ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ಸಿದ್ಧವಾಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ಉತ್ತರ ಕರ್ನಾಟಕದ ಜನತೆ ಅದರಲ್ಲೂ ಧಾರವಾಡ ಜಿಲ್ಲೆಯ ರೈತಾಪಿ ವರ್ಗ, ಉದ್ಯಮಿಗಳು ಹಾಗೂ ನಾಗರಿಕರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಹುಬ್ಬಳ್ಳಿ - ಧಾರವಾಡಕ್ಕೆ ಏನೇನು ದೊರೆಯಲಿದೆ ಎಂದು ಆಸೆಗಣ್ಣುಗಳಿಂದ ಎದುರು ನೋಡುತ್ತಿದ್ದಾರೆ. ರಾಜ್ಯದ ಎರಡನೇ ದೊಡ್ಡ ಮಹಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ - ಧಾರವಾಡ ಅನುದಾನ ವಿಚಾರಕ್ಕೆ ಬಂದರೆ ಅಷ್ಟಕಷ್ಟೇ ಎನ್ನುವಂತಿದೆ. ಇತ್ತೀಚಿನ ವರ್ಷಗಳಲ್ಲಿ ಪಾಲಿಕೆ ಅನುದಾನ ಕೊರತೆಯಿಂದ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಅಭಿವೃದ್ಧಿ ಯೋಜನೆಗಳಿಗೂ ಹಿನ್ನಡೆಯಾಗುವಂತಾಗಿದೆ. ಉದ್ಯಮ ವಲಯ ನಿರೀಕ್ಷಿತ ರೀತಿಯಲ್ಲಿ ಬೆಳೆದಿಲ್ಲ. ಬಿಯಾಂಡ್ ಬೆಂಗಳೂರು ನೈಜ ರೀತಿಯಲ್ಲಿ ಅನುಷ್ಠಾನಗೊಳ್ಳಲು ಆಯವ್ಯಯದಲ್ಲಿ ವಾಸ್ತವಿಕ ನೆಲೆಗಟ್ಟಿನ ತೀರ್ಮಾನಗಳನ್ನು ಕೈಗೊಳ್ಳಬೇಕಾಗಿದೆ.
ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ: ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಆರಂಭಗೊಳ್ಳಬೇಕು ಎಂಬ ಬೇಡಿಕೆ ಹಲವು ವರ್ಷಗಳದ್ದಾಗಿತ್ತು. ಇನ್ನೇನು ಆರಂಭವಾಗುತ್ತದೆ ಎಂಬ ಅನಿಸಿಕೆಯಲ್ಲಿಯೇ ರಾಜ್ಯ ಸರ್ಕಾರ ಅದನ್ನು ಬೆಳಗಾವಿಗೆ ವರ್ಗಾಯಿಸಿತ್ತು. ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಶಾಖೆ ಆರಂಭಕ್ಕೆ ಮುಂದಾಗಿತ್ತು. ಬೆಳಗಾವಿಯಲ್ಲಿ ಕೇಂದ್ರ ಆರಂಭಕ್ಕೆ ಸೂಕ್ತ ಜಾಗ ಇಲ್ಲವಾಗಿದ್ದು, ಇಂದಿಗೂ ಅದು ಕಾರ್ಯಾರಂಭಗೊಂಡಿಲ್ಲ. ಆದರೆ ಹುಬ್ಬಳ್ಳಿಯ - ಕಿಮ್ಸ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳು, ಸಲಕರಣೆಗಳು, ತಜ್ಞ ವೈದ್ಯರು ಇದ್ದಾರೆ. ಆದರೆ, ಆಸ್ಪತ್ರೆ ಸ್ಥಾನಮಾನ ಇಲ್ಲವಾಗಿದ್ದು, ರಾಜ್ಯ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ನೀಡಿದರೆ ಉತ್ತರ ಕರ್ನಾಟಕದ ಅದೆಷ್ಟೋ ಕ್ಯಾನ್ಸರ್ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆತಂತಾಗಲಿದೆ.
