ಹುಬ್ಬಳ್ಳಿ : ಗದಗ ಜಿಲ್ಲಾ ವಿವಿಧ ಆಟೋ ಚಾಲಕರ ಹಾಗೂ ಮಾಲೀಕರ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಜ್ಯಮಟ್ಟದ ಆಟೋ ಚಾಲಕರ ಹಾಗೂ ಮಾಲೀಕರ ಬೃಹತ್ ಸಮಾವೇಶವನ್ನು ಜ. 28 ರಂದು ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ ಅವರು ಹೇಳಿದ್ದಾರೆ.
ನಗರದಲ್ಲಿ ಇಂದ ಮಾತನಾಡಿದ ಅವರು, ಜ. 28 ರಂದು ಗದಗ ನಗರದ ರಿಂಗ್ ರೋಡ್ ಬಳಿಯ ಡಾ. ಬಿ. ಆರ್ ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಂದು ಗದಗನ ಶ್ರೀ ತೋಂಟದಾರ್ಯ ಮಠದಿಂದ ರಾಜ್ಯ ಮಟ್ಟದ ಆಟೋ ಚಾಲಕರ ಸಮಾವೇಶದ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಆಟೋ ಚಾಲಕ ಮಾಲೀಕರನ್ನು ಕಾರ್ಮಿಕರು ಎಂದು ಪರಿಗಣಿಸಬೇಕು. ಆಟೋ ಚಾಲಕರ ಮಾಲೀಕರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು. ಆಟೋ ಚಾಲಕರಿಗೆ ನಿವೇಶನ/ವಸತಿ ಅಥವಾ ಆಟೋ ಕಾಲೋನಿ ನಿರ್ಮಿಸುವುದು ಸೇರಿದಂತೆ ಆಟೋ ಚಾಲಕರ ಮಾಲೀಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಆಟೋ ಚಾಲಕ ಮಾಲೀಕರ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ ಒದಗಿಸುವುದು ಮತ್ತು ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಆಟೋ ನಿಲ್ದಾಣಗಳನ್ನು ನಿರ್ಮಿಸಬೇಕಾದ ಅಗತ್ಯ ಇದೆ. ಆಟೋ ರಿಕ್ಷಾಗಳಿಗೆ ತೆರಿಗೆ ವಿನಾಯಿತಿಯನ್ನು ರಾಜ್ಯ ಸರ್ಕಾರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜನವರಿ 28ರಂದು ಸಮಾವೇಶದ ಮೂಲಕ ರಾಜ್ಯ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಲಾಗುವುದು ಎಂದು ರಾಜಶೇಖರಯ್ಯ ಮಠಪತಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರಗಳಾದ ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಿಂದ ಆಟೋ ಚಾಲಕರು ಹಾಗೂ ಮಾಲೀಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ಆಟೋ ಚಾಲಕರ ಸಂಘಟನೆಗಳ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದ್ದಾರೆ. ನಮ್ಮ ಆಟೋ ಚಾಲಕರ ಹಾಗೂ ಮಾಲೀಕರ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮನಗುಂಡಿ, ಬಾಬಾಜಾನ ಬಳಗಾನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬೇಡಿಕೆ ಕಳೆದುಕೊಂಡ ಆಟೋ ಚಾಲಕರು: ಸಹಾಯ ಧನಕ್ಕೆ ಬೇಡಿಕೆ