ಬೆಳಗಾವಿ: ನಾವೇನು ಆಪರೇಷನ್ ಕಮಲ ಮಾಡುತ್ತಿಲ್ಲ. ಕಾಂಗ್ರೆಸ್ನ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಲ್ಲೇ ಅನುದಾನದ ವಿಚಾರವಾಗಿ ಅಸಮಾಧಾನ ಇದೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನುದಾನ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ನಾವು ಸ್ವಾಗತ ಮಾಡಿದ್ವಿ, ಆದರೆ ಈಗ ಕಂಡಿಷನ್ ಹಾಕ್ತಿದ್ದಾರೆ. ಗ್ಯಾರಂಟಿ ಜಾರಿಯಿಂದ ಅನುದಾನ ಬಿಡುಗಡೆ ಆಗ್ತಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಶಾಸಕರು ಅಸಮಾಧಾನ ಹೊರಹಾಕ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಸರ್ಕಾರ ಏನಾಗುತ್ತದೆ ಎಂದು ಕಾದು ನೋಡಿ ಎಂದು ತಿಳಿಸಿದರು.
ಬಿಎಸ್ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ ಹೇಳಿಕೆ ವಿಚಾರಕ್ಕೆ ಯತ್ನಾಳ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಮಾಜಿ ಸಚಿವ ನಿರಾಣಿ ನಿರಾಕರಿಸಿದರು. ಕೆಲವೊಬ್ಬರು ಅಸಾಧಾರಣ ವ್ಯಕ್ತಿಗಳಿರ್ತಾರೆ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು.
ಪಕ್ಷ ಯಾವ ಜವಾಬ್ದಾರಿ ನೀಡಿದ್ರೂ ನಿಭಾಯಿಸುವೆ: ನೀವು ಲೋಕಸಭೆ ಚುನಾವಣೆಗೆ ಬೆಳಗಾವಿಯಿಂದ ತಯಾರಿ ನಡೆಸ್ತಿದ್ದಿರಾ ಎಂಬ ಪ್ರಶ್ನೆಗೆ, ನಾನು ವಿಜಯವಾಡದಿಂದ ಇಲ್ಲಿಗೆ ಬಂದಿದ್ದೇನೆ, ಹಾಗೇ ತಯಾರಿ ನಡೆಸ್ತಿದ್ರೆ ಇಲ್ಲಿಯೇ ಇರ್ತಿದ್ದೆನು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಪಕ್ಷ ಯಾವ ಜವಾಬ್ದಾರಿ ವಹಿಸಿದರೂ ಸಹ ನಾನು ಆ ಜವಾಬ್ದಾರಿ ನಿಭಾಯಿಸುತ್ತೇನೆ. ಬಿಜೆಪಿಯಲ್ಲಿ ಯಾರಿಗೆ ಯಾವಾಗ ಸರ್ಪೈಸ್ ಸಿಗುತ್ತದೆ ಅನ್ನುವುದು ಗೊತ್ತಿಲ್ಲ. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ, ಲೋಕಸಭೆ ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ಏನೂ ಹೇಳುತ್ತದೆಯೋ ಅದನ್ನು ಮಾಡುವೆ ಎಂದು ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು.
ಇದನ್ನೂಓದಿ : ಎನ್ಡಿಎ ಮೈತ್ರಿಕೂಟದಿಂದ ಇಬ್ಬರು ಅಭ್ಯರ್ಥಿಗಳು ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