ಕಿಮ್ಸ್‌ಗೆ ವಿಶೇಷ ಪ್ಯಾಕೇಜ್: ಉತ್ತರ ಕರ್ನಾಟಕಕ್ಕೆ ಸಂಜೀವಿನಿ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳು ಪ್ಯಾಕೇಜ್ ಭರವಸೆ ನೀಡುತ್ತಾ ಬಂದಿವೆಯಾದರೂ ಪರೀಕ್ಷಿತ ಅನುದಾನ ಸಿಕ್ಕಿಲ್ಲ. ಬರುವ ರೋಗಿಗಳಿವ ತಕ್ಕಂತೆ ಸೌಲಭ್ಯಗಳು ಇನ್ನಷ್ಟು ಹೆಚ್ಚಬೇಕಿದೆ. ಸೇವೆಗಳನ್ನು ವಿಸ್ತರಿಸಬೇಕಿದೆ. ಇದಕ್ಕೆ ಪೂರಕವಾಗಿ ಕಿಮ್ಸ್‌ಗೆ ಅನುದಾನ ನೀಡಬೇಕಿದೆ.
ಡಾ. ಗಂಗೂಬಾಯಿ ಹಾನಗಲ್ಲ ಗುರುಕುಲ ಮಾದರಿ ಸಂಗೀತ ವಿದ್ಯಾಲಯಕ್ಕೆ ವಿಶೇಷ ಅನುದಾನ: ಇದೀಗ ವಿದ್ಯಾಲಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ವಿದ್ಯಾರ್ಥಿಗಳು ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ವಿದ್ಯಾಲಯಕ್ಕೆ ವಾರ್ಷಿಕ 1.5 ಕೋಟಿ ರೂ. ಅನುದಾನ ದೊರೆಯಬೇಕಾಗಿದ್ದು, ಪ್ರತಿವರ್ಷ ಅನುದಾನ ಕೊರತೆಯಾಗುತ್ತಿದೆ. ಕಳೆದೊಂದು ವರ್ಷದಿಂದ ಅನುದಾನ ಸಂಪೂರ್ಣ ಸ್ಥಗಿತಗೊಂಡಿದೆ. ವೇತನ ದೊರೆಯದೇ ಇದ್ದ ಐವರು ಸಂಗೀತ ಗುರುಗಳು ವಿದ್ಯಾಲಯದಿಂದ ಹೊರನಡೆದಾಗಿದೆ. ವಿದ್ಯಾರ್ಥಿಗಳ ಪ್ರವೇಶಾತಿ ಇಲ್ಲ. ಹೀಗಾಗಿ ಸಂಗೀತ ಪ್ರೇಮಿಗಳು ವಿಶೇಷ ಅನುದಾನದ ನಿರೀಕ್ಷೆಯಲ್ಲಿ ಇದ್ದಾರೆ.
ಅವಳಿನಗರದ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನಿರೀಕ್ಷೆ: ಇಂದಿಗೂ ಶೇ. 40-50 ಮಾತ್ರ ಒಳಚರಂಡಿ ವ್ಯವಸ್ಥೆ ಹೊಂದಿರುವ ಅವಳಿನಗರಕ್ಕೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡಬೇಕಾಗಿದೆ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡಿಕೆಗಳಿಗೆ ಈ ಬಾರಿಯ ಆಯವ್ಯಯ ವಿಧ್ಯುಕ್ತ ಚಾಲನೆ ನೀಡುತ್ತಾ ಕಾಯ್ದು ನೋಡಬೇಕಾಗಿದೆ.
