ಬೆಂಗಳೂರು: ಮುಡಾ ನಿವೇಶನ ಅಕ್ರಮ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣಗಳ ಸಂಬಂಧ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲೂ ಬಿಜೆಪಿ ಪಕ್ಷ ಕಾಂಗ್ರೆಸ್ ಅನ್ನು ಮುಜುಗರಕ್ಕೀಡು ಮಾಡುತ್ತಿದೆ. ಈ ಹಿನ್ನೆಲೆ ಇದೀಗ ರಾಜ್ಯ ಸರ್ಕಾರ ಬಿಜೆಪಿ ಅವಧಿಯಲ್ಲಿನ ವಿವಿಧ ಹಗರಣಗಳ ತನಿಖೆಯನ್ನು ಚುರುಕುಗೊಳಿಸಲು ಮುಂದಾಗಿದೆ. ಅಷ್ಟಕ್ಕೂ ಬಿಜೆಪಿ ಅವಧಿಯಲ್ಲಾಗಿರುವ ವಿವಿಧ ಅಕ್ರಮ ಆರೋಪಗಳ ಮೇಲಿನ ತನಿಖೆ ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.
ಬಿಜೆಪಿ ಅವಧಿಯಲ್ಲಿ ನಡೆದಿರುವ ಪ್ರಮುಖ ಹಗರಣಗಳ ಮೇಲೆ ಕಾಂಗ್ರೆಸ್ ಸರ್ಕಾರ ವಿವಿಧ ತನಿಖಾ ಏಜೆನ್ಸಿ, ವಿಚಾರಣಾ ಆಯೋಗದ ಮೂಲಕ ತನಿಖೆ ನಡೆಸುತ್ತಿದೆ. ಪ್ರಮುಖವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿನ 40% ಕಮಿಷನ್ ಆರೋಪ, ಕೋವಿಡ್ 19 ಅಕ್ರಮ, ಪಿಎಸ್‌ಐ ನೇಮಕಾತಿ ಅಕ್ರಮ, ಬಿಟ್ ಕಾಯಿನ್ ಹಗರಣ, ಬೋವಿ ಅಭಿವೃದ್ಧಿ ನಿಗಮ ಅಕ್ರಮ, ಕಿಯಾನಿಕ್ಸ್ ಅಕ್ರಮ, ದೇವರಾಜು ಅರಸು ಟ್ರಕ್ ಟರ್ಮಿನಲ್ ಅಕ್ರಮ ಸೇರಿ ಕೆಲ ಹಗರಣಗಳ ತನಿಖೆ ನಡೆಯುತ್ತಿದೆ. ಒಂದು ವರ್ಷದಿಂದ ಈ ಅಕ್ರಮಗಳ ಮೇಲೆ ವಿವಿಧ ತನಿಖಾ ಸಂಸ್ಥೆಗಳು, ವಿಚಾರಣಾ ಆಯೋಗದ ಮೂಲಕ ತನಿಖೆ ನಡೆಸಲಾಗುತ್ತಿದೆ.
40% ಕಮಿಷನ್ ಅಕ್ರಮ ಆರೋಪ ತನಿಖೆ: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡಲಾಗಿದ್ದ 40% ಕಮಿಷನ್ ಆರೋಪದ ತನಿಖೆಗಾಗಿ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಆಗಸ್ಟ್ನಲ್ಲಿ ನ್ಯಾ. ಹೆಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿತ್ತು. ಆರಂಭದಲ್ಲಿ ಮೂರು ತಿಂಗಳಿಗೆ ಅವಧಿಯ ಕಾಲಾವಧಿ ನೀಡಿತ್ತು. ಈಗಾಗಲೇ ಆಯೋಗ ತನಿಖೆ ನಡೆಸುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಎರಡು ಬಾರಿ ತನಿಖಾ ಆಯೋಗದ ಅವಧಿಯನ್ನು ವಿಸ್ತರಿಸಿದೆ. ಸದ್ಯ ಮಾರ್ಚ್ 2025ರವರೆಗೆ ತನಿಖಾ ಆಯೋಗದ ಅವಧಿಯನ್ನು ವಿಸ್ತರಿಸಿದೆ.
