ದಾವಣಗೆರೆ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಗುಡ್ಡ ಕುಸಿದು ನೂರಾರು ಜನರು ನೆಲೆ ಕಳೆದುಕೊಂಡಿದ್ದಾರೆ. ಸಂತ್ರಸ್ತರ ಬದುಕು ದುಸ್ತರವಾಗಿದೆ. ಕೆಲವರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದು, ಅಗತ್ಯ ವಸ್ತುಗಳಿಗಾಗಿ ಹಾತೊರೆಯುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ಶಾಲೆಯ ಮಕ್ಕಳು ಸಂತ್ರಸ್ತರಿಗೆ ಸಹಾಯ ಹಸ್ತಚಾಚಿದ್ದಾರೆ. ಅಗತ್ಯ ವಸ್ತುಗಳನ್ನು ಶೇಖರಿಸಿ, ಕೇರಳಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ನಗರದ ಮಾರುಕಟ್ಟೆ ಪ್ರದೇಶದಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ, ವಸ್ತುಗಳನ್ನು ಬೇಡಿ ತಂದು ಶಾಲೆಯಲ್ಲಿ ಶೇಖರಿಸುತ್ತಿದ್ದಾರೆ.
ಅಮರಾವತಿಯಲ್ಲಿರುವ ಸಂತ ಅಲೋಶಿಯಸ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಮಕ್ಕಳು ವಯನಾಡ್ ಸಂತ್ರಸ್ತರ ಆಸರೆಗೆ ಧಾವಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿ ಅಗತ್ಯ ವಸ್ತುಗಳನ್ನು ಸಂಗ್ರಹಿಸುವಂತೆ ಎಂದು ಮಕ್ಕಳಿಗೆ ಮನವಿ ಮಾಡಿತ್ತು.
ಈ ಮನವಿಗೆ ಓಗೊಟ್ಟ ಮಕ್ಕಳು ದಿನಸಿ, ಬಟ್ಟೆ, ಚಪ್ಪಲಿ, ಸೀರೆ, ಸ್ವೆಟರ್, ನೀರಿನ ಬಾಟಲ್, ಬೆಡ್ ಶೀಟ್, ಅಕ್ಕಿ, ಕುಚಲಕ್ಕಿ, ಎಣ್ಣೆ, ಪೇಸ್ಟ್, ಹಲ್ಲು ತಿಕ್ಕುವ ಬ್ರಷ್, ಸ್ನಾನದ ಸೋಪ್, ಬಟ್ಟೆ ಸೋಪ್... ಹೀಗೆ ದಿನಬಳಕೆ ವಸ್ತುಗಳನ್ನು ಖರೀದಿಸಿ ತಂದು ಸಂಗ್ರಹಿಸಿದ್ದಾರೆ.
ಮಕ್ಕಳು ತಂದಿರುವ ವಸ್ತುಗಳನ್ನು ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಕಾಲೇಜಿಗೆ ನಾಳೆ ಕಳುಹಿಸಲಾಗುತ್ತದೆ. ಬಳಿಕ ವಯನಾಡ್‌ಗೆ ತೆರಳಲಿರುವ ಶಾಲೆಯ ಆಡಳಿತ ಮಂಡಳಿ ಸಂತ್ರಸ್ತರಿಗೆ ವಿತರಿಸಲಿದೆ.
'ಈಟಿವಿ ಭಾರತ'ದೊಂದಿಗೆ ವಿದ್ಯಾರ್ಥಿನಿ ವರ್ಷ ಚೌದ್ರಿ ಮಾತನಾಡಿ, "ವಯನಾಡ್‌ನ ಜನ ಕಷ್ಟಪಡುತ್ತಿದ್ದಾರೆ. ಅವರ ಸಹಾಯಕ್ಕಾಗಿ ಅಗತ್ಯ ವಸ್ತುಗಳನ್ನು ಶೇಖರಿಸುತ್ತಿದ್ದೇವೆ. ಗುರುಗಳು ಹೇಳಿದ್ದರಿಂದ ಪೋಷಕರಿಂದ ಹಣ ಪಡೆದು ನಮಗಿಷ್ಟದ ವಸ್ತುಗಳನ್ನು ಖರೀದಿಸಿ ತಂದಿದ್ದೇವೆ. ಅಲ್ಲದೆ ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ಮಾಲೀಕರಿಂದ ಬೇಡಿ ಪಡೆದು ತಂದು ಕಳಿಸಲು ಸಿದ್ಧತೆ ನಡೆಸಿದ್ದೇವೆ" ಎಂದು ಹೇಳಿದರು.
ಫಾದರ್ ವಿನೋದ್ ಮಾತನಾಡಿ, "ನಾವು ಸಂತ ಅಲೋಶಿಯಸ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಮಕ್ಕಳು ವಯನಾಡ್ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಜನರಿಗೆ ಆಸರೆಯಾಗಿದ್ದೇವೆ. ಇದನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಕಳುಹಿಸುತ್ತೇವೆ. ನಂತರ ನಿರಾಶ್ರಿತರ ಮನೆಗಳಿಗೆ ತಲುಪಿಸಲಾಗುವುದು" ಎಂದರು.