ಬಳ್ಳಾರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ಸಂಬಂಧಪಟ್ಟವರಿಂದ ಮಾಹಿತಿ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಬಾಣಂತಿಯರ ಸಾವು ಕೇವಲ ಬಳ್ಳಾರಿ ಮಾತ್ರವಲ್ಲ ರಾಯಚೂರು, ತುಮಕೂರು ಸೇರಿ ಹಲವು ಕಡೆ ಆಗಿದೆ. ಕಡಿಮೆ ವೆಚ್ಚಕ್ಕೆ ಔಷಧಿ ಸರಬರಾಜು ಮಾಡುವರಿಗೆ ಮಣೆ ಹಾಕಲಾಗುತ್ತಿದೆ. ಸರ್ಕಾರ ಅದನ್ನು ತಡೆದು, ಗುಣಮಟ್ಟದ ಔಷಧಿ ಕೊಡಬೇಕು'' ಎಂದರು.
''ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಹೆರಿಗೆ ವಾರ್ಡ್, ಒಟಿ ಪರಿಶೀಲನೆ ಮಾಡಿರುವೆ. ನೀರಿನ ಟ್ಯಾಂಕ್ ನೋಡಿ ಬಂದಿದ್ದೇನೆ.. ರೋಗಿಗಳನ್ನು ಮಾತನಾಡಿಸಿ ಮಾಹಿತಿ ಕಲೆ ಹಾಕಿದ್ದೇನೆ. ವೈದ್ಯರು ಐವಿ ಫ್ಲೂಯಿಡ್ ಕೊಟ್ಟ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಯಿತು ಅಂತಾ ಹೇಳಿದ್ದಾರೆ'' ಎಂದು ತಿಳಿಸಿದರು.
''ನಾಳೆ ಜಿಲ್ಲಾ ಆಸ್ಪತ್ರೆ ಹಾಗೂ ವಿಮ್ಸ್ ವೈದ್ಯರು ಹಾಗೂ ಇತರ ಆಸ್ಪತ್ರೆ ವೈದ್ಯರ ಜೊತೆ ಪ್ರಗತಿ ಪರಿಶೀಲನೆ ಮಾಡುತ್ತೇನೆ. ನಾಳೆ ಒಟಿಯಲ್ಲಿನ ಶುಚಿತ್ವದ ಬಗ್ಗೆ ಮಾಹಿತಿ ತರಲು ಹೇಳಿರುವೆ. ಒಟಿ ಶುಚಿಯಾಗಿತ್ತಾ, ಇಲ್ಲವಾ ಎನ್ನುವ ಬಗ್ಗೆ ಪ್ರತಿ ವರ್ಷ ವರದಿ ಮಾಡಬೇಕು. ಇಲ್ಲಿ ಮೆಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ, ಆದರೆ, ಲ್ಯಾಬ್ ರಿಪೋರ್ಟ್ ಕೇಳಿದ್ದೇನೆ'' ಎಂದು ಮಾಹಿತಿ ನೀಡಿದರು.
ಸರ್ಕಾರದ ಪರಿಹಾರ ಸಾಲದು: ''ಬಾಣಂತಿಯರ ಸಾವಿಗೆ ಸರ್ಕಾರ ಕೊಟ್ಟಿರುವ ಪರಿಹಾರ ಸಾಕಾಗುವುದಿಲ್ಲ. ತಾಯಿಯನ್ನು ಕಳೆದುಕೊಂಡಿರುವ ಆ ಮಕ್ಕಳು ಎಲ್ಲಿವರೆಗೂ ಓದುತ್ತಾರೋ ಅಲ್ಲಿವರೆಗೂ ವಿದ್ಯಾಭ್ಯಾಸ ಉಚಿತವಾಗಿ ಕೊಡಬೇಕು. ಅನಾರೋಗ್ಯ ಸೇರಿದಂತೆ ಅವರ ಜೀವನಕ್ಕೆ ಅವಶ್ಯ ನೆರವು ನೀಡಬೇಕು. ನಾನು ಈ ಬಗ್ಗೆ ಸಿಎಂ ಬಳಿ ಮಾತನಾಡುವೆ'' ಎಂದರು.
''ನಮ್ಮ ಮನೆಯಲ್ಲಿ ಒಬ್ಬರಿಗೆ ಕ್ಯಾನ್ಸರ್ ಆಗಿತ್ತು. ಹೀಗಾಗಿ, ಇಲ್ಲಿಗೆ ನಾನು ಬೇಗ ಬರಲು ಆಗಲಿಲ್ಲ'' ಎಂದು ಇದೇ ವೇಳೆ ಡಾ. ನಾಗಲಕ್ಷ್ಮಿ ಚೌದರಿ ತಿಳಿಸಿದರು.
ನೀರಿನ ಟ್ಯಾಂಕ್ ನೋಡಿ ವೈದ್ಯರಿಗೆ ತರಾಟೆ: ಜಿಲ್ಲಾಸ್ಪತ್ರೆ ಹೆರಿಗೆ ಒಟಿ, ಹರಿಗೆ ವಾರ್ಡ್‌ಗೆ ಭೇಟಿ ಪರಿಶೀಲನೆ ನಡೆಸಿದ ನಾಗಲಕ್ಷ್ಮಿ ಚೌದರಿ ಅವರು ಸರ್ಜನ್ ಡಾ. ಬಸಾರೆಡ್ಡಿ ಮೂಲಕ ಮಾಹಿತಿ ಪಡೆದರು. ಅಲ್ಲದೆ, ನೀರಿನ ಟ್ಯಾಂಕ್ ಪರಿಶೀಲನೆ ನಡೆಸಿದ ಅವರು, ವೈದ್ಯರನ್ನು ತರಾಟೆ ತೆಗೆದುಕೊಂಡರು. ನಾಗಲಕ್ಷ್ಮಿ ಅವರೊಂದಿಗೆ ಸಾಥ್ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಸಾಥ್ ನೀಡಿದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಡಾ. ಶೋಭಾರಾಣಿ ವಿ.ಜೆ., ಸಿಇಒ ರಾಹುಲ್ ಶರಣಪ್ಪ ಶಂಕನೂರು, ಬಿಮ್ಸ್ ನಿರ್ದೇಶಕ ಗಂಗಾಧರ ಗೌಡ ಇತರರು ಇದ್ದರು.
ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು: ಸಾವಿನ ಸಂಖ್ಯೆ 5ಕ್ಕೇರಿಕೆ