ಇತ್ತ ಹೈಕೋರ್ಟ್ ತನಿಖೆ ಸಂಬಂಧ ಸರ್ಕಾರದ ವಿಳಂಬ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆ ಆಯೋಗ ಗುತ್ತಿಗೆದಾರಿಂದ ದಾಖಲಾತಿಗಳನ್ನು ಕಲೆಹಾಕಿ ವಿಚಾರಣೆ ನಡೆಸುತ್ತಿದೆ. ತನಿಖಾ ಆಯೋಗ ಜುಲೈ 2019ರಿಂದ ಮಾರ್ಚ್ 2023ರ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ 75 ಕಾಮಗಾರಿಗಳ ವಿವರಗಳನ್ನು ಕೋರಿ ವಿಚಾರಣೆ ನಡೆಸುತ್ತಿದೆ.
ಬಿಟ್ ಕಾಯಿನ್ ಪ್ರಕರಣ: ಬಿಜೆಪಿ ಅವಧಿಯಲ್ಲಿ ಸದ್ದು ಮಾಡಿದ್ದ ಬಿಟ್ ಕಾಯಿನ್ ಅಕ್ರಮ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಈ ಸಂಬಂಧ ಬಿಜೆಪಿ ಮುಖಂಡರ ಹೆಸರುಗಳು ಕೇಳಿಬಂದಿತ್ತು. ಈ ಸಂಬಂಧ ತನಿಖೆಗಾಗಿ ಕಾಂಗ್ರೆಸ್ ಸರ್ಕಾರ ಜುಲೈ 2023ಕ್ಕೆ ಸಿಐಡಿ ಎಸ್ಐಟಿ ರಚನೆ ಮಾಡಿತ್ತು. ಎಡಿಜಿಪಿ ಮನೀಶ್ ಕರ್ಬಿಕರ್ ನೇತೃತ್ವದಲ್ಲಿ ಎಸ್ಐಟಿ ಬಿಟ್ ಕಾಯಿನ್ ತನಿಖೆ ನಡೆಸುತ್ತಿದೆ. 2020ರಲ್ಲಿ ಬಿಟ್ ಕಾಯಿನ್ ಹಗರಣ ಸಂಬಂಧ ಬೆಂಗಳೂರಿನ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಿಟ್ ಕಾಯಿನ್ ಹಗರಣ ಸಂಬಂಧ ಕೆ.ಜಿ.ನಗರ, ಕಾಟನ್ ಪೇಟೆ, ಅಶೋಕನಗರ, ಕಬ್ಬನ್ ಪಾರ್ಕ್ ಹಾಗೂ ತುಮಕೂರು ಸೇರಿದಂತೆ ಒಟ್ಟು 8 ಪ್ರಕರಣಗಳ ತನಿಖೆಯನ್ನ ಎಸ್ಐಟಿ ನಡೆಸುತ್ತಿದೆ. ಎಸ್ಐಟಿ ಈವರೆಗೆ 150ಕ್ಕಿಂತ ಹೆಚ್ಚು ಮಂದಿಯನ್ನ ವಿಚಾರಣೆ ನಡೆಸಿ ಅವರನ್ನು ಸಾಕ್ಷಿಗಳಾಗಿ ಹೇಳಿಕೆ ದಾಖಲಿಸಿಕೊಂಡಿದೆ. ಅಶೋಕನಗರ ಹಾಗೂ ಕೆಂಪೇಗೌಡನಗರ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಕೋವಿಡ್ 19 ಅಕ್ರಮಗಳ ತನಿಖೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ಬಗ್ಗೆ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿದೆ. ಆಗಸ್ಟ್ 2023ಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ವಹಣೆ, ಔಷಧ, ಮಾಸ್ಕ್, ಉಪಕರಣಗಳು ಹಾಗೂ ಸಾಮಾಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಕುರಿತು ತನಿಖೆಗೆ ನ್ಯಾ. ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದ್ದು, 3 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಈ ಅವಧಿಯನ್ನು ಮೇ 24, 2024ರವರೆಗೆ ವಿಸ್ತರಣೆ ಮಾಡಲಾಗಿತ್ತು. ಆದರೆ ಈ ತನಿಖೆಗೆ ಮತ್ತಷ್ಟು ಕಾಲಾವಧಿಯನ್ನು ನ್ಯಾಯಾಧೀಶರು ಕೋರಿದ ಹಿನ್ನಲೆಯಲ್ಲಿ ಆಯೋಗದ ಅವಧಿಯನ್ನು 31.08.2024 ರವರೆಗೆ ವಿಸ್ತರಿಸಲಾಗಿದೆ.