ಬರಗಾಲ ಕಾಮಗಾರಿ - ಜಿಲ್ಲೆಯಲ್ಲಿ ತೀವ್ರ ಬರಗಾಲ: ಧಾರವಾಡ ಜಿಲ್ಲೆಯೂ ಕೂಡ ಬರದಿಂದ ಮುಕ್ತವಾಗಿಲ್ಲ. ಇಲ್ಲೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ ರೈತಾಪಿ ವರ್ಗ ಕಂಗಾಲಾಗಿದೆ. ಹೀಗಾಗಿ ರೈತರು ಬರಗಾಲ ಕಾಮಗಾರಿ ಹಾಗೂ ಬರ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಕಳಸಾ ಬಂಡೂರಿ ಯೋಜನೆ ವಿಶೇಷ ಅನುದಾನ: ಪ್ರತಿ ಬಜೆಟ್ನಲ್ಲಿಯೂ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗೆ ಅನುದಾನ ಮೀಸಲಿಡಲಾಗುತ್ತದೆ. ಆದರೆ, ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂಬ ಅಸಮಾಧಾನ ಇಲ್ಲಿನ ಜನರಲ್ಲಿದೆ. ಆದರೆ, ಈ ಬಾರಿ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಘೋಷಣೆ ಮಾಡುವುದರ ಮೂಲಕ ಕಾಮಗಾರಿ ಆರಂಭಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಅದರ ಜೊತೆಗೆ ಬೆಣ್ಣೆ ಹಳ್ಳ ಯೋಜನೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪ್ರತಿ ವರ್ಷ ಹಳ್ಳದಿಂದ ಆಗುತ್ತಿರುವ ರೈತರ ಬೆಳೆ ಹಾನಿಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ನಿರೀಕ್ಷೆಯನ್ನು ರೈತರು ಇಟ್ಟುಕೊಂಡಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ನಿರೀಕ್ಷೆ: ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ, ಮಹದಾಯಿ ಕಾಮಗಾರಿಗೆ ಹಣ ಮೀಸಲು, ಬೆಣ್ಣೆಹಳ್ಳದ 1,246 ಕೋಟಿ ರೂಪಾಯಿ ಡಿಪಿಆರ್ ಆಗಿದ್ದು, ಅದನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಇದಲ್ಲದೆ ನವಲಿ ಏತನೀರಾವರಿ ಯೋಜನೆಗೆ 10 ಸಾವಿರ ಕೋಟಿ ರೂ. ಘೋಷಣೆ ಮಾಡಬೇಕು. ಬಸವಣ್ಣ ಏತ ನೀರಾವರಿ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವ ನೀರಿಕ್ಷೆಯನ್ನು ಹೊಂದಿದ್ದಾರೆ. ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹಾಗೂ ಕಳಸಾ ಬಂಡೂರಿ ಹೋರಾಟಗಾರ ಗುರು ರಾಯನಗೌಡರ ಒತ್ತಾಯಿಸಿದ್ದಾರೆ.
ಬಜೆಟ್ ಮೇಲೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನಿರೀಕ್ಷೆಗಳು: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ರಾಜ್ಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅದಲ್ಲದೇ ರಾಜ್ಯ ಸರ್ಕಾರಕ್ಕೆ ಬೇಡಿಕೆಗಳ ಪಟ್ಟಿಯನ್ನು ರವಾನೆ ಮಾಡಿದ್ದು, ಅದರಲ್ಲಿ ಪ್ರಮುಖವಾಗಿ, ಹುಬ್ಬಳ್ಳಿ- ಧಾರವಾಡ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದ ಉನ್ನತೀಕರಣ, ಕೃಷಿ ಉತ್ಪನಗಳ ಉತ್ಪಾದನಾ ಕ್ಲಸ್ಟರ್ ಸ್ಥಾಪನೆ, ಎಪಿಎಂಸಿಯಲ್ಲಿ ಮೂಲ ಸೌಕರ್ಯ, ಟ್ರಕ್ ಟರ್ಮಿನಲ್, ಸಾಪ್ಟ್ ವೇರ್ ಟೆಕ್ನಾಲಜಿ ಮಾದರಿಯಲ್ಲಿ ಸ್ಟಾರ್ಟ್ ಅಪ್ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು ಎಂಬ ಬೇಡಿಕೆಗಳನ್ನು ಇಟ್ಟಿದೆ.
ಇದಲ್ಲದೇ ಧಾರವಾಡದ ಬೃಹತ್ ಜವಳಿ ಪಾರ್ಕ್ ಹಾಗೂ ಮಾವಿನ ಹಣ್ಣಿನ ಶಿಥಲೀಕರಣ ಘಟಕ ಸ್ಥಾಪನೆ, ಎಂಎಸ್ಎಂಇ ಘಟಕಗಳಿಗೆ ರಿಯಾಯಿತಿ, ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ವಾಣಿಜ್ಯ ನಗರಿಯ ಮೂಲ ಸೌಕರ್ಯಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಬಳಿಗಾರ ತಿಳಿಸಿದರು.
ಇದನ್ನೂ ಓದಿ: ರಾಜ್ಯ ಬಜೆಟ್: ಬೆಳಗಾವಿ ಕಬ್ಬು ಬೆಳೆಗಾರರ ಬೇಡಿಕೆಗಳೇನು..?