ಬೆಂಗಳೂರು: ಹಲವು ತಿಂಗಳುಗಳಿಂದ ಕೆಲವು ಮುಖಂಡರ ಅಶಿಸ್ತಿನ ನಡವಳಿಕೆಗೆ ಕಡಿವಾಣ ಹಾಕಲು ಹಾಗೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದ ವರಿಷ್ಠರಿಗೆ ಮನವರಿಕೆ ಮಾಡಿ ಎಲ್ಲವೂ ಕೂಡ ಸುಸೂತ್ರವಾಗಿ ಸರಿಯಾದ ನಿಟ್ಟಿನಲ್ಲಿ ಹೋಗಬೇಕೆಂದು ಚರ್ಚೆ ಆಗಿದೆ ಎಂದು ತಿಳಿಸಿದರು.
ಬಿಜೆಪಿ ಚಿಹ್ನೆಯಡಿ ಗೆದ್ದ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರು ಕಳೆದ ಹಲವು ತಿಂಗಳುಗಳಿಂದ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಜೊತೆ ಅಧಿಕೃತವಾಗಿ ಅವರು ಗುರುತಿಸಿಕೊಂಡಿದ್ದಾರೆ. ಈ ವಿಚಾರವನ್ನು ಬಹಳ ಹಿಂದೆಯೂ ಚರ್ಚಿಸಲಾಗಿತ್ತು. ಇದೆಲ್ಲದಕ್ಕೂ ಇತಿಶ್ರೀ ಹಾಕಲು ಹಾಗೂ ಬಿಗಿಯಾದ ಕ್ರಮ ಕೈಗೊಳ್ಳಲು ಕೋರ್ ಕಮಿಟಿ ಸರ್ವಾನುಮತದಿಂದ ಕೋರಿದೆ. ರಾಷ್ಟ್ರೀಯ ಅಧ್ಯಕ್ಷರ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಇತ್ಯರ್ಥ ಮಾಡಬೇಕೆಂಬ ತೀರ್ಮಾನ ಆಗಿದೆ ಎಂದರು.
ಕೆಲವು ಪ್ರಮುಖ ವಿಚಾರಗಳ ಕುರಿತು ಸವಿಸ್ತಾರವಾಗಿ ಚರ್ಚೆ ಆಗಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ನಮಗೆ ಯಾಕೆ ಹಿನ್ನಡೆ ಆಯಿತು ಎಂಬ ಬಗ್ಗೆ ತಿಳಿದುಕೊಳ್ಳಲು ರಾಜ್ಯದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್.ಮಹೇಶ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ತಂಡವು ಎರಡೂ ಕ್ಷೇತ್ರಕ್ಕೆ ತೆರಳಿ ಮಾಹಿತಿ ಪಡೆಯಲಿದೆ. ಸಂಘಟನಾ ಪರ್ವದ ಚರ್ಚೆಯೂ ನಡೆದಿದೆ ಎಂದು ಇದೇ ವೇಳೆ ಹೇಳಿದರು.
ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರ ಅಮಾನತು ಮಾಡುವಂತೆ ಮತ್ತು ಅನರ್ಹತೆಗೆ ಕೋರಬೇಕೆಂದು ಕೋರ್ ಕಮಿಟಿ ಸದಸ್ಯರು ತಿಳಿಸಿದ್ದಾರೆ. ಯತ್ನಾಳ್ ಉಚ್ಛಾಟನೆಗೆ ಕೋರಿದ್ದೀರಾ ಎಂಬ ಪ್ರಶ್ನೆಗೆ, ಆ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ; ಈ ವಿಚಾರ ವರಿಷ್ಠರ ಅಂಗಳದಲ್ಲಿದೆ. ಅವರು ಕೂಡ ಶಿಸ್ತು ಸಮಿತಿ ಮುಂದೆ ಹಾಜರಾಗಿ ಬಂದಿದ್ದಾರೆ ಎಂದು ತಿಳಿಸಿದರು.