ವಿಚಾರಣಾ ಆಯೋಗ ಸಂಬಂಧಪಟ್ಟ ಇಲಾಖೆಗಳಿಂದ ಎರಡು ಲಕ್ಷಕ್ಕೂ ಅಧಿಕ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಟೆಂಡರ್, ವೈದ್ಯಕೀಯ ಉಪಕರಣ, ವೆಂಟಿಲೇಟರ್‌ಗಳ ಖರೀದಿ ಹಾಗೂ ಆಮ್ಲಜನಕರ ನಿರ್ವಹಣೆ ಸಂಬಂಧಿತ ಕಡತಗಳನ್ನು ತರಿಸಿಕೊಂಡಿದೆ. ಸಂಬಂಧಿತ ಅಧಿಕಾರಿಗಳನ್ನು ಈಗಾಗಲೇ ವಿಚಾರಣೆ ನಡೆಸಿದೆ. ಆಯೋಗ ತಿಂಗಳಾಂತ್ಯಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ಪಿಎಸ್‌ಐ ನೇಮಕಾತಿ ಅಕ್ರಮ ತನಿಖೆ: ಬಿಜೆಪಿ ಅವಧಿಯಲ್ಲಿನ ಸದ್ದು ಮಾಡಿದ್ದ ಮತ್ತೊಂದು ಹಗರಣ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮ. ಇದರ ತನಿಖೆಗಾಗಿ ಕಾಂಗ್ರೆಸ್ ಸರ್ಕಾರ ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿತ್ತು. ಜನವರಿ 21, 2021 ರಂದು 545 PSI (ಸಿವಿಲ್) ನೇಮಕಾತಿಗೆ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿತು ಮತ್ತು 54,103 ಅಭ್ಯರ್ಥಿಗಳು ಅಕ್ಟೋಬರ್ 3, 2021 ರಂದು ನಡೆದ ಲಿಖಿತ ಪರೀಕ್ಷೆಗಳಿಗೆ ಹಾಜರಾಗಿದ್ದರು. ಈ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿತ್ತು.
ಜುಲೈ 2023ರಲ್ಲಿ ರಚನೆಗೊಂಡ ತನಿಖಾ ಆಯೋಗ 324 ದಾಖಲೆಗಳನ್ನು ಪತ್ತೆ ಹಚ್ಚಿದೆ. ಸುಮಾರು 28 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ ಮತ್ತು ಪೊಲೀಸರು ಸಲ್ಲಿಸಿದ 16 ವರದಿಗಳಲ್ಲಿ ಉಲ್ಲೇಖಿಸಲಾದ 117 ಆರೋಪಿಗಳನ್ನು ದೃಢೀಕರಿಸಿದೆ. ತನಿಖಾ ಆಯೋಗ ಜನವರಿ 2024ರಂದು ತನ್ನ ವರದಿಯನ್ನು ಸಲ್ಲಿಸಿದ್ದು, ಸಿಐಡಿಗೆ ಹೆಚ್ಚಿನ ತನಿಖೆಗೆ ಶಿಫಾರಸು ಮಾಡಿತ್ತು. ನ್ಯಾ. ವೀರಪ್ಪ ನೇತೃತ್ವದ ಆಯೋಗ ಒಟ್ಟು 471 ಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿತ್ತು. ವರದಿಯಲ್ಲಿ ಪೊಲೀಸರು ಮತ್ತು ಜನಪ್ರತಿನಿಧಿಗಳ ಗಂಭೀರ ಲೋಪವನ್ನು ಎತ್ತಿ ತೋರಿಸಿದ್ದಾರೆ. ವರದಿ ಸ್ವೀಕರಿಸಿದ ರಾಜ್ಯ ಸರ್ಕಾರ ಅದನ್ನು ಇನ್ನೂ ಸದನದಲ್ಲಿ ಮಂಡಿಸಿಲ್ಲ.
