ಗಂಗಾವತಿ: ಕೃಷಿ ಎಂದರೆ ಮೂಗು ಮುರಿಯುವ ಈ ದಿನಮಾನಗಳಲ್ಲಿ ಮಕ್ಕಳಲ್ಲಿ ಅದರಲ್ಲೂ ವಿದ್ಯಾರ್ಥಿಗಳಲ್ಲಿ ವಿಶೇಷ ಆಸಕ್ತಿ, ಒಲವು ಮೂಡಿಸಬೇಕು ಎಂಬ ಇಲ್ಲಿನ ಶಾಲೆಯೊಂದರ ಮುಖ್ಯ ಶಿಕ್ಷಕರ ನಿರಂತರ ಶ್ರಮ ಫಲ ನೀಡಿದೆ.
ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿನಿಯರು, ಕಳೆದ ನಾಲ್ಕು ತಿಂಗಳಿಂದ ಪಾಠ-ಪ್ರವಚನದೊಂದಿಗೆ, ಕೃಷಿಯಲ್ಲೂ ಖುಷಿ ಕಂಡಿದ್ದಾರೆ. ನಿರಂತರ ಪರಿಶ್ರಮದ ಫಲವಾಗಿ ಮಂಗಳವಾರ ಕೈ ಸೇರಿದ 60 ಚೀಲ ಭತ್ತದ ಫಸಲು ಕಂಡು ವಿದ್ಯಾರ್ಥಿನಿಯರು ಸಂಭ್ರಮಿಸಿದರು.
ಸಿದ್ದಾಪುರ ಗ್ರಾಮದ ವಸತಿ ನಿಲಯದ ಸಮೀಪದ ರೈತರ ಜಮೀನಿನಲ್ಲಿ ಒಂದು ಎಕರೆ ಭೂಮಿಯನ್ನು ಮಕ್ಕಳ ಚಟುವಟಿಕೆಗೆಂದು ಮೀಸಲಿಡಲಾಗಿತ್ತು. ಇದರಲ್ಲಿ ಕಳೆದ ಆಗಸ್ಟ್‌ನಲ್ಲಿ ರೈತರ ನೆರವಿನಿಂದ ಮಕ್ಕಳು ಭತ್ತ ಬಿತ್ತನೆ ಮಾಡಿದ್ದರು. ಇದೀಗ ಕೊಯ್ಲು ಮಾಡಿದ್ದು 60 ಚೀಲ ಭತ್ತದ ಫಸಲು ಬಂದಿದೆ.
ಮಕ್ಕಳಿಗೆ ಪಠ್ಯದೊಂದಿಗೆ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಬೇಕು ಎಂಬ ಉದ್ದೇಶದಿಂದ ವಸತಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಗಣವಾರಿ ಅವರು ವಸತಿ ನಿಲಯದ ಸಮೀಪದ ರಾಜಾಸಾಬ ಮತ್ತು ಅಮ್ಮಾಸಾಬ ಎಂಬಿಬ್ಬರಿಗೆ ಸೇರಿದ ಹೊಲಕ್ಕೆ ಕಳೆದ ಆಗಸ್ಟ್ ತಿಂಗಳಲ್ಲಿ ಮಕ್ಕಳನ್ನು ಕರೆದೊಯ್ದಿದ್ದರು.
ಈ ಸಂದರ್ಭದಲ್ಲಿ ಮಕ್ಕಳು ತಾವೇ ಕೆಸರು ಗದ್ದೆಗಿಳಿದು ರೈತ ಮಹಿಳೆಯರೊಂದಿಗೆ ಭತ್ತ ನಾಟಿ ಮಾಡುವ ವಿಧಾನ, ಸಸಿ ಮಡಿ ಹಾಕುವ ರೀತಿ, ಭೂಮಿ ಹದ ಮಾಡುವ ಕುರಿತಾಗಿ ಮಾಹಿತಿ ಪಡೆದಿದ್ದರು. ನಾಟಿಯ ಬಳಿಕ ಯಾವ ಸಮಯದಲ್ಲಿ ಗೊಬ್ಬರ ಹಾಕಬೇಕು, ಉತ್ತಮ ಬೆಳೆ ತೆಗೆಯಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬಿತ್ಯಾದಿ ಪೂರಕ ಮಾಹಿತಿ ಪಡೆದಿದ್ದರು.