ಇದೆಲ್ಲವೂ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ; ಕಾರ್ಯಕರ್ತರಿಗೂ ಬೇಸರವಾಗಿದೆ. ಯಾರೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕು. ಹಾದಿಬೀದಿಯಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮ ಕುರಿತು ಚರ್ಚೆ ಆಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರು ಶಾಸಕರಾಗಿದ್ದಾರೆ. ಆದ್ದರಿಂದ ಅವರಿಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರೀಯ ಶಿಸ್ತು ಸಮಿತಿಗೆ ಮಾತ್ರ ಇದೆ. ಈ ಹಿಂದಿನ ಬೆಳವಣಿಗೆ ಮತ್ತು ಅವರ ನಡವಳಿಕೆ ಕುರಿತು ಕೋರ್ ಕಮಿಟಿ ಶಿಫಾರಸು ಮಾಡಬಹುದು. ಉಳಿದ ನಿರ್ಣಯವನ್ನು ಅವರೇ ತೆಗೆದುಕೊಳ್ಳಬೇಕು. ಹಾಗಾಗಿ ಶಿಫಾರಸು ಮಾಡುವ ಕೆಲಸವನ್ನು ಕೋರ್ ಕಮಿಟಿ ಮಾಡಬಹುದು ಎಂದರು.
ಸರ್ಕಾರಿ ಪ್ರಾಯೋಜಿತ ಕೊಲೆ: ಬಳ್ಳಾರಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯದಿಂದ ಆಗಿರುವ ಸಾವನ್ನು ಸರ್ಕಾರಿ ಪ್ರಾಯೋಜಿತ ಕೊಲೆ ಎಂದೇ ಕರೆಯಬೇಕಾಗುತ್ತದೆ. ಆಸ್ಪತೆಗಳಲ್ಲಿ ಅಗತ್ಯ ಇರುವ ಔಷಧಿ ಸಿಗುತ್ತಿಲ್ಲ. ಸರಬರಾಜು ಮಾಡುತ್ತಿಲ್ಲ. ಏನು ಕಾರಣ ಎಂದು ಪ್ರಶ್ನಿಸಿದರು.
ಗರ್ಭಿಣಿಯರು ಮತ್ತು ಹಸುಳೆಗಳ ಸರಣಿ ಸಾವು ಸಂಭವಿಸುತ್ತಿದೆ. ಇದು ಸಾಮಾನ್ಯ ಸಂಗತಿಯಲ್ಲ. ಈ ಸಾವಿಗೆ ನೈತಿಕ ಹೊಣೆಯನ್ನು ಆಡಳಿತ ನಡೆಸುವ ಸರ್ಕಾರವೇ ಹೊತ್ತುಕೊಳ್ಳಬೇಕು. ಇಲಾಖೆ ಸಚಿವರೇ ನೈತಿಕ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ಬ್ಲ್ಯಾಕ್ ಲಿಸ್ಟಿನಲ್ಲಿ ಸೇರಿಸಿದ ಕಂಪೆನಿಯ ಔಷಧವನ್ನು ಮತ್ತೆ ಇಲ್ಲಿ ಸರಬರಾಜು ಮಾಡಿದ್ದು, ಇದರ ಹಿನ್ನೆಲೆ ಏನು ಎಂದು ಕೇಳಿದರು.
113 ಡ್ರಗ್ ಇನ್ಸ್ಪೆಕ್ಟರ್ಗಳಲ್ಲಿ ಈಗ ಕರ್ತವ್ಯದಲ್ಲಿ ಇರುವುದು 11 ಜನ ಮಾತ್ರ. 102 ಜನ ಇಲ್ಲ. ಈ ಎಲ್ಲ ಪ್ರಶ್ನೆಗಳನ್ನು ಅಧಿವೇಶನದಲ್ಲಿ ಎತ್ತುತ್ತೇವೆ ಎಂದು ತಿಳಿಸಿದರು.
ಇಂದಿನ ನಮ್ಮ ಕೋರ್ ಕಮಿಟಿ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ರಾಧಾಮೋಹನ್ ದಾಸ್, ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಲ್ಲ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದರು ಎಂದು ವಿವರಿಸಿದರು.
ಇದನ್ನೂ ಓದಿ: ಯತ್ನಾಳ್ ಬಹಿರಂಗ ಹೇಳಿಕೆ ವಿಚಾರ: ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ - ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್