ಕಿಯೋನಿಕ್ಸ್ ಅಕ್ರಮದ ತನಿಖೆ ಸ್ಥಿತಿಗತಿ: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ (ಕಿಯೋನಿಕ್ಸ್) 2019ರಿಂದ 2023ರ ಅವಧಿಯಲ್ಲಿ ಸುಮಾರು 400 ಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಸಿಎಜಿ ವರದಿಯಲ್ಲಿ ಸರಕುಗಳ ಖರೀದಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರಗಳು ನಡೆದಿವೆ ಎಂದು ಉಲ್ಲೇಖಿಸಿತ್ತು. ಖರೀದಿ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ಕಳಪೆ ಗುಣಮಟ್ಟದ ಸರಕುಗಳ ಪೂರೈಕೆ, ದಾಖಲೆಗಳನ್ನು ಪರಿಶೀಲಿಸದೆ ಬಿಲ್ ಪಾವತಿಸಿರುವುದು ಪತ್ತೆಯಾಗಿತ್ತು.
ಇದರ ಆಧಾರದಲ್ಲಿ ಈ ಅಕ್ರಮಗಳ ಕುರಿತು ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಎಸ್.ಡಿ. ಮೀನಾ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಿ ಫೆಬ್ರವರಿ 2024ರಂದು ಆದೇಶ ಹೊರಡಿಸಿತ್ತು. ಆದರೆ ಎಸ್.ಡಿ.ಮೀನಾ ಅನಾರೋಗ್ಯದ ಕಾರಣ ತನಿಖೆ ನಡೆಸಲು ಸಾಧ್ಯವಾಗದ ಕಾರಣ ರಾಜ್ಯ ಸರ್ಕಾರ ಇದೀಗ ತನಿಖೆ ಹೊಣೆಯನ್ನು ಐಎಎಸ್ ಅಧಿಕಾರಿ ಎಂ.ಮಹೇಶ್ವರ ರಾವ್ಗೆ ವಹಿಸಿದೆ.
ಮಹೇಶ್ವರ್ ರಾವ್ ಅವರು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ತನಿಖಾ ಪ್ರಕ್ರಿಯೆಗಳಿಗೆ ಸಹಕರಿಸಲು ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನ ಕುಮಾರ್ ಮತ್ತು ಮಾಜಿ ಲೆಕ್ಕ ಪರಿಶೋಧನಾ ನಿಯಂತ್ರಕ ನಂದಕುಮಾರ್ ಅವರನ್ನು ನೀಡುವಂತೆ ಕೋರಿದ್ದರು. ಜೊತೆಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಅಕ್ರಮಗಳ ಸಂಬಂಧ ಕಡತಗಳ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೋವಿ ಅಭಿವೃದ್ಧಿ ನಿಗಮ ಅಕ್ರಮ ತನಿಖೆ: ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಾಗಿದೆ ಎನ್ನಲಾದ ಭೋವಿ ಅಭಿವೃದ್ಧಿ ನಿಗಮ ಅಕ್ರಮದ ಸಿಐಡಿ ತನಿಖೆ ಚುರುಕುಗೊಂಡಿದೆ. ಸುಮಾರು 87 ಕೋಟಿ ರೂ. ಮೊತ್ತವನ್ನು ವಿವಿಧ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ಅಕ್ರಮ ಎಸಗಿದ ಆರೋಪ ಇದಾಗಿದೆ. ಆಗಸ್ಟ್ನಲ್ಲಿ ಸಿಐಡಿ ತಂಡ ಹಲವು ಕಚೇರಿಗಳು, ಸ್ಥಳಗಳಲ್ಲಿ ಶೋಧ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ. ನಿಗಮದ ಪ್ರಧಾನ ಕಚೇರಿಯಲ್ಲಿ ಶೋಧ ನಡೆಸಿರುವ ಸಿಐಡಿ ತಂಡ ಕೆಲವು ದಾಖಲೆ ಪತ್ರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ದೇವನಹಳ್ಳಿಯಲ್ಲಿರುವ ಗ್ರಾಮಾಂತರ ಕಚೇರಿಯಲ್ಲಿ ತಪಾಸಣೆಗೈದು ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಅಧೀಕ್ಷಕ ಸುಬ್ಬಪ್ಪ ಎಂಬವರನ್ನು ಸಿಐಡಿ ಬಂಧಿಸಿದೆ. ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ನಾಗರಾಜಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಲೀಲಾವತಿ ಸೇರಿದಂತೆ 20 ಮಂದಿ ಮಧ್ಯವರ್ತಿಗಳಿಗೆ ಹುಡುಕಾಟ ಆರಂಭಿಸಿದೆ. ರಾಜಾಜಿನಗರದಲ್ಲಿರುವ ಉಪ ಕಚೇರಿಯಲ್ಲಿ ಅಧಿಕಾರಿಗಳು ಶೋಧ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿ, ಕೆಲವು ಪೆನ್‌ಡ್ರೈವ್, ಕಡತಗಳು ಲಭಿಸಿದ್ದು ತನಿಖೆ ಚುರುಕುಗೊಳಿಸಿದೆ.
ಟ್ರಕ್ ಟರ್ಮಿನಲ್ ಅಕ್ರಮದ ತನಿಖೆ ಚುರುಕು: ಇತ್ತ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ ನಡೆದಿದೆ ಎನ್ನಲಾದ 47.10 ಕೋಟಿ ಅಕ್ರಮದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಚುರಕುಗೊಳಿಸಿದ್ದಾರೆ. 2021- 2023ರ ನಡುವೆ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. 2023ರ ಸೆಪ್ಟೆಂಬರ್ 23ರಂದು ಎಫ್‌ಐಆರ್ ದಾಖಲಾಗಿತ್ತು. ತುಂಡು ಗುತ್ತಿಗೆ ಹೆಸರಿನಲ್ಲಿ ನಡೆದಿರುವ ಅಕ್ರಮ ಇದಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
ಟರ್ಮಿನಲ್ ವತಿಯಿಂದ 2021-2023ರ ನಡುವೆ 821 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 9.18 ಕೋಟಿ ರೂ. ವೆಚ್ಚದ 153 ಕಾಮಗಾರಿಗಳನ್ನಷ್ಟೇ ನಿರ್ವಹಿಸಲಾಗಿತ್ತು. ಉಳಿದ 668 ಕಾಮಗಾರಿಗಳನ್ನು ಕೈಗೊಳ್ಳದೆಯೇ ನಕಲಿ ಬಿಲ್ ಸೃಷ್ಟಿಸಿ 39.42 ಕೋಟಿ ರೂ.ಗಳನ್ನು ಮೂರು ಗುತ್ತಿಗೆ ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡಲಾಗಿತ್ತು ಎಂಬುದು ಆರೋಪ ಇದಾಗಿದೆ. ಪ್ರಕರಣ ಸಂಬಂಧ ನಿಗಮದ ಕಚೇರಿಗೆ ತೆರಳಿ ಸುಮಾರು 600ಕ್ಕೂ ಹೆಚ್ಚು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮದ ಅವಧಿಯಲ್ಲಿ ಬಿಜೆಪಿ ಮುಖಂಡ ಡಿ.ಎಸ್.ವೀರಯ್ಯ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷರಾಗಿದ್ದರು. ಕಿಕ್ ಬ್ಯಾಕ್ ತೆಗೆದುಕೊಂಡಿರುವ ಆರೋಪ ಹೊಂದಿರುವ ಡಿ.ಎಸ್. ವೀರಯ್ಯ ಅವರನ್ನು ಬಂಧಿಸಲಾಗಿದೆ. ಸ್ಥಳ ಮಹಜರು ನಡೆಸಿ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ.
ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ: ಸಿದ್ದರಾಮಯ್ಯಗೆ ಎದುರಾಗುವ ಸಂಕಷ್ಟಗಳೇನು? - cm Siddaramaiah