ಸ್ವತಂತ್ರವಾಗಿ ನಾಟಿ ಮಾಡುವ ಬಗ್ಗೆ ಮಕ್ಕಳು ಆಸಕ್ತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ರೈತರ ಮೊನವೊಲಿಸಿ ಇಬ್ಬರು ರೈತರಿಗೆ ಸೇರಿದ ಜಮೀನಿನಲ್ಲಿ ಎಂಟು ಮಡಿ ಅಂದರೆ ಒಂದೂವರೆ ಎಕರೆ ಜಮೀನು ಮಕ್ಕಳಿಗೆ ಮೀಸಲಿಡುವಂತೆ ಕೋರಿದ್ದರು.
ರೈತರ ಮಾರ್ಗದರ್ಶನದಲ್ಲಿ ನಾಟಿ ಮಾಡಿದ್ದ ಮಕ್ಕಳು, ಆಗಸ್ಟ್ನಿಂದ ಇಲ್ಲಿಯವರೆಗೂ ಪ್ರತಿ ಹದಿನೈದು ದಿನಕ್ಕೊಮ್ಮೆ ಶಾಲೆಗೆ ಬಿಡುವಾದಾಗ, ಭಾನುವಾರ ರಜೆಯಂತಗ ದಿನಗಳಲ್ಲೂ ಹೊಲಕ್ಕೆ ಹೋಗಿ ಗೊಬ್ಬರ ಹಾಕುವುದು, ಕಳೆ ನಿವಾರಿಸುವ ಕೆಲಸ ಮಾಡಿದ್ದಾರೆ. ಇದೀಗ ಮಕ್ಕಳು ನಾಟಿ ಮಾಡಿದ ಭತ್ತದ ಗದ್ದೆ ಕೊಯ್ಲಿಗೆ ಬಂದಿದ್ದು, ಅರವತ್ತು ಚೀಲ ಭತ್ತ ಬೆಳೆಯಲಾಗಿದೆ. ವಿದ್ಯಾರ್ಥಿನಿಯರಾದ ಅದೀಬಾ, ಜಾಹೇದಾ, ಫಾತಿಮಾ, ರೇಷ್ಮಾ, ರೋಷನಿ, ರಾಬಿಯಾ, ಆಲಿಯಾ ಸೇರಿದಂತೆ ಹಲವು ಮಕ್ಕಳು ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.
ಮಕ್ಕಳಿಗೆ ತುತ್ತಿನ ಮಹತ್ವ ಗೊತ್ತಾಗಬೇಕು: "ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವುದು ನಮ್ಮ ಮೂಲ ಉದ್ದೇಶ. ಇದರ ಜೊತೆಗೆ ರೈತನ ಮೇಲೆ ಅಭಿಮಾನ ಮೂಡಬೇಕು. ನಾವು ತಿನ್ನುವ ಆಹಾರದ ಪ್ರತೀ ತುತ್ತಿನ ಮಹತ್ವ ಗೊತ್ತಾಗಬೇಕು ಎಂಬ ಕಾರಣಕ್ಕೆ ಕೃಷಿ ಪಾಠ ಮಾಡಲಾಗಿದೆ" ಎಂದು ಸಿದ್ದಾಪುರದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ಮುಖ್ಯ ಶಿಕ್ಷಕ ಚಂದ್ರಶೇಖರ್ ಗಣವಾರಿ ಹೇಳಿದರು.
"ಕೃಷಿ ದೇಶದ ಆರ್ಥಿಕ ಪ್ರಗತಿಯ ಬೆನ್ನೆಲುಬು. ಹೀಗಾಗಿ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ರೈತರ ಬಗ್ಗೆ ಅಭಿಮಾನವಿರಬೇಕು. ರೈತ ಬೆಳೆಯುವ ಪ್ರತಿಯೊಂದು ತುತ್ತಿನ ಆಹಾರ ಎಷ್ಟು ಕಷ್ಟದಿಂದ ಬರುತ್ತದೆ ಎಂಬುದು ಮನವರಿಕೆಯಾಗಬೇಕು ಎಂಬ ಉದ್ದೇಶ ಪ್ರಾಯೋಗಿಕ ಕೃಷಿ ಪಾಠದ ಹಿಂದಿದೆ" ಎಂದು ಚಂದ್ರಶೇಖರ್ ವಿವರಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಹಾರಾಷ್ಟ್ರದ ಮಹಿಳೆಯರಿಂದ ಭತ್ತ ಕಟಾವು: ಬಾಯ್ತುಂಬ ಕನ್ನಡ, ಅನ್ನ ನೀಡಿದ ಕರ್ನಾಟಕದ ಮೇಲೆ ಅಭಿಮಾನ