿ ದಿ. ಜೆ. ಹೆಚ್ ಪಟೇಲ್ ಅವರ ತವರೂರಿನ ಶಾಲೆ ಇದಾಗಿದೆ. ಶಾಲೆಯಲ್ಲಿ 11 ಕೊಠಡಿಗಳಿದ್ದು, 05 ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ, ಸೋರದೆ ಇರುವ ಕೊಠಡಿಗಳಲ್ಲಿ ಕಂಬೈಂಡ್ ಮಾಡಿ ಪಾಠ ಮಾಡುವ ಪರಿಸ್ಥಿತಿ ಇದೆ. ಹೊಸ ಕೊಠಡಿಗಳು ಬೇಕಾಗಿವೆ. ಶೌಚಾಲಯ ಬೇಕಾಗಿದೆ' ಎಂದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ್ ಮನವಿ ಮಾಡಿದ್ದಾರೆ.
ಗ್ರಾ.ಪಂ ಅವರ ವಾದ ಏನು; ಈ ವಿಚಾರವಾಗಿ ಗ್ರಾಪಂ ಸದಸ್ಯ ಪ್ರವೀಣ್ ಪ್ರತಿಕ್ರಿಯಿಸಿ, "ಶಾಲೆಯ ಮುಖ್ಯೋಪಾಧ್ಯಾಯರು, ಮಕ್ಕಳು ಪಂಚಾಯತಿಗೆ ಮನವಿ ಕೊಡ್ತಿದ್ದಾರೆ. ಆದರೆ ಶಾಲೆ ಅಭಿವೃದ್ಧಿ ಮಾಡುವಷ್ಟು ಅನುದಾನ ಗ್ರಾಪಂಗೆ ಬರಲ್ಲ, ಕಳೆದ ಬಾರಿ ಹತ್ತು ಲಕ್ಷ ಅನುದಾನ ಹಾಕಿದ್ರು. ಆದರೆ ಕೆಲಸ ಆಗಲಿಲ್ಲ. ಇದೀಗ ಶಾಲೆ ಸೋರುತ್ತಿದೆ, 154 ಮಕ್ಕಳು ವ್ಯಾಸಂಗ ಮಾಡ್ತಿದ್ದಾರೆ. ಶಾಲೆ ಸೋರುತ್ತಿದ್ದರಿಂದ, ಶಿಥಿಲಗೊಂಡಿದ್ದರಿಂದ ಈಗಾಗಲೇ 20-30 ಮಕ್ಕಳು ಬಿಟ್ಟು ಹೋಗಿದ್ದಾರೆ. ಮಳೆ ಬಂತು ಎಂದ್ರೆ ಶಾಲೆ ಸೋರುತ್ತದೆ. ಯಾವ ಕೊಠಡಿ ಸೋರುವುದಿಲ್ಲ ಅಲ್ಲಿ ಮಕ್ಕಳನ್ನು ಕಂಬೈಂಡ್ ಮಾಡಿ ಪಾಠ ಮಾಡಲಾಗುತ್ತದೆ. ಹಳೆ ಕಾಲದ ಶಾಲೆ ಇದಾಗಿದ್ದು, ಇದೀಗ ಮಕ್ಕಳಿಗೆ ನೂತನ ಕೊಠಡಿಗಳು ಬೇಕಾಗಿವೆ'' ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ನಿರಂತರ ಮಳೆಗೆ ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲಾ ಕಟ್ಟಡ: ಆತಂಕದಲ್ಲಿ ಮಕ್ಕಳು